
ಹೊಳೆನರಸೀಪುರ ಚೆನ್ನಾಂಬಿಕ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಶಾಸಕ ಎಚ್.ಡಿ. ರೇವಣ್ಣ ಉದ್ಘಾಟಿಸಿದರು.
ಹೊಳೆನರಸೀಪುರ: ಜೆಡಿಎಸ್ ಪಕ್ಷದ ಸಾಧನೆಯನ್ನು ಮರೆಮಾಚಿ ನಮ್ಮ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ತರಲು ಕಾಂಗ್ರೆಸ್ ಪಕ್ಷ ಹುನ್ನಾರ ನಡೆಸುತ್ತಿದೆ. ಎಚ್.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಆಡಳಿತದಲ್ಲಿ ರಾಜ್ಯಕ್ಕೆ ನೀಡಿರುವ ಕೊಡುಗೆಯನ್ನು ದಾಖಲೆ ಸಹಿತ ಜನರ ಮುಂದಿಡಲು ಜನವರಿ 24ರಂದು ಹಾಸನದಲ್ಲಿ ಪಕ್ಷದ ಸಮಾವೇಶ ನಡೆಸಲಾಗುತ್ತಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.
ಸೋಮವಾರ ಚೆನ್ನಾಂಬಿಕ ಕಲ್ಯಾಣ ಮಂಟಪದಲ್ಲಿ ಕಿಕ್ಕಿರಿದು ತುಂಬಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ದೇವೇಗೌಡರು ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ನೇತೃತ್ವದಲ್ಲಿ ಕರೆದಿರುವ ಸಮಾವೇಶದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿ ಆಹ್ವಾನಿಸಿದರು.
ಇಲ್ಲಿಂದ ಮೈಸೂರಿಗೆ ಇದ್ದ ರೈಲ್ವೆ ಸಂಪರ್ಕವನ್ನು ನಿಲ್ಲಿಸುವ ಪ್ರಯತ್ನ ನಡೆದಾಗ ಅದನ್ನು ತಡೆದ ದೇವೇಗೌಡರು ಮೊದಲಿದ್ದ ಮೀಟರ್ ಗೇಜ್ ತೆಗೆದು ಬ್ರಾಡ್‌ಗೇಜ್ ಮಾಡಿದರು. ಹಾಸನ ಬೆಂಗಳೂರು ರೈಲ್ವೆ ಮಾರ್ಗ ಮಾಡಿಸಿದರು. ಹಾಸನದಲ್ಲಿ ಕೈಗಾರಿಕಾ ಪ್ರದೇಶ ಮಾಡಿದ್ದರಿಂದ ಜಿಲ್ಲೆಯ 1 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಸಿಗುವಂತಾಯಿತು. ಬೇಲೂರು ಬಿಳಿಕರೆ ರಸ್ತೆ ಆಯಿತು. ಚನ್ನರಾಯಪಟ್ಟಣದಿಂದ ಮಾಕುಟ್ಟ ರಸ್ತೆ ಕಾಮಗಾರಿ ಸದ್ಯದಲ್ಲೇ ಪ್ರಾರಂಭ ಆಗಲಿದೆ. ಇದೆಲ್ಲಾ ದೇವೇಗೌಡರ ಕೊಡುಗೆ ಎಂದು ಮಾಹಿತಿ ನೀಡಿದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಶಿಕ್ಷಣ ಇಲಾಖೆಗೆ ₹1,500 ಕೋಟಿ ಹಣ ನೀಡಿ ಶಾಲಾ ಕಾಲೇಜುಗಳನ್ನು ತೆರೆದು ಹಳ್ಳಿಮಕ್ಕಳ ಸ್ನಾತಕೋತರ ಪದವಿ ಕನಸನ್ನು ನನಸಾಗಿಸಿದರು. ಅನೇಕ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿ ಗ್ರಾಮೀಣ ಪ್ರದೇಶದ ಜನರಿಗೂ ಅತ್ಯುತ್ತಮ ಚಿಕಿತ್ಸೆ ದೊರೆಯುವಂತಹ ವ್ಯವಸ್ಥೆ ಮಾಡಿದರು. ನಾನು ವಸತಿ ಸಚಿವನಾಗಿದ್ದಾಗ ತಾಲ್ಲೂಕಿಗೆ 1,500ಕ್ಕೂ ಹೆಚ್ಚು ಆಶ್ರಯ ಮನೆಗಳನ್ನು ನೀಡಿದೆ. ಸಾಲದಲ್ಲಿದ್ದ ಕೆಎಂಎಫ್ ಅನ್ನು ಅತ್ಯುತ್ತಮ ಸಂಸ್ಥೆಯಾಗಿ ಕಟ್ಟಿ ಬೆಳೆಸಿದೆ. ಈಗ ನೂರಾರು ಕೋಟಿ ಆಸ್ತಿಯನ್ನು ಕೆಎಂಎಫ್‌ಗಾಗಿ ಖರೀದಿಸಿದೆ ಎಂದರು.
ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು ಮಾತನಾಡಿ ದೇವೇಗೌಡರು 24ರಂದು ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದಾರೆ. ನಾವೆಲ್ಲರೂ ಸಮಾವೇಶದಲ್ಲಿ ಭಾಗವಹಿಸೋಣ. ನಾನಂತು ಹೊಳೆನರಸೀಪುರದಿಂದ ಎಷ್ಟು ಜನರು ಸಮಾವೇಶದಲ್ಲಿ ಭಾಗವಹಿಸುತ್ತಾರೋ ಅಷ್ಟೇ ಜನರನ್ನು ಅರಕಲಗೂಡು ತಾಲ್ಲೂಕಿನಿಂದ ಕರೆತರುತ್ತೇನೆ ಎಂದರು.
ವಕೀಲ ರಾಜಶೇಖರ್, ಪೂರ್ಣಚಂದ್ರ, ಕೃಷ್ಣೇಗೌಡ, ಎಚ್.ವೈ. ಚಂದ್ರಶೇಖರ್, ಮುತ್ತಿಗೆ ರಾಜೇಗೌಡ, ಶಾಂತರಾಜು, ಪುರಸಭೆ ಮಾಜಿ ಅಧ್ಯಕ್ಷ ಎ. ಶ್ರೀಧರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ, ಗಿರೀಶ್ ಮಾತನಾಡಿದರು. ಮುಖಂಡ ಉದ್ಯಮಿ ಟಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಆರ್.ಬಿ. ಪುಟ್ಟೇಗೌಡ ಕಾರ್ಯಕ್ರಮಕ್ಕೆ ಶುಭಕೋರಿದರು. ನಿವೃತ್ತ ಶಿಕ್ಷಕ ಜವರೇಗೌಡ ಕಾರ್ಯಕ್ರಮ ನಿರೂಪಿಸಿದರು.
ನಮ್ಮ ಪಕ್ಷದ ಕಾರ್ಯಕರ್ತರು ಮುಖಂಡರು ಪ್ರತಿ ಹೋಬಳಿಯಿಂದ 5 ಸಾವಿರ ಜನರನ್ನು ಸಮಾವೇಶಕ್ಕೆ ಕರೆತಂದು ದೇವೇಗೌಡರ ಮೇಲಿಟ್ಟಿರುವ ಅಭಿಮಾನ ನಂಬಿಕೆಯನ್ನು ಸಾಬೀತುಪಡಿಸಿಎಚ್.ಡಿ. ರೇವಣ್ಣ ಶಾಸಕ
‘ದರಖಾಸ್ತು ಜಮೀನು ನೀಡುತ್ತಿಲ್ಲ’ ಈಗಿನ ಸರ್ಕಾರ ದರಖಾಸ್ತು ಜಮೀನನ್ನು ರೈತರಿಗೆ ನೀಡುತ್ತಿಲ್ಲ. ಇದರಿಂದಾಗಿ ಹತ್ತಾರು ವರ್ಷಗಳಿಂದ ಉಳುಮೆ ಮಾಡಿದ ಭೂಮಿಯನ್ನು ಪಡೆದುಕೊಳ್ಳಲಾಗದೆ ರೈತರು ಪರಿತಪಿಸುತ್ತಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗೆ ಹಣ ನೀಡಲು ಸರ್ಕಾರ ಎಲ್ಲ ವಸ್ತುಗಳ ಬೆಲೆ ಜಾಸ್ತಿ ಮಾಡಿದೆ. ಹೊಳೆನರಸೀಪುರದಿಂದ ಚನ್ನರಾಯಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆಯೇ ಇಲ್ಲ. ಬರೀ ಗುಂಡಿಗಳೇ ಇದೆ. ನಾನು ಹೋರಾಟ ಮಾಡಿ ₹78 ಲಕ್ಷ ಹಣ ಬಿಡುಗಡೆ ಮಾಡಿಸಿ ತೇಪೆಹಚ್ಚುವ ಕೆಲಸ ನಡೆಯುತ್ತಿದೆ ಎಂದು ರೇವಣ್ಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.