ADVERTISEMENT

ಬರೀ ಹತ್ತು ಕೊಟ್ಟಿದ್ದಾರ? ಆಗಲ್ಲ ಇನ್ನೂ 5 ಬಸ್ ತರಿಸಿ: ಎಚ್.ಡಿ. ರೇವಣ್ಣ ಅಸಮಾಧಾನ

ರಾಜ್ಯೋತ್ಸವ ಸಿದ್ಧತಾ ಸಭೆಯಲ್ಲಿ ವಿಭಾಗೀಯ ವ್ಯವಸ್ಥಾಪಕರಲ್ಲಿ ರೇವಣ್ಣ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2023, 13:44 IST
Last Updated 21 ಅಕ್ಟೋಬರ್ 2023, 13:44 IST
ಹೊಳೆನರಸೀಪುರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಎಚ್.ಡಿ. ರೇವಣ್ಣ ಕನ್ನಡ ರಾಜ್ಯೋತ್ಸವ ಆಚರಣೆ ಸಿದ್ಧತಾ ಸಭೆ ನಡೆಸಿದರು. ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಗೋಪಾಲ್, ಮಹೇಂದ್ರ, ಸೋಮಲಿಂಗೇಗೌಡ, ಸಪ್ನಾ ಇದ್ದರು.
ಹೊಳೆನರಸೀಪುರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಎಚ್.ಡಿ. ರೇವಣ್ಣ ಕನ್ನಡ ರಾಜ್ಯೋತ್ಸವ ಆಚರಣೆ ಸಿದ್ಧತಾ ಸಭೆ ನಡೆಸಿದರು. ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಗೋಪಾಲ್, ಮಹೇಂದ್ರ, ಸೋಮಲಿಂಗೇಗೌಡ, ಸಪ್ನಾ ಇದ್ದರು.   

ಹೊಳೆನರಸೀಪುರ: ‘ಬರೀ ಹತ್ತು ಕೊಟ್ಟಿದ್ದಾರ? ಆಗಲ್ಲ ಇನ್ನೂ 5 ಬಸ್ ತರಿಸಿ...’ ಶನಿವಾರ ನಡೆದ ರಾಜ್ಯೋತ್ಸವ ಆಚರಣೆ ಸಿದ್ಧತಾ ಸಭೆಯ ಆರಂಭದಲ್ಲೇ ಸಾರಿಗೆ ಸಂಸ್ಥೆ ಹಾಸನ ವಿಭಾಗೀಯ ವ್ಯವಸ್ಥಾಪಕರ ಕಾರ್ಯವೈಖರಿ ಬಗ್ಗೆ ಶಾಸಕ ಎಚ್.ಡಿ. ರೇವಣ್ಣ ತೀವ್ರ ಅಸಮಾಧಾನಗೊಂಡ ವಿಧಾನ ಇದು.

ಸಭೆ ಪ್ರಾರಂಭವಾಗುತ್ತಿದಂತೆ, ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಪಾಪಾನಾಯಕ್ ಅವರಲ್ಲಿ, ‘ಹೊಸಬಸ್‍ಗಳು ಬಂದ್‍ವೇನ್ರಿ’ ಎಂದು ಪ್ರಶ್ನಿಸಿದರು. ‘ಹೌದು ಸಾರ್ ಹತ್ತು ಬಸ್‍ಗಳು ಬಂದಿದೆ’ ಎಂದಾಗ, ’ಏನು ಬರೀ ಹತ್ತು ಬಸ್ಸಾ, 20 ಬಸ್ ಕೊಡಿ ಎಂದು ಕೇಳಿದ್ದೆ’ ಎಂಬುದಾಗಿ ಅಸಮಾಧಾನ ಹೊರಹಾಕಿದರು.

ಬಳಿಕ ಹಾಸನ ವಿಭಾಗೀಯ ವ್ಯವಸ್ಥಾಪಕರಿಗೆ ಕರೆ ಮಾಡಿ, ‘ ಯಾಕ್ರಿ ಹತ್ತೇ ಬಸ್ ಕೊಟ್ಟಿದ್ದೀರಿ? ನನಗೆ ಅದೆಲ್ಲಾ ಗೊತ್ತಿಲ್ಲ, ಇನೈದು ಬಸ್ ಬೇಕೇ ಬೇಕು. ಗ್ರಾಮೀಣ ಪ್ರದೇಶದ ಮಕ್ಕಳು ಬಸ್‍ಗಳಿಲ್ಲದೆ ಪರದಾಡುತ್ತಿದ್ದಾರೆ. ಅನೇಕರು ಶಾಲಾ ಕಾಲೇಜಿಗೆ ಬರುವುದನ್ನೇ ಬಿಟ್ಟಿದ್ದಾರೆ. ಎಷ್ಟು ಹೇಳಿದರೂ ನೀವು ಬಸ್ ಕೊಡ್ತಿಲ್ಲ. ಹೀಗೆಲ್ಲಾ ಆದ್ರೆ ಸರಿ ಆಗಲ್ಲ. ಹೋರಾಟ ಮಾಡ್ತೀನಿ’ ಎಂದು ಗಟ್ಟಿಸಿ ಹೇಳಿದರು.

ADVERTISEMENT

ನೀರಾವರಿ ಇಲಾಖೆ ಅಧಿಕಾರಿಗಳಿಗೆ, ‘ ತಕ್ಷಣ ನಾಲೆಗಳಿಗೆ ನೀರು ಬಿಡಬೇಕು. ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿಗೆ ತೊಂದರೆ ಆಗುತ್ತಿದೆ. ನೀರು ಬಿಡದಿದ್ದರೆ ಪ್ರತಿಭಟನೆ ನಡೆಸುತ್ತೇನೆ’ ಎಂದು ಅವರನ್ನೂ ಎಚ್ಚರಿಸಿದರು. ಸರ್ಕಾರ ಕೊಬ್ಬರಿ, ತೆಂಗಿನಕಾಯಿಗೆ ಬೆಂಬಲಬೆಲೆ ನೀಡಿ ಖರೀದಿಸಬೇಕು. ಬರಪರಿಸ್ಥಿತಿ ಇದ್ದು ರೈತರಿಗೆ ಪರಿಹಾರ ನೀಡಬೇಕು. ರೈತರ ಪರಿಹಾರದ ವಿಷಯದಲ್ಲಿ ತಾರತಮ್ಯ ಮಾಡಿದರೆ, ಮುಷ್ಕರ ನನಗೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡ ರಾಜ್ಯೋತ್ಸವ ಆಚರಣೆ ಬಗ್ಗೆ ಸಲಹೆ ನೀಡಿದ ರೇವಣ್ಣ, ಪುರಸಭೆಯವರು ಸ್ವಚ್ಛತೆ, ಮೆರವಣಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸೂಚಿಸಿದರು. ಕೃಷಿ ಮತ್ತು ತೋಟಗಾರಿಕೆ  ಅಧಿಕಾರಿಗಳು ಇಲಾಖೆಯ ಪ್ರಗತಿ ಹಾಗೂ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಪ್ರದರ್ಶಿಸಬೇಕು ಎಂದರು.  ಸಾಧಕರನ್ನು ಸನ್ಮಾನಿಸಿ ಎಂದರು.

ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ತಾಲ್ಲೂಕು ಪಂಚಾಯಿತಿ ಇಒ ಗೋಪಾಲ್, ಬಿ.ಇ.ಒ ಸೋಮಲಿಂಗೇಗೌಡ, ಕೃಷಿ ಅಧಿಕಾರಿ ಸಪ್ನಾ, ಅಬಕಾರಿ ಇಲಾಖೆ ಅಧಿಕಾರಿ ಪಾಂಡುರಂಗ, ಕಂದಾಯ ಇಲಾಖೆಯ ರೂಪೇಶ್, ಲೋಕೇಶ್, ಸುಜತ್ ಅಲಿ, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.