ADVERTISEMENT

ಇತಿಮಿತಿ ಆಹಾರ ಸೇವಿಸಿ, ವ್ಯಾಯಾಮ ಮಾಡಿ: ಡಾ.ವೈ.ಎಸ್. ಶ್ರೀಮಂತ್‌ ಸಲಹೆ

ಹೃದ್ರೋಗ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ವೈ.ಎಸ್. ಶ್ರೀಮಂತ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 2:00 IST
Last Updated 23 ಜುಲೈ 2025, 2:00 IST
ಹಾಸನದ ರೆಡ್‌ಕ್ರಾಸ್‌ ಭವನದಲ್ಲಿ ಈಚೆಗೆ ನಡೆದ ಹೃದಯ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಡಾ.ಪ್ರಸನ್ನ ನರಸಿಂಹರಾವ್‌ ಉದ್ಘಾಟಿಸಿದರು
ಹಾಸನದ ರೆಡ್‌ಕ್ರಾಸ್‌ ಭವನದಲ್ಲಿ ಈಚೆಗೆ ನಡೆದ ಹೃದಯ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಡಾ.ಪ್ರಸನ್ನ ನರಸಿಂಹರಾವ್‌ ಉದ್ಘಾಟಿಸಿದರು   

ಹಾಸನ: ಪ್ರತಿಯೊಬ್ಬರು ಸಣ್ಣ ವಯಸ್ಸಿನಿಂದ ಇತಿಮಿತಿ ಆಹಾರ ಕ್ರಮ, ವ್ಯಾಯಾಮವನ್ನು ಅನುಸರಿಸಿದರೆ ಸಹಜವಾದ ಮನುಷ್ಯನ ಜೈವಿಕ ಆಯಸ್ಸನ್ನು ಆರೋಗ್ಯವಾಗಿ ಪೂರ್ಣಗೊಳಿಸಲು ಸಾಧ್ಯ ಎಂದು ಬೇಲೂರು ತಾಲ್ಲೂಕಿನ ಯಮಸಂಧಿ ಗ್ರಾಮದ ಹೃದ್ರೋಗ ತಜ್ಞ ಡಾ.ವೈ.ಎಸ್. ಶ್ರೀಮಂತ್ ತಿಳಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಹಾಸನ ಶಾಖೆಯಿಂದ ನಗರದ ರೆಡ್ ಕ್ರಾಸ್ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಹೃದ್ರೋಗ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯರ ದೇಹದ ರಕ್ತನಾಳದ ರಂಧ್ರವು ಕಡಿಮೆ ವ್ಯಾಸವಿದ್ದು, ಪಾಶ್ಚಿಮಾತ್ಯ ದೇಶಗಳ ಜನರ ರಕ್ತನಾಳ ರಂಧ್ರವು ಹೆಚ್ಚಿನ ವ್ಯಾಸ ಹೊಂದಿದೆ. ಭಾರತೀಯರಿಗೆ ಕೊಬ್ಬಿನ ಅಂಶವು ಬೇಗ ರಕ್ತನಾಳದ ರಂಧ್ರವು ಮುಚ್ಚುವುದರಿಂದ ನಮ್ಮ ದೇಶದಲ್ಲಿ ಹೃದಯಾಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿವೆ ಎಂದು ತಿಳಿಸಿದರು.

ADVERTISEMENT

ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕಿ ಡಾ.ಎಂ.ಡಿ. ಕವಿತಾ ಮಾತನಾಡಿ, ತರಕಾರಿ, ಹಣ್ಣುಗಳನ್ನು ನಿತ್ಯದ ಜೀವನದಲ್ಲಿ ಹೆಚ್ಚು ಬಳಸಬೇಕು. ಸಕ್ಕರೆ, ಕೊಬ್ಬು ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಇತಿಮಿತಿಯಲ್ಲಿ ಬಳಸಬೇಕು ಎಂದು ಸಲಹೆ ನೀಡಿದರು.

ಹಾಸನ ಜನತೆ ಸಾಮಾನ್ಯವಾಗಿ ಮಾಂಸಪ್ರಿಯರು. ಕೆಂಪು ಮಾಂಸ, ಪೋರ್ಕ್ ಹಾಗೂ ಇತರೆ ಮಾಂಸಗಳಲ್ಲಿ ಅತಿ ಹೆಚ್ಚು ಕೊಬ್ಬಿನಾಂಶ ಇರುವುದರಿಂದ, ಇವುಗಳ ಸೇವನೆಯಿಂದ ಅತಿ ಹೆಚ್ಚು ಹೃದಯಘಾತ ಸಂಭವಿಸುತ್ತದೆ ಎಂದು ತಿಳಿಸಿದರು.

ಲಿವರ್ (ಪಿತ್ತಕೋಶ) ದೇಹದಲ್ಲಿ ಬಹು ಪ್ರಮುಖವಾದ ಅಂಗವಾಗಿದ್ದು, ಅದರಲ್ಲಿ ಶೇಖರಣೆಯಾಗುವ ಕೊಬ್ಬಿನಿಂದ ಅನೇಕ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಪಿತ್ತಕೋಶದ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರಕ್ರಮ ಹಾಗೂ ವ್ಯಾಯಾಮವನ್ನು ಅನುಸರಿಸಬೇಕೆಂದು ತಿಳಿಸಿದರು.

ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ, ರಾಷ್ಟ್ರೀಯ ಪ್ರಥಮ ಚಿಕಿತ್ಸೆ ತರಬೇತುದಾರ ಡಾ.ತೇಜಸ್ವಿ ಎಚ್.ಜೆ. ಮಾತನಾಡಿ ಸಿ.ಪಿ.ಆರ್ ವಿಧಾನಗಳನ್ನು ಬಳಸಿ ಹೃದಯಾಘಾತವಾದ ಸಂದರ್ಭದಲ್ಲಿ ಜೀವ ರಕ್ಷಣೆ ಮಾಡುವ ಬಗ್ಗೆ ತರಬೇತಿ ನೀಡಿದರು.

ಡಾ. ಪ್ರಸನ್ನ ಎನ್. ರಾವ್ ಉದ್ಘಾಟಿಸಿದರು. ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಮ್ಮಿಗೆ ಮೋಹನ್, ಉಪ ಸಭಾಪತಿ ಡಾ.ವೈ.ಎಸ್. ವೀರಭದ್ರಪ್ಪ, ಬೇಲೂರು ತಾಲ್ಲೂಕು ಸಭಾಪತಿ ವೈ.ಎಸ್. ಸಿದ್ದೇಗೌಡ, ಶಬ್ಬೀರ್ ಅಹ್ಮದ್, ಜಯೇಂದ್ರ ಕುಮಾರ್, ಡಾ.ಶೈಲಜಾ ಪ್ರಸನ್ನ ಎನ್ ರಾವ್, ಡಾ.ಭಾರತಿ ರಾಜಶೇಖರ್, ಎಸ್.ಎಸ್. ಪಾಷಾ, ಎಚ್.ಡಿ ಕುಮಾರ್, ಡಾ. ರಂಗಲಕ್ಷ್ಮಿ, ಡಾ. ಸಾವಿತ್ರಿ, ಸುಬ್ಬುಸ್ವಾಮಿ, ಕೆ.ಟಿ. ಜಯಶ್ರೀ, ಜಯಪ್ರಕಾಶ್, ಗಿರೀಶ್, ಗಿರಿಗೌಡ, ಭೀಮ್ ರಾಜ್, ಮಮತಾ ಪಾಟೀಲ್, ಧನಂಜಯ, ಜಿಯಾವುಲ್ಲಾ, ಆರೀಫ್, ಅವಿನಾಶ್ ಇತರರಿದ್ದರು. ಉದಯ್‌ಕುಮಾರ್ ಬಿ.ಆರ್. ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.