ಹೆತ್ತೂರು: ಮಲೆನಾಡು ಭಾಗವಾದ ಹೆತ್ತೂರು, ಯಸಳೂರು ಹೋಬಳಿಯಲ್ಲಿ ಶನಿವಾರ ದಿನವಿಡೀ ಮಳೆಯಾಗಿದ್ದು, ಜನಜೀವನ ತತ್ತರಗೊಂಡಿತು.
ಮೂರು ದಿನದಿಂದ ಆರ್ಭಟಿಸುತ್ತಿರುವ ಮಳೆ, ಬೆಳಿಗ್ಗೆ ತನಕ ಎಡೆಬಿಡದೇ ಸುರಿದು ಅಪಾರ ಹಾನಿ ಉಂಟು ಮಾಡಿದೆ. ಬೆಳಿಗ್ಗೆ ಕೆಲ ಕಾಲ ಬಿಡುವು ನೀಡಿದ್ದ ಮಳೆ, ಮಧ್ಯಾಹ್ನ 2 ಗಂಟೆಯ ಬಳಿಕ ಪ್ರಾರಂಭವಾಗಿ ನಿರಂತರ ಸುರಿಯಿತು.
ಜಾಲ್ಸೂರು, ಜನ್ನಪುರ ರಸ್ತೆ, ಬಿಸ್ಲೆ ಘಾಟಿಯಲ್ಲಿ ಕಿ.ಮೀ.ಯಷ್ಟು ದೂರ ಮಳೆ ನೀರು ಹಳ್ಳದಂತೆ ಹರಿದಿದ್ದು, ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡುವಂತಾಗಿತ್ತು.
ಶಾಲೆ ಬಿಡುವ ವೇಳೆ ಧಾರಾಕಾರ ಮಳೆಯಾಗಿದ್ದರಿಂದ ವಿದ್ಯಾರ್ಥಿಗಳು ಮನೆಗೆ ತೆರಳಲು ಪರದಾಡಿದರು. ಎರಡೇ ದಿನದಲ್ಲಿ ಹೇಮಾವತಿ ನದಿ ಸೇರಿ ಎಲ್ಲ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.
ಗಣೇಶ ಚತುರ್ಥಿಯ ನಾಲ್ಕನೇ ದಿನವಾಗಿದ್ದರಿಂದ ಹೋಬಳಿಯ ಹಲವೆಡೆ ಗಣೇಶ ವಿಸರ್ಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ರಭಸದ ಮಳೆಯಿಂದ ಗಣೇಶ ವಿಸರ್ಜನೆಗೂ ಅಡ್ಡಿಯಾಗಿತ್ತು. ತಡರಾತ್ರಿಯವರೆಗೂ ವಿಸರ್ಜನಾ ಕಾರ್ಯ ನಡೆಯಿತು.
ಹೋಬಳಿಯ ಪಟ್ಲಾ ಗ್ರಾಮದಲ್ಲಿ ಈ ವರ್ಷ 290 ಸೆಂ.ಮೀ. ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.