ಅರಕಲಗೂಡು ತಾಲ್ಲೂಕು ಅರೇಮಾದನಹಳ್ಳಿ ಬಳಿ ಹೇಮಾವತಿ ಬಲ ಮೇಲ್ದಂಡೆ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿದ ಶಾಸಕ ಎ. ಮಂಜು ನಾಲೆಯಲ್ಲಿ ನೀರು ದುಮ್ಮಿಕ್ಕಿ ಹರಿಯುವುದನ್ನು ವೀಕ್ಷಿಸಿದರು
ಅರಕಲಗೂಡು: ಹೇಮಾವತಿ ಬಲ ಮೇಲ್ದಂಡೆ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ನಾಲಾ ಅಚ್ಚುಕಟ್ಟು ಪ್ರದೇಶದ ರೈತರು ನೀರು ಬಳಸಿಕೊಂಡು ಉತ್ತಮ ಬೆಳೆ ಬೆಳೆದು ತಮ್ಮ ಆರ್ಥಿಕ ಸ್ಥಿತಿ ಉತ್ತಮ ಪಡಿಸಿಕೊಳ್ಳುವಂತೆ ಶಾಸಕ ಎ.ಮಂಜು ತಿಳಿಸಿದರು.
ತಾಲ್ಲೂಕಿನ ಅರೇಮಾದನಹಳ್ಳಿ ಗ್ರಾಮದ ಬಳಿ ಶನಿವಾರ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿ, ಎರಡು ದಿನಗಳ ಹಿಂದೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಬಲ ಮೇಲ್ದಂಡೆ ನಾಲೆ 56 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ತಾಲ್ಲೂಕಿನಲ್ಲಿ 12,430 ಎಕರೆ, ಹೊಳೆನರಸೀಪುರ ತಾಲ್ಲೂಕಿನಲ್ಲಿ 28,200 ಎಕರೆ, ಕೆ.ಆರ್.ನಗರ 10,700 ಎಕರೆ, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 4,670 ಎಕರೆ ಪ್ರದೇಶಗಳಿಗೆ ನೀರು ಹರಿಸಲಾಗುತ್ತಿದೆ. ಇದರಲ್ಲಿ 6 ಸಾವಿರ ಎಕರೆ ಭತ್ತ ಹಾಗೂ 50 ಸಾವಿರ ಎಕರೆ ಪ್ರದೇಶದ ಅರೇ ನೀರಾವರಿ ಬೆಳೆಗಳಿಗೆ ನೀರನ್ನು ಒದಗಿಸಲಾಗುತ್ತಿದೆ. ಬೇಸಿಗೆಯ ದಿನಗಳಲ್ಲಿ ಜನ, ಜಾನುವಾರುಗಳಿಗೆ ಅನುಕೂಲವಾಗುವಂತೆ ನಾಲಾ ವ್ಯಾಪ್ತಿಯಲ್ಲಿನ 210 ಕೆರೆಗಳನ್ನು ಭರ್ತಿ ಮಾಡಲಾಗುತ್ತಿದೆ. ರೈತರು ನೀರನ್ನು ಮಿತವಾಗಿ ಬಳಸಿ ಕೃಷಿ ಚಟುವಟಿಕೆಗಳನ್ನು ನಡೆಸಬೇಕು. ಎಂಜಿನಿಯರ್‌ಗಳು ನಾಲಾ ವ್ಯಾಪ್ತಿಯಲ್ಲಿ ನೀರು ಪೋಲಾಗದಂತೆ ಎಚ್ಚರವಹಿಸುವಂತೆ ತಿಳಿಸಿದರು.
ಎಂಜಿನಿಯರ್‌ಗಳಾದ ಸಿದ್ದರಾಜು, ಮಹೇಂದ್ರ, ರಾಜೇಶ್, ರವಿಕುಮಾರ್ ಸಂದರ್ಶ್, ಮುಖಂಡರಾದ ನರಸೇಗೌಡ, ವೆಂಕಟೇಶ್, ಗಾಂಧಿನಗರ ದಿವಾಕರ್, ಕೃಷ್ಣೇಗೌಡ, ಕುಮಾರಸ್ವಾಮಿ ಉಪಸ್ಥಿತರಿದ್ದರು.
‘ವೀರೇಂದ್ರ ಪಾಟೀಲ್ ಪ್ರತಿಮೆ ಸ್ಥಾಪನೆ ಆಶಯ’
‘ಹೇಮಾವತಿ ಜಲಾಶಯ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ್ ಅವರ ಶ್ರಮ ಮತ್ತು ಆಸಕ್ತಿ ಕಾರಣವಾಗಿದ್ದು ಜಲಾಶಯದ ಮುಂಭಾಗ ಅವರ ಪುತ್ಥಳಿ ಸ್ಥಾಪಿಸಬೇಕು ಎಂಬುದು ತಮ್ಮ ಬಹುದಿನಗಳ ಆಶಯ. ನಾನು ಸಚಿವನಾಗಿದ್ದಾಗ ಈ ಪ್ರಯತ್ನ ನಡೆಸಿದ್ದೆ. ಆದರೆ ಕೆಲವರು ಇದಕ್ಕೆ ತಡೆಯೊಡ್ಡಿದರು’ ಎಂದು ಶಾಸಕ ಎ. ಮಂಜು ಹೇಳಿದರು.
ಜಲಾಶಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಧನ ಸಹಾಯ ನೀಡಲು ನಿರಾಕರಿಸಿದಾಗ ಕರ್ನಾಟಕ ಲಾಟರಿ ಯೋಜನೆಯನ್ನು ಜಾರಿಗೆ ತಂದು ಅದರಲ್ಲಿ ಬಂದ ಹಣಕ್ಕೆ ಸರ್ಕಾರದ ಅನುದಾನ ನೀಡಿ ಹೇಮಾವತಿ ಜಲಾಶಯ ನಿರ್ಮಿಸುವ ಇಚ್ಚಾಶಕ್ತಿ ಪ್ರದರ್ಶಿಸಿದ್ದರು ಎಂದು ಸ್ಮರಿಸಿದರು. ಮಾಜಿ ನೀರಾವರಿ ಸಚಿವ ಎಚ್.ಎನ್. ನಂಜೇಗೌಡರು ಮೂಲ ನಕ್ಷೆಯಲ್ಲಿ ಇಲ್ಲದಿದ್ದರೂ ತಮ್ಮ ಇಚ್ಚಾಶಕ್ತಿ ಮೂಲಕ ಬಲ ಮೇಲ್ದಂಡೆ ನಾಲಾ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದು ಈ ಮಹನೀಯರನ್ನು ನಾವು ಸ್ಮರಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.