ADVERTISEMENT

ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಹೆಸರಲ್ಲಿ ವಂಚನೆ| ಭಾರಿ ಭೂಹಗರಣ,ತನಿಖೆಗೆ ತಂಡ

ಹೇಮಾವತಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 20:01 IST
Last Updated 12 ಜುಲೈ 2019, 20:01 IST
   

ಸಕಲೇಶಪುರ: ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಹೆಸರಿನಲ್ಲಿ, ತಾಲ್ಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಹಗರಣವೊಂದು ನಡೆದಿರುವ ಆರೋಪ ಕೇಳಿಬಂದಿದೆ. ತನಿಖೆಗಾಗಿ ಜಿಲ್ಲಾಧಿಕಾರಿ ತಂಡವೊಂದನ್ನು ರಚಿಸಿದ್ದಾರೆ.

350ಕ್ಕೂ ಹೆಚ್ಚು ನಕಲಿ ಓಎಂ (ಅಧಿಕೃತ ಜ್ಞಾಪನಾ) ಮಂಜೂರಾತಿ ಆದೇಶ ಪತ್ರಗಳ ಮೂಲಕ, ಹೇಮಾವತಿ ಜಲಾಶಯ ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿ ಕಚೇರಿಯಿಂದಲೇ ತಾಲ್ಲೂಕಿನಾದ್ಯಂತ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲಾಗಿದೆ. ಸಾಗುವಳಿ ಚೀಟಿ ನೀಡಿ, ಮ್ಯುಟೇಷನ್ ಆಗಿ ಪಹಣಿಗೂ ಸಹ ದಾಖಲಾಗಿದೆ. ಇನ್ನೂ ವಿಶೇಷ ಎಂದರೆ ಯಾವ ನಕಲಿ ಸಂತ್ರಸ್ತರ ಹೆಸರಿಗೆ ಮಂಜೂರಾತಿ ಆಗಿತ್ತೋ ಅವರಿಂದ ಶೇ 90 ರಷ್ಟು ಭೂಮಿ ಮಧ್ಯವರ್ತಿಗಳ ಮೂಲಕ ಈಗಾಗಲೆ ಮಾರಾಟವೂ ಆಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿರುವುದು ಕಂಡುಬಂದಿದ್ದರಿಂದ, ಹಾಸನ ಉಪವಿಭಾಗಾಧಿಕಾರಿ ಡಾ.ನಾಗರಾಜ್‌, ಸಕಲೇಶಪು ರದ ಉಪ ವಿಭಾಗಾಧಿಕಾರಿ ಕವಿತಾ ರಾಜಾರಾಂ ಹಾಗೂ ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ಗಿರೀಶ್‍ ನಂದನ್‍ ಅವರನ್ನು ಒಳಗೊಂಡ ತನಿಖಾ ತಂಡವನ್ನು ಜಿಲ್ಲಾಧಿಕಾರಿ ಅಕ್ರಂ ಪಾಷಾ ರಚಿಸಿದ್ದಾರೆ.

ADVERTISEMENT

ತನಿಖೆಯನ್ನು ಚುರುಕುಗೊಳಿಸಿರುವ ತಂಡ, ಕಳೆದ ಎರಡು ದಿನಗಳಿಂದ ಮಿನಿ ವಿಧಾನಸೌಧದಲ್ಲಿ ಕಡತಗಳ ಪರಿಶೀಲನೆ ನಡೆಸುತ್ತಿದೆ. ಮುಳುಗಡೆ ಸಂತ್ರಸ್ತರಿಗೆ, ಹಾಸನದ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿ (ಪುನರ್ವಸತಿ)ಯಿಂದ 2015 ರಿಂದ ನೀಡಲಾಗಿರುವ ಸಾವಿರಾರು ಮಂಜೂರಾತಿ ಆದೇಶ ಪತ್ರಗಳ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭೂಮಿ ಮಂಜೂರಾತಿ ವೇಳೆ ವಿಶೇಷ ಭೂಸ್ವಾಧೀನಾಧಿಕಾರಿಗಳಾಗಿದ್ದ ಬಿ.ಎ. ಜಗದೀಶ್‌ ಹಾಗೂ ರವಿಚಂದ್ರ ನಾಯಕ್‌ ಅವರನ್ನೂ ತನಿಖಾ ತಂಡವು ವಿಚಾರಣೆಗೆ ಒಳಪಡಿಸಿದೆ. ಭೂಮಿ ಮಂಜೂರಾತಿಗೆ ಹಾಜರುಪಡಿಸಿರುವ ಮುಳುಗಡೆ ಪ್ರಮಾಣಪತ್ರಗಳ ನೈಜತೆಯನ್ನು ತಿಳಿದುಕೊಳ್ಳಲು ಆಯಾ ತಾಲ್ಲೂಕುಗಳ ತಹಶೀಲ್ದಾರ್‌ ಅವರಿಂದ ಮಾಹಿತಿ ಕಲೆಹಾಕಿದ್ದಾರೆ. ಒಂದು ಮುಳುಗಡೆ ಪ್ರಮಾಣಪತ್ರಕ್ಕೆ ಅನೇಕ ಸಲ ಭೂಮಿ ಮಂಜೂರಾಗಿದೆಯೇ ಎಂಬುದನ್ನು ಪತ್ತೆಹಚ್ಚುವ ಕೆಲಸವನ್ನು ತನಿಖಾ ತಂಡ ಮಾಡುತ್ತಿದೆ ಎಂದು ತಿಳಿದುಬಂದಿದೆ.

ಹೇಮಾವತಿ ಯೋಜನೆಗಾಗಿ 1969 ರಿಂದ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಶೇ 95ರಷ್ಟು ಸಂತ್ರಸ್ತರಿಗೆ 1980–85ರ ಒಳಗಾಗಿ ಬದಲಿ ಭೂಮಿ ನೀಡಲಾಗಿದೆ. ಆದರೂ ಈಗಲೂ ಪದೇ ಪದೇ ಭೂಮಿ ಮಂಜೂರಾತಿ ಕೋರಿದ ಮನವಿಗಳು ಬರುತ್ತಿವೆ. ಮಂಜೂರಾದ ಜಮೀನನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧನೆ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಈಗಾಗಲೆ ಬದಲಿ ಜಮೀನನ್ನು ಪಡೆದುಕೊಂಡಿದ್ದವರ ಹೆಸರಿನಲ್ಲಿ, ಮತ್ತೊಮ್ಮೆ, ಮಗದೊಮ್ಮೆ ಮುಳುಗಡೆ ಸರ್ಟಿಫಿಕೇಟ್‌ಗಳನ್ನು ಅವರ ಹೆಸರಿನಲ್ಲಿಯೇ ಮಧ್ಯವರ್ತಿಗಳು ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಮೂರಕ್ಕಿಂತ ಹೆಚ್ಚು ಬಾರಿ ಮಂಜೂರಾತಿ ನೀಡಿ, ಖಾತೆ ಬದಲಾವಣೆ ಆದ ನಂತರ ಕ್ರಯ ವ್ಯವಹಾರದ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಒಬ್ಬ ಸಂತ್ರಸ್ತರ ಹೆಸರಿಗೆ ಎರಡು ಮೂರು ಬಾರಿ ಭೂಮಿ ಮಂಜೂರಾತಿ ಮಾಡಿರುವ ಬಗ್ಗೆ ‘ಪ್ರಜಾವಾಣಿ’ ಈ ಹಿಂದೆ ವರದಿ ಪ್ರಕಟಿಸಿತ್ತು.

ತನಿಖೆ ಪ್ರಗತಿಯಲ್ಲಿ

ತಮ್ಮನ್ನೂ ಒಳಗೊಂಡಂತೆ ತನಿಖಾ ತಂಡ ರಚನೆಯಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಹಾಸನ ಉಪವಿಭಾಗಾಧಿಕಾರಿ ಡಾ. ನಾಗರಾಜ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.