ADVERTISEMENT

ಹೇಮೆಯಿಂದ ದಾಖಲೆ ಹೊರ ಹರಿವು

ಜಲಾಶಯದ ಒಳ ಹರಿವಿನ ಪ್ರಮಾಣ 90 ಟಿಎಂಸಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 10:55 IST
Last Updated 30 ಆಗಸ್ಟ್ 2018, 10:55 IST
ಹೇಮಾವತಿ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವ ದೃಶ್ಯ.
ಹೇಮಾವತಿ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವ ದೃಶ್ಯ.   

ಹಾಸನ : ಹೇಮಾವತಿ ಜಲಾಶಯದ ಇತಿಹಾಸದಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ನೀರು ಹೊರ ಬಿಡಲಾಗಿದ್ದು, ದಾಖಲೆ ನಿರ್ಮಾಣವಾಗಿದೆ.

ಜುಲೈ 15 ರಿಂದ ಆಗಸ್ಟ್ 28ರ ವರೆಗೆ 45.41 ಟಿಎಂಸಿ ನದಿಗೆ ಹಾಗೂ 15.64 ಟಿಎಂಸಿ ನೀರನ್ನು ನಾಲೆಗೆ ಬಿಡಲಾಗಿದೆ. 37.103 ಟಿಎಂಸಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಪ್ರಸ್ತುತ 35.32 ಟಿಎಂಸಿ ನೀರಿದೆ.

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಎರಡು ತಿಂಗಳಲ್ಲಿ 310 ಟಿಎಂಸಿ ನೀರು ಹರಿದಿದ್ದು, ಅದರಲ್ಲಿ ಹೇಮಾವತಿ ನದಿಯ 45 ಟಿಎಂಸಿ ನೀರು ಸೇರಿದೆ.ಜಲಾಶಯ ನಿರ್ಮಾಣವಾದ 40 ವರ್ಷಗಳಲ್ಲಿ ಎರಡು ತಿಂಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರು ಹೊರ ಹೋಗಿಲ್ಲ.

ಕೊಡಗು, ಸಕಲೇಶಪುರ, ಮೂಡಿಗೆರೆ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸರಾಸರಿ 8 ರಿಂದ 9 ಸಾವಿರ ಕ್ಯುಸೆಕ್ ಇದ್ದ ಒಳ ಹರಿವು, ಪ್ರಸ್ತುತ 7 ಸಾವಿರ ಕ್ಯುಸೆಕ್‌ಗೆ ಇಳಿದಿದೆ.

‘ಇದೇ ರೀತಿ ಮಳೆ ಮುಂದುವರಿದರೆ ವರ್ಷಾಂತ್ಯಕ್ಕೆ ಅಂದಾಜು 60 ಟಿಎಂಸಿ ನೀರು ಹೊರ ಹೋಗುವ ಸಾಧ್ಯತೆ ಇದೆ’ ಎಂದು ಅಣೆಕಟ್ಟೆ ಅಧಿಕಾರಿಗಳು ತಿಳಿಸಿದರು .

ADVERTISEMENT

2018ರ ಜುಲೈ 15 ರಿಂದ ಈ ವರೆಗೆ 90 ಟಿಎಂಸಿ ನೀರು ಜಲಾಶಯಕ್ಕೆ ಬಂದಿದ್ದು, ನಾಲೆ ಮತ್ತು ನದಿಗೆ ಹರಿಸಲಾಗಿದೆ.

ಐದಾರು ವರ್ಷಗಳಿಂದ ಮಳೆಯಿಲ್ಲದೆ ಭತ್ತ, ಕಬ್ಬು ಸೇರಿದಂತೆ ಇತರೆ ಬೆಳೆಗಾರರು ಕಂಗಾಲಾಗಿದ್ದರು. ಆದರೆ, ಈ ಬಾರಿ ಜಲಾನಯನ ಪ್ರದೇಶವಾದ ಸಕಲೇಶಪುರ ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಉತ್ತಮವಾಗಿ ಮಳೆ ಸುರಿದಿದ್ದು, ಬೃಹತ್ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.

ಹಾಗಾಗಿ ಹೇಮಾವತಿ ಬಲದಂಡೆ, ಎಡದಂತೆ ನಾಲೆಗೆ ನೀರು ಹರಿಸಲಾಗುತ್ತಿದೆ. ಎರಡು ತಿಂಗಳಲ್ಲಿ 15.64 ಟಿಎಂಸಿ ನೀರು ನಾಲೆ ಸೇರಿದೆ. ಇದರಿಂದ ಅರಕಲಗೂಡು, ಹೊಳೆನರಸೀಪುರ, ತುಮಕೂರು, ಮೈಸೂರು ಭಾಗದ ಕೆರೆಕಟ್ಟೆಗಳಿಗೆ ಅನುಕೂಲವಾಗಿದೆ. ಹೇಮಾವತಿ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಿಂದ ಈ ವರ್ಷ ಜುಲೈ 15ಕ್ಕೆ ಮೊದಲೇ ಹೇಮೆ ಒಡಲು ಭರ್ತಿಯಾಯಿತು. ಮಳೆ ಹೆಚ್ಚಾಗುವ ಮುನ್ಸೂಚನೆ ಅರಿತ ಅಧಿಕಾರಿಗಳು ಜುಲೈ 15 ರಂದು 16 ಸಾವಿರ ಕ್ಯುಸೆಕ್ ನೀರನ್ನು ಕೆಆರ್‌ಎಸ್‌ಗೆ ಹರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.