ADVERTISEMENT

ಹೆತ್ತೂರು: ಅದ್ದೂರಿ ಗಣೇಶ ವಿಸರ್ಜನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 1:59 IST
Last Updated 19 ಸೆಪ್ಟೆಂಬರ್ 2025, 1:59 IST
ಹೆತ್ತೂರು ಗಣಪತಿ ಸೇವಾ ಸಮಿತಿ ವತಿಯಿಂದ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳ ಅದ್ದೂರಿ ಮೆರವಣಿಗೆ ಗುರುವಾರ ನಡೆಯಿತು.
ಹೆತ್ತೂರು ಗಣಪತಿ ಸೇವಾ ಸಮಿತಿ ವತಿಯಿಂದ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳ ಅದ್ದೂರಿ ಮೆರವಣಿಗೆ ಗುರುವಾರ ನಡೆಯಿತು.   

ಹೆತ್ತೂರು: ಇಲ್ಲಿನ ಗಣಪತಿ ಸೇವಾ ಸಮಿತಿ ವತಿಯಿಂದ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಪ್ರತಿಷ್ಠಾಪಿಸಿದ್ದ 130 ನೇ ವರ್ಷದ ಗೌರಿ-ಗಣೇಶ ಮೂರ್ತಿಗಳ ಮೆರವಣಿಗೆ ಗುರುವಾರ ಅದ್ದೂರಿಯಾಗಿ ನಡೆಯಿತು.

ಗಣೇಶ ಚರ್ತರ್ಥಿಯಂದು ಪ್ರತಿಷ್ಠಾಪಸಿದ್ದ ಗೌರಿ, ಗಣೇಶ ಮೂರ್ತಿಗೆ ಅಂದಿನಿಂದ ವಿಶೇಷ ಪೂಜೆ, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಸರ್ಜನಾ ಮಹೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಗಣಪತಿ ಮಹಾ ಮಂಗಳಾರತಿ ಸೇರಿದಂತೆ ಧಾರ್ಮಿಕ ವಿಧಿಗಳೊಂದಿಗೆ ಪೂಜೆ ನೆರವೇರಿಸಲಾಯಿತು. ಬಳಿಕ ಪ್ರಸಾದ ವಿನಿಯೋಗ ನಡೆಯಿತು.

ಪ್ರಮುಖ ರಸ್ತೆಗಳನ್ನು ಮಲೆನಾಡು ಶೈಲಿಯ ತೋರಣಗಳಿಂದ ಸಿಂಗರಿಸಲಾಗಿತ್ತು. ಬಣ್ಣ–ಬಣ್ಣದ ಹೂವು, ಹಾರಗಳಿಂದ ಅಲಂಕೃತಗೊಂಡಿದ್ದ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಲಾಯಿತು.

ADVERTISEMENT

ಹೆತ್ತೂರು ವೃತ್ತದಲ್ಲಿ ಜೆಸಿಬಿ ಮೂಲಕ ಗೌರಿ, ಗಣೇಶ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಯಿತು. ಗಣಪತಿ ಸೇವಾ ಸಮಿತಿ ವತಿಯಿಂದ ಅನ್ನಸಂತರ್ಪಣೆ ನಡೆಯಿತು.

ವಿಸರ್ಜನೆ ಮೆರವಣಿಗೆಯಲ್ಲಿ ನೂರಾರು ಯುವಕ, ಯುವತಿಯರು ಕೇಸರಿ ಶಾಲು ಹಾಕಿಕೊಂಡು ತಮಟೆ, ಡಿಜೆ, ಡ್ರಮ್‌ಸೆಟ್‌, ವಾದ್ಯಮೇಳದ ಸದ್ದಿಗೆ ಕುಣಿದು ಸಂಭ್ರಮಿಸಿದರು. ರಾತ್ರಿ ಐಗೂರು ರಸ್ತೆಯಲ್ಲಿರುವ ಕೆರೆಯಲ್ಲಿ ಮೂರ್ತಿಗಳ ವಿಸರ್ಜನೆ ಮಾಡಲಾಯಿತು.

ಸ್ಥಳೀಯರಾದ ಲಿಂಗರಾಜು ಹಾಗೂ ಸ್ನೇಹಿತರು, ನೀರಿನಲ್ಲಿ ತೆಪ್ಪದ ಮೇಲೆ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಿ ಗಮನ ಸೆಳೆದರು. ಸೇವಾ ಸಮಿತಿ ಅಧ್ಯಕ್ಷ ಹರ್ಷ, ಪದಾಧಿಕಾರಿಗಳಾದ ಮಿಥುನ್, ವಿವೇಕ್ ಗೌಡ, ಸಾಗರ್, ದೀಪಕ್, ಎಚ್.ಬಿ. ಗಿರೀಶ್, ಜೀವನ್, ನಂದೀಶಗೌಡ, ಸಂಚಿತ್, ಆನಂದ, ಮಹೇಶ್, ರಕ್ಷಿತ್, ಸುಚಿತ್, ಲಿಂಗರಾಜ್ ಹಾಡ್ಯ ಭಾಗವಹಿಸಿದ್ದರು. ಯಸಳೂರು ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.