ADVERTISEMENT

ಹೆತ್ತೂರು ಕೆಪಿಎಸ್ ಶಾಲೆ ವಾರ್ಷಿಕೋತ್ಸವ

ಹೆತ್ತೂರು ಕೆಪಿಎಸ್ ಶಾಲೆ ವಾರ್ಷಿಕೋತ್ಸವದಲ್ಲಿ ಶಾಸಕ ಸಿಮೆಂಟ್ ಮಂಜು

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 8:20 IST
Last Updated 23 ಜನವರಿ 2026, 8:20 IST
ಹೆತ್ತೂರಿನ ಕರ್ನಾಟಕ ಪಬ್ಲಿಕ್ ಶಾಲೆ ವಾರ್ಷಿಕೋತ್ಸವ ‘ಹೆತ್ತೂರು ಕೆ.ಪಿ.ಎಸ್. ಕಲಾ ವೈಭವ’ವನ್ನು
ವಿಜಯ ಅಂಗಡಿ ಉದ್ಘಾಟಿಸಿದರು
ಹೆತ್ತೂರಿನ ಕರ್ನಾಟಕ ಪಬ್ಲಿಕ್ ಶಾಲೆ ವಾರ್ಷಿಕೋತ್ಸವ ‘ಹೆತ್ತೂರು ಕೆ.ಪಿ.ಎಸ್. ಕಲಾ ವೈಭವ’ವನ್ನು ವಿಜಯ ಅಂಗಡಿ ಉದ್ಘಾಟಿಸಿದರು   

ಹೆತ್ತೂರು: ಇಲ್ಲಿನ ಸರ್ಕಾರಿ ಶಾಲೆ ಸ್ಥಾಪನೆಯಾಗಿ 96 ವರ್ಷಗಳು ಪೂರ್ಣಗೊಂಡಿರುವುದು ಗ್ರಾಮೀಣ ಶಿಕ್ಷಣ ಕ್ಷೇತ್ರದ ಮಹತ್ವದ ಮೈಲಿಗಲ್ಲು ಎಂದು ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ವಾರ್ಷಿಕೋತ್ಸವ ‘ಹೆತ್ತೂರು ಕೆ.ಪಿ.ಎಸ್. ಕಲಾ ವೈಭವ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಶಾಲೆಯಿಂದ ವಿದ್ಯಾಭ್ಯಾಸ ಪಡೆದ ಸಾವಿರಾರು ವಿದ್ಯಾರ್ಥಿಗಳು ದೇಶದಾದ್ಯಂತ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೆತ್ತೂರು ಕೆ.ಪಿ.ಎಸ್ ಶಾಲೆಯ ಹೆಸರನ್ನು ಎತ್ತಿ ಹಿಡಿದಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ ಅವರೂ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಎಂದು ತಿಳಿಸಿದರು.

ADVERTISEMENT

ವ್ಯಕ್ತಿ ಎಷ್ಟೇ ಉನ್ನತ ಹಂತಕ್ಕೆ ತಲುಪಿದರೂ, ತನ್ನ ಊರು ಮತ್ತು ಓದಿದ ಶಾಲೆಯನ್ನು ಮರೆಯಬಾರದು. ಈ ಭಾವನೆ ಹೃದಯದಲ್ಲಿ ಇಟ್ಟುಕೊಂಡವರು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ ಎಂದ ಅವರು, ಖಾಸಗಿ ಶಾಲೆಗಳಿಗೂ ಮಿಗಿಲಾಗಿ ಈ ಶಾಲೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಎಲ್ಲ ರಂಗಗಳಲ್ಲೂ ತಮ್ಮ ಪ್ರತಿಭೆ ಮೆರೆದಿದ್ದಾರೆ ಎಂದು ಶ್ಲಾಘಿಸಿದರು.

ಉದ್ಘಾಟಿಸಿ ಮಾತನಾಡಿದ ಹಾಸನ ಆಕಾಶವಾಣಿಯ ಕಾರ್ಯಕ್ರಮ ನಿವೃತ್ತ ಮುಖ್ಯಸ್ಥ ವಿಜಯ ಅಂಗಡಿ, ವಿದ್ಯಾರ್ಥಿಗಳ ಭವಿಷ್ಯ ಅವರದೇ ಕೈಯಲ್ಲಿದೆ. ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರೆ ಕೇವಲ ತಮಗಷ್ಟೇ ಅಲ್ಲ, ಊರು, ಓದಿದ ಶಾಲೆ ಹಾಗೂ ತಂದೆ–ತಾಯಿಗಳಿಗೂ ಕೀರ್ತಿ ತಂದುಕೊಡುತ್ತಾರೆ ಎಂದರು.

ಹಾಸನ ಮಹಾನಗರ ಪಾಲಿಕೆ ಎಂಜಿನಿಯರ್ ಕವಿತಾ ಕೆ.ಆರ್. ಮಾತನಾಡಿ, ಜೀವನವು ಯಾವುದೇ ತಿರುವುಗಳನ್ನು ತೆಗೆದುಕೊಂಡರೂ ವಿದ್ಯಾರ್ಥಿಗಳು ದಾರಿ ತಪ್ಪದೇ ತಮ್ಮ ಗುರಿಯತ್ತ ಸಾಗಬೇಕು. ಶಿಕ್ಷಣವೇ ಬದುಕಿನ ಬಲವಾದ ಅಸ್ತ್ರವಾಗಿದ್ದು, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಮೂಲಕ ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.

ಕೆಪಿಎಸ್ ಶಾಲೆ ಪ್ರಾಂಶುಪಾಲ ಮಂಜುನಾಥ್ ಬಿ.ಡಿ. ಮಾತನಾಡಿದರು. ಶಾಲಾ ಅಭಿವೃದ್ಧಿಗೆ ಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಜ್ಞಾನ ಸಮೃದ್ಧಿ ಚಾರಿಟಬಲ್ ಟ್ರಸ್ಟ್ ಪ್ರವರ್ತಕ ಕಾಮನಹಳ್ಳಿ ತೀರ್ಥಾನಂದ(ಕೀರ್ತಿ), ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್. ನಾಗರಾಜ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಕರಡಿಗಾಲ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೇಮಂತ್ ಕುಮಾರ್ ಎಚ್.ಎನ್., ಉಪ ಪ್ರಾಂಶುಪಾಲ ಭಾಸ್ಕರ್ ಬಿ., ಮುಖ್ಯ ಶಿಕ್ಷಕ ಸತೀಶ್ ಎಚ್.ಕೆ., ರಮೇಶ್ ಎಚ್.ಪಿ., ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಎಚ್.ಪಿ., ಆರೋಗ್ಯ ಇಲಾಖೆಯ ನಿವೃತ್ತ ಸಹಾಯಕ ಆಡಳಿತ ಅಧಿಕಾರಿ ಕುಮಾರಸ್ವಾಮಿ, ವಳಲಹಳ್ಳಿ ಅಶ್ವಥ್, ಅತ್ತಿಗನಹಳ್ಳಿ, ಸತೀಶ್ ಎ.ಸಿ., ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.