
ಬೇಲೂರು: ‘ಹಿಂದೂಗಳು ಧರ್ಮಾಭಿಮಾನದ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕಿದೆ. ಕೇಸರಿ ಶಾಲು ಹಾಕಿಕೊಂಡು, ಬಾವುಟ ಹಿಡಿದು, ತಿಲಕ ಇಟ್ಟುಕೊಂಡು, ಡಿ.ಜೆ. ಶಬ್ದಕ್ಕೆ ಹುಚ್ಚರಂತೆ ಕುಣಿದರೆ ಧರ್ಮ ಉಳಿಯದು. ಧರ್ಮ ಮನಸ್ಸಿನಲ್ಲಿ ಬರಬೇಕು. ಹಿಂದೂ ಧರ್ಮದ ಆಶಯಗಳನ್ನು ಅರ್ಥ ಮಾಡಿಕೊಂಡು ಮನಸ್ಸಿನಲ್ಲಿ ಧರ್ಮವನ್ನು ತುಂಬಿಕೊಳ್ಳಬೇಕು ಎಂದು ಯಸಳೂರಿನ ತೆಂಕಲಗೊಡು ಬೃಹನ್ಮಠದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಹಿಂದೂ ಸಮಾಜೋತ್ಸವ ಆಚರಣಾ ಸಮಿತಿ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ, ಶೋಭಾಯಾತ್ರೆಯಲ್ಲಿ ಅವರು ಮಾತನಾಡಿದರು. ‘ನಡೆ–ನುಡಿ, ಆಚಾರ–ವಿಚಾರದಲ್ಲಿ ಧರ್ಮವನ್ನು ಅನುಸರಿಸಿದ್ದರೆ ಮಾತ್ರ ಹಿಂದೂ ಧರ್ಮ ಉಳಿಯುತ್ತದೆ. ಹಿಂದೂ ಧರ್ಮದ ಈಗಿನ ಪರಿಸ್ಥಿತಿಯನ್ನು ನೋಡಿ ನೋವಾಗುತ್ತದೆ. ನಮಗೆ ಧರ್ಮದ ಅವಶ್ಯಕತೆ ಇದೆ. ಆದರೆ ಧರ್ಮಕ್ಕೆ ನಮ್ಮ ಅವಶ್ಯಕತೆ ಇಲ್ಲ’ ಎಂದರು.
ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳಗಳು ಭಾರತ ಮಾತೆಯ ಸೇವೆ ಮಾಡುತ್ತಿರುವ ಸಂಘಟನೆಗಳಾಗಿವೆ ಎಂದರು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹಿಪಾಲ್ ಮಾತನಾಡಿ, ‘ಜಗತ್ತಿನ ಅತ್ಯಂತ ಪ್ರಾಚೀನ ಧರ್ಮ ಹಿಂದೂ ಧರ್ಮ. ಯಾವುದೇ ವ್ಯಕ್ತಿಯಿಂದ ಸ್ಥಾಪನೆಯಾದ ಧರ್ಮವಲ್ಲ. ಜಗತ್ತಿನ ಸೃಷ್ಟಿಯ ಜೊತೆಗೆ ಬಂದ ಧರ್ಮವಾಗಿದೆ. ಈ ಧರ್ಮದಲ್ಲಿ ಹುಟ್ಟಿದವರು ಪುಣ್ಯವಂತರು. ಭಾರತದಲ್ಲಿ ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಅನ್ಯ ಧರ್ಮದ ಸಂಖ್ಯೆ ಏರುತ್ತಿದ್ದು, ಕೇವಲ 50 ವರ್ಷಗಳಲ್ಲಿ ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಲಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ವಿಷಯವನ್ನು ಹಿಂದೂಗಳು ಗಂಭೀರವಾಗಿ ಪರಿಗಣಿಸಬೇಕಿದೆ’ ಎಂದು ಹೇಳಿದರು.
ಮತಾಂತರಗೊಂಡು ಬಂದವರನ್ನು ಮನೆಯ ಒಳಗೆ ಕೂರಿಸಿ ಗೌರವ ನೀಡುವ ಹಿಂದೂಗಳು, ಗೌಡರೇ, ಸಾಹುಕಾರರೇ ಎಂದು ಬರುವವರನ್ನು ಮನೆಯ ಆಚೆ ನಿಲ್ಲಿಸಿ ಮಾತನಾಡಿಸುವ ಮನಸ್ಥಿತಿ ಬಿಡಬೇಕು ಎಂದರು.
ವಿವಿಧ ಕಲಾತಂಡಗಳೊಂದಿಗೆ ಸಂಜೆ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಶೋಭಾಯಾತ್ರೆಯು, ಚನ್ನಕೇಶವ ದೇಗುಲದ ಮುಂಭಾಗಕ್ಕೆ ತಲುಪಿತು. ಶಾಸಕ ಎಚ್.ಕೆ.ಸುರೇಶ್ ಹಾಗೂ ಪತ್ನಿ ಕೋಮಲಾ ಅವರು ದೇಶಿಯ ತಳಿಗಳ ಗೋ ಪೂಜೆ ಸಲ್ಲಿಸಿದರು. ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಇನ್‌ಸ್ಪೆಕ್ಟರ್ ರೇವಣ್ಣ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹಿಂದೂ ಸಮಾಜೋತ್ಸವ ಆಚಾರಣಾ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಬೆಣ್ಣೂರು ರೇಣುಕುಮಾರ್, ಗೌರವಾಧ್ಯಕ್ಷ ಕೆ.ಪಿ. ಶೈಲೇಶ್, ನಗರ ಘಟಕದ ಅಧ್ಯಕ್ಷ ಭರತ್, ಸಮಿತಿಯ ಉಪಾಧ್ಯಕ್ಷರಾದ ಬಿ.ಬಿ.ಶಿವರಾಜು, ಜಿ.ಕೆ.ಕುಮಾರ್, ಮೋಹನ್ ಕುಮಾರ್, ಶೋಭಾ ಗಣೇಶ್, ಎಚ್.ಎಂ. ದಯಾನಂದ್, ಡಾ.ನಾರಾಯಣ ಸ್ವಾಮಿ, ಶ್ರೀವತ್ಸ, ಸದಸ್ಯರಾದ ತೋ.ಚ.ಅನಂತ ಸುಬ್ಬರಾಯ, ಕೌರಿ ಸಂಜಯ್, ಶ್ರೀಹರಿ, ಮುರುಳಿ, ಹಿತೇಶ್ ಸಚ್ಚಾನೀಯ, ನಾಗೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.