
ಅರಸಿಕೆರೆ: ‘ಸನಾತನ ಹಿಂದೂ ಧರ್ಮದ ಪದ್ಧತಿಯನ್ನು ಅನುಸರಿಸದೇ ನಮ್ಮಲ್ಲಿ ಒಳಜಗಳ ಮಾಡಿಕೊಂಡು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಹಿಂದೂಗಳು ಒಗ್ಗಟ್ಟಾಗಿರಬೇಕು’ ಎಂದು ವಿದ್ಯಾಭಾರತಿ ಹಾಸನ ಜಿಲ್ಲಾ ಸಂಚಾಲಕ ಹೊ.ಸು.ರಮೇಶ್ ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಣಕಟ್ಟೆ ಹೋಬಳಿಯ ದೊಡ್ಡ ಮೆಟ್ಟಿ ಕುರ್ಕೆ ಗ್ರಾಮದಲ್ಲಿ ಸಮಾಜದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಮೇಲು–ಕೀಳು ಎನ್ನದೆ ಸ್ಪೃಶ–ಅಸ್ಪೃಶ್ಯ ಎನ್ನದೆ ಎಲ್ಲರನ್ನು ಸಮಾನರಾಗಿ ಕಾಣಬೇಕು ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಬೂದಿಹಾಳ ವಿರುಕ್ತಮಠದ ಶಶಿಶೇಖರ ಸಿದ್ಧಬಸವ ಸ್ವಾಮೀಜಿ ಮಾತನಾಡಿ, ‘ಇಂದು ನಾವು ಯಾವುದೇ ಭಯ,ಆತಂಕವಿಲ್ಲದೆ ಬದುಕು ಸಾಗುತ್ತಿದ್ದರೆ ಅದು ಈ ದೇಶವನ್ನು ಕಾಯುವ ಸೈನಿಕರಿಂದ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಮಾತ್ರ. ಹಾಗಾಗಿ ನಾವು ರಾಷ್ಟ್ರೀಯ ಸ್ವಯಂ ಸಂಘವನ್ನು ಗೌರವದಿಂದ ನಡೆಸಿಕೊಂಡು ನಮ್ಮ ಯುವ ಪೀಳಿಗೆಯನ್ನು ಅದರೊಟ್ಟಿಗೆ ಬೆಸೆದಾಗ ಮಾತ್ರ ಈ ದೇಶ ಗಟ್ಟಿ ಆಗುತ್ತದೆ’ ಎಂದು ಹೇಳಿದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕಲ್ಲುಸಾದರಹಳ್ಳಿ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.