
ಕೊಣನೂರು: ಹಿಂದೂ ಧರ್ಮವನ್ನು ನಾಶ ಮಾಡಲು ಹೊರಟವರೆಲ್ಲರೂ ನಾಶವಾದರು. ಎಷ್ಟೆಲ್ಲ ದಾಳಿಗಳು ಹಿಂದೂ ದೇವಾಲಯ, ಮಠ ಮಂದಿರಗಳ ಮೇಲೆ ನಡೆದರುರೂ ದಾಳಿ ಮಾಡಿದವರು ಮಣ್ಣಾಗಿ ಹೋದರೇ ಹೊರತು ಹಿಂದೂ ಧರ್ಮವನ್ನು ಅಳಿಸಲು ಸಾಧ್ಯವಾಗಿಲ್ಲ, ಸಾಧ್ಯವಿಲ್ಲ ಎಂದು ಕಾರ್ಜುವಳ್ಳಿ ಹಿರೇಮಠ ಸಂಸ್ಥಾನದ ಸದಾಶಿವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ಈಚೆಗೆ ಹೋಬಳಿ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ಒಳಪಂಗಡಗಳ ಜಾತಿ ವ್ಯವಸ್ಥೆಯಿಂದ ಧರ್ಮಕ್ಕೆ ಕುತ್ತು ಬಂದೊದಗುವ ಮೊದಲು ನಾವೆಲ್ಲರೂ ಹಿಂದೂ , ಒಂದು ಎಂಬ ಭಾವನೆ ಸಮಾಜದಲ್ಲಿ ಬರಬೇಕು. ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕೇಸರಿ ಶಾಲು ಹಾಕಿಕೊಂಡು, ಬಾವುಟ ಹಿಡಿದು, ತಿಲಕ ಇಟ್ಟುಕೊಂಡರೆ ಧರ್ಮ ಉಳಿಯದು. ಧರ್ಮದ ಆಶಯಗಳನ್ನು ಅರ್ಥ ಮಾಡಿಕೊಂಡು ಪಾಲಿಸಬೇಕು’ ಎಂದರು.
ಸಾಮಾಜಿಕ ಕಾರ್ಯಕರ್ತ ಬೆಂಗಳೂರಿನ ಗುರುಪ್ರಸಾದ್ ದಿಕ್ಕೂಚಿ ಭಾಷಣ ಮಾಡುತ್ತಾ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ವರ್ಷದಲ್ಲಿ ಹಿಂದೂ ಸಮಾಜವನ್ನು ಸಂಘಟಿಸಿ ಉಳಿಸುವ ನಿಟ್ಟಿನಲ್ಲಿ ಹಿಂದೂ ಸಮಾಜೋತ್ಸವ ನಡೆಸಲಾಗುತ್ತಿದೆ. ಭಾರತೀಯರು ರಾಷ್ಟ್ರಾಭಿವೃದ್ಧಿಗೆ ಪಂಚ ಪರಿವರ್ತನೆ ಅಂಶಗಳಾದ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಪರಿಸರ, ನಾಗರಿಕ ಶಿಷ್ಟಾಚಾರ ಹಾಗೂ ಸ್ವದೇಶಿ ಚಿಂತನೆ ಅಳವಡಿಸಬೇಕು. ಕುಟುಂಬ ಪ್ರಬೋಧನೆ ಅಳವಡಿಸಿಕೊಳ್ಳಬೇಕು ಎಂದರು.
ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು. ಚೆಂಡೆ, ಬ್ಯಾಂಡ್ಸೆಟ್, ಮಂಗಳವಾದ್ಯ, ಭಜನೆ ಕುಣಿತ, ವೀರಗಾಸೆ ಮನಸೂರೆಗೊಂಡವು. ಶಾಸಕ ಎ.ಮಂಜು, ಸಮಿತಿಯ ಗೌರವಾಧ್ಯಕ್ಷ ಸಿದ್ದಲಿಂಗೇಶ್ವರ, ತಾಲ್ಲೂಕು ಕಾರ್ಯನಿರ್ವಾಹ ಕೆ.ಎ. ನಾಗರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.