ಹಿರೀಸಾವೆ: ವಿಜಯದಶಮಿ ಅಂಗವಾಗಿ ಹಿರೀಸಾವೆಯ ಚೌಡೇಶ್ವರಿ ದೇವಿಯವರ ದಸರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ರಾತ್ರಿ ವಿಜೃಂಭಣೆಯಿಂದ ನಡೆದು, ಶುಕ್ರವಾರ ನಸುಕಿನಲ್ಲಿ ನವರಾತ್ರಿ ಆಚರಣೆ ಸಂಪನ್ನಗೊಂಡಿತು.
ಬೆಳಿಗ್ಗೆ ಕೆರೆ ಏರಿಯಲ್ಲಿರುವ ದೇವಿಯ ಮೂಲ ವಿಗ್ರಹಕ್ಕೆ ಗ್ರಾಮಸ್ಥರು ಮತ್ತು ಕುರುಹಿನ ಶೆಟ್ಟಿ ಸೇವಾ ಸಮಿತಿಯಿಂದ ಅಭಿಷೇಕ ಮತ್ತು ವಿಶೇಷ ಪೂಜೆ ಮಾಡಲಾಯಿತು. ರಾತ್ರಿ 8ಕ್ಕೆ ಉತ್ಸವ ಮೂರ್ತಿಗೆ ವಿವಿಧ ಪುಷ್ಪಗಳು ಮತ್ತು ಅಭರಣಗಳಿಂದ ಶೃಂಗರಿಸಿ, ವಿದ್ಯುತ್ ದೀಪಗಳಿಂದ ಅಲಂಕೃತವಾದ ವಾಹನದಲ್ಲಿ ದೇವಿಯನ್ನು ಭಕ್ತರ ಜಯ ಘೋಷಣೆಯೊಂದಿಗೆ ಕೂರಿಸಲಾಯಿತು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ. ಶುಕ್ರವಾರ ಬೆಳಗಿನ ಮುಂಜಾನೆ 2.30ಕ್ಕೆ ದಸರಾ ಮುಕ್ತಾಯವಾಯಿತು. ಶಾಸಕ ಸಿ.ಎನ್. ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, ಮಾಜಿ ಸದಸ್ಯ ಎಂ.ವಿ. ಗೋಪಾಲಸ್ವಾಮಿ, ಆಣತಿ ಆನಂದ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿರೀಸಾವೆಯ ಮಂಜುನಾಥ ತಂಡದ ಮಂಗಳವಾದ್ಯ, ನಿಂಗಪ್ಪನವರ ರಾಜಪುರದ ಮಹಿಳೆಯರ ಕೋಲಾಟ, ಅಜಂಪುರದವರ ವೀರಗಾಸೆ ಕುಣಿತ, ಬೆಳ್ತಂಗಡಿಯ ಸೃಷ್ಟಿ ಅರ್ಟ್‌ನವರ ಕೀಲುಕುದುರೆ–ಗೊಂಬೆಮೇಳ, ಸಾಗರದ ಬಸಪ್ಪ ತಂಡದ ಡೊಳ್ಳು ಕುಣಿತ, ಆಲ್ಬೂರಿನ ನಟರಾಜ್ ತಂಡದ ಸೋಮನ ಕುಣಿತ ಸೇರಿದಂತೆ ಹಲವು ಕಲಾತಂಡಗಳು ಮತ್ತು ನಿಶು ಲೈಟಿಂಗ್ಸ್ ನವರ ಬಣ್ಣ, ಬಣ್ಣದ ವಿದ್ಯುತ್ ದೀಪಾಲಂಕಾರ ಹಾಗೂ ಡಿಜಿಟಲ್ ಸೌಂಡ್ಸ್‌ನ ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿ ದಸರಾಕ್ಕೆ ರಂಗು ತುಂಬಿದರು.
ಚೌಡೇಶ್ವರಿ ಸಮುದಾಯ ಭವನದಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು. ಹಿರೀಸಾವೆಯ ಲಕ್ಷ್ಮೀ ದೇವಿ, ಬಸವೇಶ್ವರ, ಸಿದ್ದೇಶ್ವರ, ಉಡಿಸಲಮ್ಮ , ಸಿದ್ದಲಿಂಗೇಶ್ವರಸ್ವಾಮಿ, ಕಾಳಿಕಾಂಬ, ಮುದ್ರೆಕಲ್ ಆಂಜನೇಯ ಸ್ವಾಮಿ, ಚನ್ನಕೇಶವ ಸ್ವಾಮಿ ದೇವರುಗಳು ಮೆರವಣಿಗೆಯಲ್ಲಿ ಸಾಗಿದವು.
ಚೌಡೇಶ್ವರಿ ಸೇವಾ ಸಮಿತಿಯವರು ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ, ಗಣೇಶ್ ಮೂರ್ತಿಗಳ ವಿಸರ್ಜನಾ ಮಹೋತ್ಸವವೂ ನಡೆಯಿತು. 10 ದಿನಗಳಿಂದ ವಿವಿಧ ದೇವರಗಳ ಒಕ್ಕಲಿನವರು ಮತ್ತು ಸಮುದಾಯದವರು ನವರಾತ್ರಿ ಆಚರಣೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.