
ಹಿರೀಸಾವೆ: ಸುಡು ಬಿಸಿಲನಲ್ಲಿ ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿಯವರ 95ನೇ ವರ್ಷದ ಬ್ರಹ್ಮರಥೋತ್ಸವವು ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳಾದ ಸುಪ್ರಭಾತ, ದಿವ್ಯ ಅಲಂಕಾರ, ನಿತ್ಯಸೇವೆ, ಅಗ್ನಿ ಪ್ರತಿಷ್ಠೆ, ನಿತ್ಯ ಹೋಮ, ಪಂಚ ಸೂಕ್ತ ಹೋಮ, ಕಳಶ ಪ್ರತಿಷ್ಠೆ ನಡೆದವು. ನಂತರ ರಥಕ್ಕೆ ಬಲಿ ಆನ್ನ ಅರ್ಪಿಸಲಾಯಿತು. ಉತ್ಸವ ಮೂರ್ತಿಯನ್ನು ಬೆಟ್ಟದಿಂದ ಕೆಳಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಸಾವಿರಾರು ಭಕ್ತರು ರಂಗನಾಥಸ್ವಾಮಿಯ ನಾಮಸ್ಮರಣೆ ಮಾಡುತ್ತ, ಮಂಗಳ ವಾದ್ಯದೊಂದಿಗೆ, ಭಕ್ತಿ ಭಾವದಿಂದ ರಥವನ್ನು ಮಧ್ಯಾಹ್ನ 1 ಗಂಟೆಗೆ ಪೂರ್ವ ದಿಕ್ಕಿಗೆ ಎಳೆದು ಪುನೀತರಾದರು. ರಥವು ಚಲಿಸುವಾಗ ಭಕ್ತರು ಬಾಳೆಹಣ್ಣು ಮತ್ತು ಧವನವನ್ನು ರಥದ ಕಳಸ ಕಡೆಗೆ ಎಸೆದರು.
ಕೆಲವು ಭಕ್ತರು ಜಾತ್ರೆಗೆ ಬಂದವರಿಗೆ ಉಪಾಹಾರ, ಪಾನಕ ಮತ್ತು ಮಜ್ಜಿಗೆ ನೀಡುವ ಮೂಲಕ ರಂಗನಾಥಸ್ವಾಮಿಯ ಹರಕೆ ಅರ್ಪಿಸಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಜಾತ್ರೆ ಸೇರಿದಂತೆ ಧಾರ್ಮಿಕ ಆಚರಣೆಗಳು ನಮ್ಮ ಧರ್ಮದ ಉಳಿವಿಗೆ ಶಕ್ತಿ ಬಂದಿದೆ ಎಂದರು.
ತಹಶೀಲ್ದಾರ್ ಜಿ.ಎಸ್. ಶಂಕರಪ್ಪ, ಡಿವೈಎಸ್ಪಿ ಕುಮಾರ್, ಪಿಎಲ್‌ಡಿಬಿ ಅಧ್ಯಕ್ಷ ಮಂಜುನಾಥ್, ಹಿರೀಸಾವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಹೇಮಾವತಿ ಸಹಕಾರ ಕಾರ್ಖಾನೆ ನಿರ್ದೇಶಕ ಜಯರಾಮ್, ಉಪ ತಹಶೀಲ್ದಾರ್ ರವಿ, ಮುಖಂಡರಾದ ರಾಮಕೃಷ್ಣ, ಎಚ್.ಎಂ. ರಘು, ನುಗ್ಗೇಹಳ್ಳಿ ದೊರೆಸ್ವಾಮಿ, ಬೂಕದ ಯೋಗೇಶ್, ಎಪಿಎಂಸಿ ಅಧಿಕಾರಿಗಳಾದ ಮಂಜುಳಾ, ಸೋಮಶೇಖರ್, ಪಾರುಪತ್ತೇದಾರ ರಂಗರಾಜು, ಕಂದಾಯ ನಿರೀಕ್ಷಕ ಯೋಗೇಶ್, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದ್ದರು. ಹಿರೀಸಾವೆ ಠಾಣೆಯ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರು.
ರೈತರು ಗುಣಮಟ್ಟದ ಹಳ್ಳಿಕಾರ್ ಎತ್ತುಗಳನ್ನು ಸಾಕಿ ಪ್ರದರ್ಶನ ಮಾಡುವ ಮೂಲಕ ಜಾತ್ರೆಗೆ ಮೆರುಗು ತಂದಿದ್ದಾರೆ.ಸಿ.ಎನ್. ಬಾಲಕೃಷ್ಣ ಶಾಸಕ
ಎಲ್ಲರ ಸಹಕಾರದಿದ ಜಾತ್ರೆ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಈ ವರ್ಷದ ಜಾತ್ರೆಗೆ ನಿರೀಕ್ಷೆಗಿಂತ ಹೆಚ್ಚಿನ ರಾಸುಗಳು ಮತ್ತು ಭಕ್ತರು ಬಂದಿದ್ದಾರೆ.ಜಿ.ಎಸ್. ಶಂಕರಪ್ಪ ತಹಶೀಲ್ದಾರ್
ಎತ್ತುಗಳಿಗೆ ಬಹುಮಾನ ಜಾತ್ರೆಗೆ ಬಂದಿದ್ದ 18 ಜೊತೆ ಉತ್ತಮ ಎತ್ತುಗಳಿಗೆ ತಲಾ 1.2 ಗ್ರಾಂ ಚಿನ್ನ ಮತ್ತು ನಗದು ನೀಡಿ ಗೌರವಿಸಲಾಯಿತು. ಗ್ರಾಮೀಣ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಹಿರೀಸಾವೆ ಗ್ರಾಮ ಪಂಚಾಯಿತಿಯಿಂದ ಬಹುಮಾನ ನೀಡಲಾಯಿತು. ಕುಂಬೆನಹಳ್ಳಿಯ ಕಪನಿಗೌಡರ ಪುರುಷರ ತಂಡ ಮತ್ತು ಶ್ರವಣೇರಿ ನಿಂಗಪ್ಪನವರ ಮಹಿಳಾ ತಂಡಗಳ ಕೋಲಾಟವು ಜಾತ್ರೆಗೆ ಬಂದವರ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.