ADVERTISEMENT

₹ 2 ಕೋಟಿ ಅನುದಾನ ನೀಡಿ: ಶಾಸಕ ಎಚ್.ಕೆ.ಕುಮಾರಸ್ವಾಮಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಮೇ 2022, 15:46 IST
Last Updated 10 ಮೇ 2022, 15:46 IST
ಎಚ್.ಕೆ.ಕುಮಾರಸ್ವಾಮಿ
ಎಚ್.ಕೆ.ಕುಮಾರಸ್ವಾಮಿ   

ಹಾಸನ: ‘ಕುಡಿಯುವ ನೀರು ಪೂರೈಕೆ ಸೇರಿದಂತೆ ಬೇಸಿಗೆ ನಿರ್ವಹಣೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹ 2 ಕೋಟಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಜೆಡಿಎಸ್ ಸಂಸದೀಯ ಮಂಡಳಿ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಆಗ್ರಹಿಸಿದರು.

‘ಬೇಸಿಗೆ ಆರಂಭವಾಗಿದ್ದು,ಸರ್ಕಾರ ವಿಧಾನಸಭಾ ಕ್ಷೇತ್ರಕ್ಕೆ ₹ 20 ಲಕ್ಷ ಬಿಡುಗಡೆ ಮಾಡಿದೆ. ಕುಡಿಯುವನೀರು ಪೂರೈಕೆಗಾಗಿ ಕೊಳವೆ ಬಾವಿ ಕೊರೆಯಲು ₹1.5 ಲಕ್ಷ ಬೇಕು. ಸರ್ಕಾರ ನೀಡಿರುವ ಅನುದಾನದಲ್ಲಿ ಬೇಸಿಗೆ ನಿರ್ವಹಣೆ ಮಾಡುವುದು ಹೇಗೆ? ಸಕಲೇಶಪುರ ವಿಧಾನಸಭಾ ಕ್ಷೇತ್ರ ದೊಡ್ಡದಾಗಿರುವ ಕಾರಣ ಸರ್ಕಾರ ಕೂಡಲೇ ₹ 3 ಕೋಟಿ ಬಿಡುಗಡೆ ಮಾಡಬೇಕು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಕೆಡಿಪಿ ಸಭೆ ಕರೆಯಲಿ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ’ ಎಂದರು.

‘ರಾಷ್ಟ್ರೀಯ ಕಾಮಗಾರಿ 75ರಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದ್ದು, ಬಾಳ್ಳುಪೇಟೆ ಬಳಿ ಕಾಂಕ್ರೀಟ್‌ ರಸ್ತೆ ಕುಸಿದಿದೆ. ವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಯುತ್ತಿಲ್ಲ. ಮುಂದಿನ ತಿಂಗಳು ಮಳೆಗಾಲ ಆರಂಭವಾಗಲಿದೆ, ಅಷ್ಟರಲ್ಲಿ ಗುಂಡಿಗಳನ್ನು ಮುಚ್ಚಿಸಬೇಕು. ಕಾಮಗಾರಿ ಶೇಕಡಾ 35ರಷ್ಟು ಮಾತ್ರ ಆಗಿದೆ. ಗುತ್ತಿಗೆದಾರರು ಅಧಿಕಾರಿಗಳ ಮಾತು ಕೇಳುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಶೀಘ್ರ ಡಿ.ಸಿ ಅಧಿಕಾರಿಗಳ ಸಭೆ ಕರೆಯುವುದಾಗಿ ಹೇಳಿದ್ದಾರೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಮೇ 13ರ ಬಳಿಕ ಜೆಡಿಎಸ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಮೇ 13ರಂದು ರಾಜ್ಯಮಟ್ಟದ ಜಲಧಾರೆ ಕಾರ್ಯಕ್ರಮವನ್ನು ನೆಲಮಂಗಲ ಬಳಿ ಆಯೋಜಿಸಲಾಗಿದೆ. ರಾಜ್ಯದ 51 ಭಾಗದಿಂದ ನೀರು ಸಂಗ್ರಹಿಸಲಾಗಿದೆ. 6–8 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಜಿಲ್ಲೆಯಿಂದ 30 ಸಾವಿರ ಜನರು ಭಾಗವಹಿಸುವರು. ಕೆಎಸ್‌ಆರ್‌ಟಿಸಿ ಬಸ್‌, ಸ್ವಂತ ವಾಹನದಲ್ಲಿ ಬರಲಿದ್ದಾರೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ, ವಕ್ತಾರ ರಘು ಹೊಂಗೆರೆ, ಕಣದಾಳು ಮಂಜೇಗೌಡ, ಬಿ.ಸಿ.ಶಂಕರಚಾರ್, ನಗರಸಭೆ ಸದಸ್ಯ ಪ್ರಶಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.