
ಆಲೂರು: ಪಟ್ಟಣದಲ್ಲಿರುವ ಮಿನಿ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬರು ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದು, ಸೋಮವಾರ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು.
ತಾಲ್ಲೂಕು ಕಚೇರಿಯ ಅಧಿಕೃತ ಇ-ಮೇಲ್‍ಗೆ ಬೆಳಗಿನ ಜಾವ 3.04 ಕ್ಕೆ ಗೈನ ರಮೇಶ್ ಎಂಬ ಹೆಸರಿನಲ್ಲಿ ಮೇಲ್ ಬಂದಿದ್ದು, ಎರಡು ಆರ್‌ಡಿಎಕ್ಸ್ ಬಾಂಬ್ ಇಡಲಾಗಿದೆ. ಅದನ್ನು ಮಧ್ಯಾಹ್ನ 1 ಗಂಟೆಯೊಳಗೆ ಸ್ಫೋಟಿಸಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು.
ಸೋಮವಾರ ಎಂದಿನಂತೆ ಸಿಬ್ಬಂದಿ, ಕರ್ತವ್ಯಕ್ಕೆ ಹಾಜರಾಗಿ, ಕಚೇರಿಗೆ ಬಂದಿರುವ ಇ-ಮೇಲ್‌ಗಳನ್ನು ನೋಡುತ್ತಿದ್ದರು. ಬಾಂಬ್ ಬೆದರಿಕೆಯ ಇ-ಮೇಲ್ ಗಮನಿಸಿದ ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ನಂತರ ಎಲ್ಲ ಸಿಬ್ಬಂದಿ ಕಚೇರಿಯಿಂದ ಹೊರ ಬಂದಿದ್ದರು.
ಕೂಡಲೇ ತಹಶೀಲ್ದಾರ್ ಮಲ್ಲಿಕಾರ್ಜುನ, ಪೊಲೀಸರಿಗೆ ಮಾಹಿತಿ ನೀಡಿದರು. ತಾಲ್ಲೂಕು ಕಚೇರಿಗೆ ಬಂದ ಪೊಲೀಸರು, ಭದ್ರತಾ ಕ್ರಮವಾಗಿ ಸಿಬ್ಬಂದಿಯನ್ನು ಹೊರಗೆ ಕಳುಹಿಸಿದರು. ಬಳಿಕ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಪರಿಶೀಲಿಸಿದರು. ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ, ಸಂಪೂರ್ಣ ಕಟ್ಟಡದ ಸುದೀರ್ಘ ತಪಾಸಣೆ ನಡೆಸಿದರು. ಪರಿಶೀಲನೆ ವೇಳೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು.
ತಪಾಸಣೆ ಪೂರ್ಣಗೊಂಡ ಬಳಿಕ ತಹಶೀಲ್ದಾರ್ ಮಲ್ಲಿಕಾರ್ಜುನ ಅವರು, ತಾಲ್ಲೂಕು ಕಚೇರಿಯೊಳಗೆ ತೆರಳಿ ಪರಿಶೀಲನೆ ನಡೆಸಿ, ಆತಂಕವಿಲ್ಲದೇ ಕರ್ತವ್ಯಕ್ಕೆ ಮರಳುವಂತೆ ಸಿಬ್ಬಂದಿಗೆ ಸೂಚಿಸಿದರು.
ಶಾಸಕ ಸಿಮೆಂಟ್ ಮಂಜು ಭೇಟಿ: ತಕ್ಷಣ ತಾಲ್ಲೂಕು ಕಚೇರಿಗೆ ಬಂದ ಶಾಸಕ ಸಿಮೆಂಟ್ ಮಂಜು, ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಿಗೆ ನಿರಂತರವಾಗಿ ಬಾಂಬ್ ಬೆದರಿಕೆ ಇ-ಮೇಲ್‍ಗಳು ಬರುತ್ತಿರುವುದು ಗಂಭೀರ ವಿಷಯ. ಇಂತಹ ಚೆಲ್ಲಾಟದಿಂದ ಸಾರ್ವಜನಿಕರು ಹಾಗೂ ಸಿಬ್ಬಂದಿಗೆ ಕೆಲಸ ಮಾಡಲು ಆಗದಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಸರ್ಕಾರ ತಕ್ಷಣವೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ಮಲ್ಲಿಕಾರ್ಜುನ್ ಮಾತನಾಡಿ, ನಮ್ಮ ಅಧಿಕೃತ ಇ–ಮೇಲ್‍ಗೆ ಬೆಳಗಿನ ಜಾವ ಈ ಸಂದೇಶ ಬಂದಿದ್ದು, ಸಿಬ್ಬಂದಿ ತಿಳಿಸಿದ ತಕ್ಷಣ ಸಂಬಂಧಪಟ್ಟ ಪೊಲೀಸರ ಗಮನಕ್ಕೆ ತರಲಾಗಿದೆ. ಪರಿಶೀಲನೆ ನಡೆಸಲಾಗಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ಸ್ಪಷ್ಟವಾಗಿದೆ. ಈ ಹಿಂದೆ ಹಾಸನ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ರಾಜ್ಯದ ಹಲವು ಕಚೇರಿಗಳಿಗೆ ಇದೇ ರೀತಿ ಸಂದೇಶ ಬಂದಿದೆ ಎಂದರು.
ಈ ಸಂದೇಶದಲ್ಲಿ ತಮಿಳುನಾಡಿನ ಡಿಐಜಿ ಸೇರಿದಂತೆ ಇನ್ನಿತರರಿಗೂ ಕೂಡ ಇದು ವರ್ಗಾವಣೆ ಆಗಿದೆ. ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಕೂಡ ಆಲೂರು ಎಂಬ ತಾಲ್ಲೂಕು ಇದ್ದು, ಅಲ್ಲಿಗೂ ಮಾಹಿತಿ ನೀಡಲಾಗುವುದು. ಯಾವುದೇ ಭಯವಿಲ್ಲದೇ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದರು.
ಸಕಲೇಶಪುರ ಡಿವೈಎಸ್ಪಿ ಮಾಲತೇಶ್, ಪೊಲೀಸ್ ಇನ್‌ಸ್ಪೆಕ್ಟರ್ ಮೋಹನರೆಡ್ಡಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಸಾರ್ವಜನಿಕರಲ್ಲಿ ಆತಂಕ: ತಾಲ್ಲೂಕು ಕಚೇರಿಗೆ ಬಾಂಬ್ ಬೆದರಿಕೆ ಬಂದಿದ್ದರಿಂದ ಪಟ್ಟಣ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು.
ಬಾಂಬ್ ಇಡಲಾಗಿದೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ವೇಗವಾಗಿ ಹರಡಿದ್ದರಿಂದ ತಾಲ್ಲೂಕು ಕಚೇರಿ ಸುತ್ತ ಹಾಗೂ ರಸ್ತೆ ಬದಿಗಳಲ್ಲಿ ಸಹಸ್ರಾರು ಜನರು ಜಮಾಯಿಸಿದ್ದರು. ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಪರಿಶೀಲನೆ ನಡೆಸಿ ಹೋಗುವವರೆಗೂ ಪಟ್ಟಣದಲ್ಲಿ ಆತಂಕದ ವಾತಾವರಣ ಮುಂದುವರಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.