ಹೊಳೆನರಸೀಪುರ: ಪಟ್ಟಣದ ಕೋಟೆ ಮಾರಮ್ಮನ ಜಾತ್ರೆ ಹಾಗೂ ದೇವಾಲಯದ 11ನೇ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಭಾನುವಾರ ಬ್ರಾಹ್ಮಿ ಮಹೂರ್ತದಲ್ಲಿ ಹೇಮಾವತಿ ನದಿಯಲ್ಲಿ ಗಂಗೆ ಪೂಜೆ ಮಾಡಿ, ಗಂಗಾ ಕಳಸ ಹೊತ್ತ ಗಂಗಾಮತಸ್ಥ ಮಹಿಳೆಯರು ಹಾಗೂ ಭಕ್ತರು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ತಂದು ಮರಮ್ಮನಿಗೆ ಅಭಿಷೇಕ ಮಾಡಿದ ನಂತರ ವಿಪ್ರರು ದೇವಾಲಯದ ಮುಂದೆ ಚಂಡಿಕಾಹೋಮ ಮಾಡಿ ಮಹಾಮಂಗಳಾರತಿ, ತೀರ್ಥ ಪ್ರಸಾದ ನೀಡಿದರು.
ಬಿಸಿಲು ಹೆಚ್ಚಾಗಿದ್ದ ಕಾರಣ ದೇವಾಲಯದ ಮುಂದೆ ಶಾಮೀಯಾನ ಹಾಕಿ ಭಕ್ತರು ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು. ಪೂಜೆಯ ನಂತರ ಭಕ್ತರಿಗೆ ಅನ್ನಪ್ರಸಾದ ನೀಡಿದರು.
ಮಕ್ಕಳಿಗೆ ದಢಾರ, ಸಿಡುಬು, ಬೆಚ್ಚುತ್ತಿದ್ದರೆ ಮಾರಮ್ಮನಿಗೆ ಪೂಜೆ ಮಾಡಿದರೆ ತೊಂದರೆಗಳು ಬರುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ.
ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ. ಪುಟ್ಟರಾಜು, ಉಮೇಶ್, ಕೇಶವ, ಪಕಾಲಿ ಮಂಜು, ಆಟೋಕಿಟ್ಟಿ, ದೇವರಾಜ, ನಂಜುಂಡಸ್ವಾಮಿ, ಕಾದಲನ್ ಕೃಷ್ಣ ನೇತೃತ್ವ ವಹಿಸಿದ್ದರು. ಅರ್ಚಕ ಎಚ್.ಪಿ. ಕುಮಾರ್ ಭಾಗವಹಿಸಿದ್ದರು.
ಮಾರಮ್ಮನಿಗೆ ವಿವಿಧ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.