
ಹೊಳೆನರಸೀಪುರ:‘ ಬಟ್ಟೆ ಕೈಚೀಲಗಳನ್ನು ಬಳಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ರಕೃತಿಯನ್ನು ಕಾಪಾಡಿ, ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಲ್ಲಿಸಿ, ಪರಿಸರ ಉಳಿಸಿ’ ಎಂದು ಶಾಸಕ ಎಚ್.ಡಿ. ರೇವಣ್ಣ ಸಲಹೆ ನೀಡಿದರು.
ಗಣಪತಿ ಪೆಂಡಾಲಿನಲ್ಲಿ ಪುರಸಭೆ ಆಯೋಜಿಸಿದ್ದ ಸ್ವಚ್ಛ ಭಾರತ್ ಮಿಷನ್, ಸಾಮರ್ಥ್ಯಾಭಿವೃದ್ಧಿ ಘಟಕದ ಯೋಜನೆಯಡಿ 3 ದಿನ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅನಾಹುತಗಳ ಬಗ್ಗೆ ಪುರಸಭೆ ಜಾಗೃತಿ ಮೂಡಿಸುತ್ತಿದ್ದರೂ ಜನರಿಗೆ ಅರಿವಾಗಿಲ್ಲ ಎಂದು, ಹೆಚ್ಚಿನ ಕಾಳಜಿ ಮೂಡಿಸಲುವಾಗಿ ಆಯೋಜಿಸಿರುವ 3 ದಿನಗಳ ಕಾರ್ಯಕ್ರಮಕ್ಕೆ ನಾಗರಿಕರು ಭೇಟಿ ನೀಡಿ, ಮಾಹಿತಿ ಪಡೆಯುವಂತೆ ಪ್ರಚಾರ ನೀಡಿ ಎಂದು ಪುರಸಭೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಪುರಸಭೆ ಪರಿಸರ ಎಂಜಿನಿಯರ್ ರುಚಿದರ್ಶಿನಿ ಮಾತನಾಡಿ, ಕಸ ಸಮಸ್ಯೆ ನಿವಾರಣೆಯಲ್ಲಿ ಸಾರ್ವಜನಿಕರು ತಮ್ಮ ಮನೆಗಳ ಹಸಿ ಹಾಗೂ ಒಣಕಸವನ್ನು ವಿಂಗಡಣೆ ಮಾಡಿ ನೀಡುವುದು ಬಹಳ ಸಹಕಾರಿ. ನಿರುಪಯುಕ್ತ ಪದಾರ್ಥಗಳಿಂದ ಹಲವು ಬಗೆಯ ವಸ್ತುಗಳನ್ನು ತಯಾರಿಸಬಹುದು. ಆಲಂಕಾರಿಕ ಹೂವುಗಳು, ಹೂವಿನ ಕುಂಡಗಳನ್ನು ತಯಾರು ಮಾಡಿ, ಬಳಕೆ ಮಾಡಬಹುದು ಎಂದು ವಿವರಿಸಿದರು. ಪ್ರದರ್ಶನದಲ್ಲಿ ಇಟ್ಟಿದ್ದ ವಸ್ತುಗಳನ್ನು ತೋರಿಸಿ, ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಸಾರ್ವಜನಿಕರಿಗೆ ಕಸ ವಿಂಗಡಣೆ, ನಿರುಪಯುಕ್ತ ವಸ್ತುಗಳ ಮರುಬಳಕೆ ಹಾಗೂ ಪ್ಲಾಸ್ಟಿಕ್ ಸಮಸ್ಯೆ ಕುರಿತು ಸಮಗ್ರವಾದ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ಹಿರಿಯ ಆರೋಗ್ಯ ನಿರೀಕ್ಷಕ ವಸಂತ್ ಕುಮಾರ್, ಪೌರಕಾರ್ಮಿಕರ ಮೇಲ್ವಿಚಾರಕರಾದ ಕಿರಣ್, ಚೆಲುವ, ಮಾದಯ್ಯ, ನಾಗಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.