ಹೊಳೆನರಸೀಪುರ: ಇಲ್ಲಿಂದ ಶ್ರೀನಿವಾಸಪುರ ಮಾರ್ಗವಾಗಿ ಚನ್ನರಾಯಪಟ್ಟಣಕ್ಕೆ ಹೋಗುವ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದೆ. ರಾಜ್ಯ ಹೆದ್ದಾರಿ ಆಗಿರುವ 21 ಕಿ.ಮೀ ಉದ್ದದ ಈ ರಸ್ತೆಯಲ್ಲಿ ಅಡಿಗೊಂದು ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನಗಳು ಸಂಚರಿಸಲು ಸಾಧ್ಯವೇ ಇಲ್ಲದಂತಾಗಿದೆ.
‘ಸಾರಿಗೆ ಸಂಸ್ಥೆಯ ಬಸ್‌ಗಳು ಅನಿವಾರ್ಯವಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, 21 ಕಿ.ಮೀ. ಸಂಚರಿಸಲು ಕನಿಷ್ಠ 1 ಗಂಟೆ ಬೇಕೇ ಬೇಕು. ನಾವೇನಾದರು ಸ್ವಲ್ಪ ಜೋರಾಗಿ ಹೋದರೆ, ನಮ್ಮ ಬಸ್‌ನ ಬ್ಲೇಡ್‌ಗಳು ಕಟ್ಟಾಗುತ್ತದೆ. ಇಲ್ಲ ಟಯರ್‌ಗಳು ಒಡೆದು ಹೋಗುತ್ತವೆ. ಈ ಮಾರ್ಗದಲ್ಲಿ ಸಂಚರಿಸಿ, ಕೆಲಸ ಮುಗಿಸುವ ಹೊತ್ತಿಗೆ ನಾವು ಹೈರಾಣಾಗುತ್ತೇವೆ’ ಎಂದು ಹೆಸರು ಹೇಳಲಿಚ್ಚಿಸದ ಸಾರಿಗೆ ಸಂಸ್ಥೆ ಬಸ್ ಚಾಲಕ ಅಳಲು ತೋಡಿಕೊಂಡರು.
ತಟ್ಟೇಕೆರೆ, ಮೂಡಲಹಿಪ್ಪೆ, ಜಕ್ಕವಳ್ಳಿ, ಗನ್ನಿಕಡ, ಶ್ರೀನಿವಾಸಪುರ ಮಾರ್ಗವಾಗಿ ಚನ್ನರಾಯಪಟ್ಟಣಕ್ಕೆ ಹಾಗೂ ಸುತ್ತಲಿನ ಗ್ರಾಮಗಳಿಗೆ ಹೋಗುವವರು ಅನಿವಾರ್ಯವಾಗಿ ಇದೇ ರಸ್ತೆಯಲ್ಲಿ ಓಡಾಡಬೇಕು. ಕಾರುಗಳಲ್ಲಿ ಚನ್ನರಾಯಪಟ್ಟಣ, ಬೆಂಗಳೂರಿಗೆ ಹೋಗುವವರು ಅಗ್ರಹಾರಗೇಟ್ ಮಾರ್ಗವಾಗಿ ಸುತ್ತಿ ಬಳಸಿ, ಅಪಾಯಕಾರಿ ತಿರುವುಗಳಲ್ಲಿ 5 ಕಿ.ಮೀ. ಕ್ರಮಿಸುವುದು ಅನಿವಾರ್ಯವಾಗಿದೆ.
ಇನ್ನು ಈ ಮಾರ್ಗದಲ್ಲಿ ಇರುವ ಶಾಲೆಗಳ ವಿದ್ಯಾರ್ಥಿಗಳು ನಿತ್ಯವೂ ಹೊಂಡ ಗುಂಡಿಗಳ ಮಧ್ಯದಲ್ಲಿಯೇ ಸಂಚರಿಸುವುದು ಅನಿವಾರ್ಯವಾಗಿದೆ. ಶಾಲೆಗೆ ಹೋಗಿ ಮರಳಿ ಮನೆಗೆ ಬರುವಷ್ಟರಲ್ಲಿ ಮೈಕೈ ನೋವಿನಿಂದ ಸುಸ್ತಾಗುತ್ತಿದ್ದು, ಓದುವ ಆಸಕ್ತಿಯೂ ಇಲ್ಲದಂತಾಗುತ್ತಿದೆ.
‘ಸ್ಕೂಲಿಗೆ ಹೋಗಿ ಬರೋದೇ ದೊಡ್ಡ ಕಷ್ಟ ಆಗಿದೆ. ಬಸ್‌ನಲ್ಲಿ ಪ್ರಯಾಣಿಸುವಾಗ, ಅತ್ತೊಮ್ಮೆ, ಇತ್ತೊಮ್ಮೆ ಓಲಾಡಿಕೊಂಡು ಹೋಗಬೇಕು. ಬರುವಾಗಲೂ ಅದೇ ಸ್ಥಿತಿ. ದಿನವೂ ಇದೇ ರೀತಿ ಆಗುತ್ತಿದ್ದು, ಮನೆಗೆ ಬರುವಷ್ಟರಲ್ಲಿಯೇ ಸುಸ್ತಾಗಿರುತ್ತದೆ. ಇನ್ನು ಅಭ್ಯಾಸ ಮಾಡುವುದಕ್ಕೆ ಆಸಕ್ತಿ ಎಲ್ಲಿಂದ ಬರಬೇಕು’ ಎಂದು ವಿದ್ಯಾರ್ಥಿನಿಯೊಬ್ಬಳು ಅಲವತ್ತಿಕೊಂಡಳು.
‘ನಮ್ಮ ಕಷ್ಟ ಅಧಿಕಾರಿಗಳಿಗೆ ಅರ್ಥವಾಗಲ್ಲ’ ‘ಸಾರ್ವಜನಿಕರು ಪ್ರಯಾಣಿಕರು ಮಹಿಳೆಯರ ಕಷ್ಟ ಅಧಿಕಾರಿಗಳಿಗೆ ಅರ್ಥ ಆಗುವುದೇ ಇಲ್ಲ. ಈ ಮಾರ್ಗದಲ್ಲಿ ಸರ್ಕಾರಿ ಆದರ್ಶ ಶಾಲೆ ಸರ್ಕಾರಿ ಪಾಲಿಟೆಕ್ನಿಕ್ ತಟ್ಟೇಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ. ರಸ್ತೆ ಹಾಳಾಗಿರುವುದರಿಂದ ಈ ಶಾಲೆಗಳ ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆ ಆಗುತ್ತಿದೆ. ಆದರೂ ಯಾವೊಬ್ಬ ಅಧಿಕಾರಿಯೂ ಕನಿಷ್ಠ ಗುಂಡಿ ಮುಚ್ಚಿವುದಕ್ಕೂ ಮುಂದಾಗಿಲ್ಲ’ ಎಂದು ಮಂಗಳಾಪುರ ಗ್ರಾಮದ ಕಾವ್ಯಾ ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಹೈಕೋರ್ಟ್‌ಗೆ ಪಿಐಎಲ್’ ‘ಈ ರಸ್ತೆ ಹಾಳಾಗಿ ಹತ್ತಾರು ವರ್ಷಗಳಾಗಿದೆ. ದುರಸ್ತಿ ಮಾಡಿಸಿ ಎಂದು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದ್ದೇವೆ. ಆದರೆ ಈ ರಸ್ತೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ. ಇನ್ನೆರೆಡು ವಾರದಲ್ಲಿ ಈ ರಸ್ತೆಗೆ ಡಾಂಬರ್ ಹಾಕಿಸದಿದ್ದರೆ ಸುತ್ತಲಿನ ಜನರು ಪ್ರತಿಭಟನೆ ನಡೆಸುತ್ತೇವೆ. ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇವೆ’ ಎಂದು ಮಂಗಳಾಪುರದ ನಿವಾಸಿ ಕುರುಬರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಎಂ.ವಿ. ದಾಶರಥಿ ಎಚ್ಚರಿಕೆ ನೀಡಿದರು.
‘ತಿಂಗಳಲ್ಲಿ ಕಾಮಗಾರಿ ಆರಂಭ’ ನಾನೂ ಬೆಂಗಳೂರಿಗೆ ಹೋಗಲು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೇನೆ. ಜನರ ಸಮಸ್ಯೆ ನನಗೂ ಅರ್ಥವಾಗಿದೆ’ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು. ಚನ್ನರಾಯಪಟ್ಟಣದಿಂದ ಹೊಳೆನರಸೀಪುರ ಮಾರ್ಗವಾಗಿ ಅರಕಲಗೂಡು ಗಡಿಯವರೆಗೆ ಈ ರಸ್ತೆ ದುರಸ್ತಿಗೆ ₹ 4 ಕೋಟಿ ಹಾಗೂ ಇನ್ನುಳಿದ ಹಾಳಾದ ರಸ್ತೆಗಳ ಗುಂಡಿ ಮುಚ್ಚಲು ₹ 4 ಕೋಟಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಈ ರಸ್ತೆಗಳ ದುರಸ್ತಿ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.