ಸಕಲೇಶಪುರ (ಹಾಸನ ಜಿಲ್ಲೆ): ‘ಸದನವು ದೊಡ್ಡ ದೇವಸ್ಥಾನದಂತೆ. ಅಲ್ಲಿ ಮಧುಬಲೆ(ಹನಿಟ್ರ್ಯಾಪ್)ಯಂತಹ ಘಟನೆಗಳ ಬಗ್ಗೆ ಚರ್ಚೆಯಾಗುವುದು ತಲೆತಗ್ಗಿಸುವ ವಿಷಯ. ಇದರಿಂದ ಯಾರಿಗೆ ಒಳ್ಳೆಯದಾಗುತ್ತದೆ? ಮಧುಬಲೆ ಬೀಸಿದವನೂ ಒಳ್ಳೆಯವನಲ್ಲ; ಸಿಕ್ಕಿಹಾಕಿಕೊಂಡವನೂ ಒಳ್ಳೆಯವನಲ್ಲ’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಜಾಪ್ರಭುತ್ವದ ಮೌಲ್ಯವನ್ನು ಎಲ್ಲರೂ ಅರಿಯಬೇಕು. ಹಿಂದಿನ– ಈಗಿನ ರಾಜಕಾರಣಕ್ಕೆ ಬಹಳ ಅಂತರವಿದೆ. ದುಡ್ಡು ಕೊಟ್ಟು ಗೆದ್ದು ಬಂದು, ಬೆಂಗಳೂರಿನಲ್ಲಿ ಕುಳಿತು ದುಡ್ಡು ಮಾಡಿ, ಮತ್ತೆ ದುಡ್ಡು ಖರ್ಚು ಮಾಡಿ ಆಯ್ಕೆಯಾಗುವ ಪರಿಪಾಠವಿದೆ. ಎಲ್ಲಿಯವರೆಗೆ ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳುತ್ತಾರೆಯೋ, ಅಲ್ಲಿಯವರೆಗೆ ಪ್ರಜಾಪ್ರಭುತ್ವವನ್ನು ಕೇಳುವವರು ಇರುವುದಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಜೀನಾಮೆ ಕೊಡಬೇಕೆಂದು ತೀರ್ಮಾನಿಸಿದ್ದೇನೆ’ ಎಂದು ತಿಳಿಸಿದರು.
‘ಸದನಕ್ಕೆ ಕಾಲಿಟ್ಟರೆ ಎಲ್ಲರೂ ಶಾಸಕರೇ. ವಯಸ್ಸಿನ ಪ್ರಶ್ನೆ ಇಲ್ಲ. ಅನುಭವಿಗಳು ಹೇಳಿದ್ದನ್ನು ಕೇಳುವುದಿಲ್ಲ. ಯಾರಿಗೂ ಯಾರ ಹೆದರಿಕೆಯೂ ಇಲ್ಲ. ದುಡ್ಡು ಕೊಟ್ಟು ಆರಿಸಿ ಬರುತ್ತೇನೆ ಎಂಬ ಭಾವನೆ ಇದೆ. ಇನ್ನೊಂದೆಡೆ ಜಾತಿ ವ್ಯವಸ್ಥೆಯೂ ಇದೆ’ ಎಂದರು.
‘ವಿರೋಧ ಪಕ್ಷದ ನಾಯಕರು ಸಭಾಧ್ಯಕ್ಷರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಮಕ್ಕಳಂತೆ ಶಾಸಕರಿಗೂ ತರಬೇತಿ ಕೊಡಬೇಕಾಗಿದೆ. ಸಭಾಪತಿಯ ಪೀಠದ ಮೇಲೆ ಕುಳಿತುಕೊಳ್ಳುವುದು, ಅಧ್ಯಕ್ಷರ ಮುಖದ ಮೇಲೆ ಕಾಗದದ ಚೂರುಗಳನ್ನು ಎಸೆಯುವುದು ಒಳ್ಳೆಯದಲ್ಲ. ಸಭಾಪತಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಂತೆ. ಅವರಿಗೆ ಗೌರವ ಕೊಡಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.