ADVERTISEMENT

ಹಿರೀಸಾವೆ: ಹೊನ್ನಾದೇವಿ ಹಬ್ಬ- 18 ದಿನ ಆಚರಣೆ

20ರಂದು ರಾತ್ರಿ 11ಕ್ಕೆ ಕಬ್ಬಳಿ, ಮೂಕೀಕೆರೆ ಗ್ರಾಮಸ್ಥರಿಂದ ಮೊದಲ ಮಡೆ ಉತ್ಸವ

ಹಿ.ಕೃ.ಚಂದ್ರು
Published 17 ಏಪ್ರಿಲ್ 2022, 5:38 IST
Last Updated 17 ಏಪ್ರಿಲ್ 2022, 5:38 IST
ಹಿರೀಸಾವೆ ಹೋಬಳಿಯ ಬಾಳಗಂಚಿಯ ಹೊನ್ನಾದೇವಿಯ ಮೂಲ ದೇವಸ್ಥಾನ (ಎಡಚಿತ್ರ). ಹೊನ್ನಾದೇವಿ
ಹಿರೀಸಾವೆ ಹೋಬಳಿಯ ಬಾಳಗಂಚಿಯ ಹೊನ್ನಾದೇವಿಯ ಮೂಲ ದೇವಸ್ಥಾನ (ಎಡಚಿತ್ರ). ಹೊನ್ನಾದೇವಿ   

ಹಿರೀಸಾವೆ: ‘ಹೆತ್ತ ಮಕ್ಕಳನ್ನು ಹುತ್ತಕ್ಕೆ ತುಂಬಾ’ ಎಂಬ ಸಹೋದರಿಯರ ಶಾಪಕ್ಕೆ ಗುರಿಯಾದ, ಹೋಬಳಿಯ ಬಾಳಗಂಚಿಯ ಮತ್ತು ಹೊನ್ನಶೆಟ್ಟಿಹಳ್ಳಿಯಗ್ರಾಮ ದೇವತೆ ಹೊನ್ನಾದೇವಿ ಹಬ್ಬವನ್ನು 18 ದಿನ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ.

ಹೊನ್ನಾದೇವಿಹಳ್ಳಿ, ಬ್ಯಾಡರ ಹಳ್ಳಿ, ಹೊನ್ನಾಮಾರನಹಳ್ಳಿ, ಕಬ್ಬಳಿ ಗೌಡರಹಳ್ಳಿ, ಮೂಕಿಕೆರೆ, ಬ್ಯಾಡರಹಳ್ಳಿ ಸೇರಿದಂತೆ ಕೇರಳ ಮತ್ತು ತಮಿಳುನಾಡಿನ ಊಟಿಯಲ್ಲಿ ನೆಲೆಸಿರುವ ಭಕ್ತರು ದೇವಿಯ ಬ್ರಹ್ಮೋತ್ಸವದಲ್ಲಿ ಭಾಗವಹಿಸುತ್ತಾರೆ.

‘ಹಿರೀಸಾವೆಯ ಚೌಡೇಶ್ವರಿ, ನಾಗಮಂಗಲ ತಾಲ್ಲೂಕಿನ ಲಾಳನ ಕೆರೆಯ ಅಚಲ ಪರಮೇಶ್ವರಿ ದೇವಿಯರು ಈಕೆಯ ಅಕ್ಕ–ತಂಗಿ. ಹೊನ್ನಾದೇವಿಯ ಮಗುವನ್ನು ನೋಡಲು ಇಬ್ಬರು ಬರುತ್ತಾರೆ. ಇವರಿಗೆ ಮಕ್ಕಳು ಇಲ್ಲ ಎಂಬುದಕ್ಕೆ ಮಗುವನ್ನು ತೋರಿಸದ ಹಿನ್ನೆಲೆಯಲ್ಲಿ ಈ ಶಾಪವನ್ನೂ ನೀಡಿದ್ದಾರೆ ಎಂಬ ಮಾತು ಇದೆ. ಇದಕ್ಕೆ ಪ್ರತಿಯಾಗಿ ಮಕ್ಕಳು ಇಲ್ಲದವರು ನನ್ನ ದರ್ಶನಕ್ಕೆ ಬಂದು, ವ್ರತ ಆಚರಿಸಿದರೆ, ಕೂಸು ಕರುಣಿಸುವೆ ಎಂದು ಪ್ರತಿಜ್ಞೆಯನ್ನು ದೇವಿ ಮಾಡಿದಳು ಎಂಬ ಪ್ರತೀತಿ ಇದೆ’ ಎನ್ನುತ್ತಾರೆ ಅರ್ಚಕ ರಾಘವೇಂದ್ರ.

ADVERTISEMENT

ಈ ಮೂರು ದೇವಿಯರ ಹಬ್ಬವು ಯುಗಾದಿ ನಂತರ ಆಯಾಯ ಗ್ರಾಮ ಗಳಲ್ಲಿ ಏಕ ಕಾಲದಲ್ಲಿ ನಡೆಯುತ್ತದೆ.

ಯುಗಾದಿ ನಂತರ ಬರುವ ಮೊದಲ ಗುರುವಾರ ಸ್ತಂಭವನ್ನು ತರುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಅಂದಿನಿಂದ ದೇವರ ಮನೆತನದವರು, ತಮ್ಮ ಮನೆ ಹೊರತು, ಬೇರೆ ಕಡೆ ತಯಾರಿಸಿದ ಊಟ ಮಾಡುವುದಿಲ್ಲ. ಕಾಲಿಗೆ ಪಾದರಕ್ಷೆ ಧರಿಸುವುದಿಲ್ಲ. ನಿಷ್ಠೆ, ಭಯ, ಭಕ್ತಿಯಿಂದ ಹಲವು ಧಾರ್ಮಿಕ ಪದ್ಧತಿಗಳನ್ನು ಹಬ್ಬ ಮುಗಿಯುವವರೆಗೆ ಅನುಸರಿಸುತ್ತಾರೆ.

ಪ್ರತಿದಿನ ಬಾಳಗಂಚಿ ಮತ್ತು ದೇವಿಯ ತವರು ಮನೆಯಾದ ಹೊನ್ನ ಶೆಟ್ಟಿಹಳ್ಳಿಯಲ್ಲಿ ರಂಗ ಕುಣಿಯುತ್ತಾರೆ. ಈ ಹಬ್ಬದಲ್ಲಿ ಹೆಬ್ಬಾರಮ್ಮ, ಚಾವಟಿಯಮ್ಮ, ಮಣಿಯಮ್ಮ, ಸೋಮದೇವರು ಭಕ್ತರ ಪ್ರಮುಖ ಆಕರ್ಷಣೆ.ಹೊನ್ನಾರು ಕಟ್ಟುವುದು ಮತ್ತೊಂದು ವಿಶೇಷ.

ಇದೇ ತಿಂಗಳ 20ರಂದು ರಾತ್ರಿ 11ಕ್ಕೆ ಕಬ್ಬಳಿ ಮತ್ತು ಮೂಕೀಕೆರೆ ಗ್ರಾಮಸ್ಥರು ಮೊದಲ ಮಡೆ ಉತ್ಸವ ನಡೆಸುತ್ತಾರೆ. 21ರಂದು ದೊಡ್ಡ ಹಬ್ಬದ ಪ್ರಯುಕ್ತಬೆಳಿಗ್ಗೆ ಬಾಳಗಂಚಿ ಶ್ಯಾನುಭೋಗರ ವಂಶಸ್ಥರು ವಿಶೇಷ ಪೂಜೆ ಸಲ್ಲಿಸುತ್ತಾರೆ.

ಭಕ್ತರ ಸಹಕಾರದಿಂದ ಸಮಿತಿ ಯವರು ಅನ್ನಸಂತರ್ಪಣೆ ಏರ್ಪಡಿಸಿ ದ್ದಾರೆ. ರಾತ್ರಿ 11 ಗಂಟೆಗೆ ಹೊನ್ನಾದೇವಿ, ಗೌಡರಹಳ್ಳಿ ಮಸಣಿಕಮ್ಮ, ಹೊನ್ನಾ ಮಾರನಹಳ್ಳಿ ಮಾರಮ್ಮ, ಕನ್ನಕರಡಿ ಅಮ್ಮನ ಸಮೇತ ಚಾವಟಿಯಮ್ಮ
ದೇವಿಯರ ಉತ್ಸವ ಜರುಗಲಿದೆ.

24ರಂದು ಅವಭೃತೋತ್ಸವ, ರಾತ್ರಿ11ಕ್ಕೆ ಹೆಬ್ಬಾರಮ್ಮ ಸೇರಿದಂತೆ ವಿವಿಧ ದೇವರ ಮೆರವಣಿಗೆ ನಡೆಯಲಿದೆ.
28ರಂದು ದೇವಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸುವ ಮೂಲಕಹಬ್ಬ ಸಂಪನ್ನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.