ADVERTISEMENT

ಹಾಸನ: ಹುಡಾ ಅಧ್ಯಕ್ಷ ಸ್ಥಾನವೂ ಅರಸೀಕೆರೆಗೆ?

ಚಿದಂಬರಪ್ರಸಾದ್
Published 21 ಜುಲೈ 2025, 2:22 IST
Last Updated 21 ಜುಲೈ 2025, 2:22 IST
   

ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆಯುತ್ತಿದ್ದು, ಇದೀಗ ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕಾತಿ ಪ್ರಯತ್ನಗಳು ಶುರುವಾಗಿವೆ. ಈ ಮಧ್ಯೆ ಹಾಸನ ವಿಧಾನಸಭಾ ಕ್ಷೇತ್ರದವರನ್ನು ಹೊರತುಪಡಿಸಿ, ಬೇರೆ ಕ್ಷೇತ್ರದವರಿಗೆ ಅಧ್ಯಕ್ಷ ಸ್ಥಾನ ನೀಡಿದಲ್ಲಿ, ಪಕ್ಷದ ಸಂಘಟನೆಗೆ ಪೆಟ್ಟಾಗಲಿದೆ ಎಂಬ ಆತಂಕವನ್ನು ಕಾಂಗ್ರೆಸ್ಸಿಗರೇ ವ್ಯಕ್ತಪಡಿಸುತ್ತಿದ್ದಾರೆ.

2018 ರ ನಂತರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಸಂಪೂರ್ಣ ಸ್ತಬ್ಧವಾಗಿತ್ತು. 2023 ರ ವಿಧಾನಸಭೆ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಉಳಿದ ಏಳೂ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿತ್ತು. ಆದರೆ, 2024 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೇಯಸ್ ಪಟೇಲ್‌ ಸಂಸದರಾಗಿ ಆಯ್ಕೆಯಾಗಿದ್ದು, ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ಬಂದಿತ್ತು.

ಇದೀಗ ಮತ್ತೊಂದು ವರ್ಷ ಕಳೆದಿದ್ದು, ಪಕ್ಷದಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಪಕ್ಷ ಸಂಘಟನೆಗೆ ಒತ್ತು ನೀಡುವಂತಹ ವ್ಯಕ್ತಿಗಳನ್ನು ನಾಯಕರು ಗುರುತಿಸದೇ ಇರುವುದು ಇದಕ್ಕೆ ಕಾರಣವಾಗಿವೆ. ಆರು ವರ್ಷ ಯಾವುದೇ ಅಧಿಕಾರ ಇಲ್ಲದೇ ಪಕ್ಷ ಸಂಘಟನೆ ಮಾಡಿದ್ದು, ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆಯುತ್ತಿದ್ದರೂ, ಇನ್ನೂ ಅಧಿಕಾರ ಸಿಗುತ್ತಿಲ್ಲ ಎನ್ನುವ ನೋವನ್ನು ಕಾರ್ಯಕರ್ತರು ತೋಡಿಕೊಳ್ಳುತ್ತಿದ್ದಾರೆ.

ADVERTISEMENT

ಈ ಮಧ್ಯೆ ಇದೀಗ ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಕುರುಬ ಸಮುದಾಯದ ಮುಖಂಡರೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ರಾಜ್ಯ ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ. ಇದು ಮತ್ತೊಂದು ಹಂತದ ಅಸಮಾಧಾನಕ್ಕೆ ಕಾರಣವಾಗಿದೆ.

ಹಾಸನಕ್ಕೆ ಸೀಮಿತವಾಗಿರುವ ಹಾಸನದ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬೇರೆ ಕ್ಷೇತ್ರದವರನ್ನು ನೇಮಕ ಮಾಡುವುದು ಸರಿಯಲ್ಲ. ಒಂದು ವೇಳೆ ನೇಮಕ ಮಾಡಿದರೂ, ಅದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರುವ ಚಿಂತನೆಯಲ್ಲಿ ಕೆಲವು ನಾಯಕರಿದ್ದಾರೆ.

‘ಜಾತಿ ನೋಡಿಕೊಂಡೇ ಎಲ್ಲ ನೇಮಕಾತಿ ಮಾಡುವುದಾದರೆ, ಪಕ್ಷಕ್ಕೆ ದುಡಿದವರು ಎಲ್ಲಿಗೆ ಹೋಗಬೇಕು? 2018 ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ತಪ್ಪುಗಳಿಂದಲೇ ನಾವು ಸೋಲು ಕಂಡಿದ್ದೇವು. ಇದೇ ರೀತಿ ಮುಂದುವರಿದರೆ, 2028 ರ ಚುನಾವಣೆಯಲ್ಲೂ ಅದೇ ಸ್ಥಿತಿ ಎದುರಿಸಬೇಕಾಗುತ್ತದೆ’ ಎಂಬ ಎಚ್ಚರಿಕೆಯನ್ನೂ ನೀಡಿದರು.

ಎಲ್ಲವೂ ಅರಸೀಕೆರೆ ಕ್ಷೇತ್ರಕ್ಕೆ ಏಕೆ?: ‘ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕರನ್ನು ಹೊಂದಿರುವ ಅರಸೀಕೆರೆ ಕ್ಷೇತ್ರಕ್ಕೇ ಆದ್ಯತೆ ನೀಡುವುದಾದರೆ, ಇನ್ನುಳಿದ ಆರು ಕ್ಷೇತ್ರಗಳ ನಾಯಕರು ಎಲ್ಲಿಗೆ ಹೋಗಬೇಕು’ ಎನ್ನುವ ಪ್ರಶ್ನೆ ನಾಯಕರದ್ದಾಗಿದೆ.

‘ಗರಿಷ್ಠ ಅನುದಾನವನ್ನು ಅರಸೀಕೆರೆ ಕ್ಷೇತ್ರಕ್ಕೆ ನೀಡಲಾಗಿದೆ. ಅಲ್ಲಿನ ಶಾಸಕ ಶಿವಲಿಂಗೇಗೌಡರಿಗೆ ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನೂ ನೀಡಲಾಗಿದೆ. ಜೊತೆಗೆ ಅವರು ಹೇಳಿದವರನ್ನೇ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿದರೆ, ನಮ್ಮ ಅಸ್ತಿತ್ವವೇ ಇಲ್ಲವೇ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.