ಬೇಲೂರು: ತಾಲ್ಲೂಕಿನ ಇಬ್ಬೀಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುರುವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಷೇರುದಾರರು ಮತ್ತು ಆಡಳಿತ ಮಂಡಳಿ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಸಂಘದ ಆಡಳಿತ ಮಂಡಳಿಯವರು ಸೊಸೈಟಿ ಬೈಲಾ ಹೊರತುಪಡಿಸಿ, ಅನ್ಯ ಗ್ರಾಮಕ್ಕೆ ಹೆಚ್ಚು ಸಾಲ ನೀಡಿದ್ದಾರೆ ಎಂದು ಷೇರುದಾರರಾದ ಸಚ್ಚಿನ್, ದೇವರಾಜ್, ಜಗದೀಶ್, ನವೀನ್, ಲೋಕೇಶ್ ಮುಂತಾದವರು ಆರೋಪಿಸಿದರು.
‘ಸೊಸೈಟಿಯಲ್ಲಿ ತಮಗೆ ಬೇಕಾದ ಲೆಕ್ಕಪರಿಶೋಧಕರನ್ನು ನೇಮಿಸಿಕೊಂಡು ಹಣ ದುರುಪಯೋಗ ಮಾಡಿದ್ದಾರೆ. ಅದರೂ ಸಂಘದ ಅಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ರಸಗೊಬ್ಬರ, ಪಡಿತರ ಹಾಗೂ ಇನ್ನಿತರ ಮಾರಾಟದಲ್ಲಿಯೂ ವ್ಯತ್ಯಾಸ ಕಂಡುಬಂದಿದೆ. ಲೆಕ್ಕಪರಿಶೋಧಕರನ್ನು ಬದಲಾಯಿಸಿ ವ್ಯತ್ಯಾಸಗೊಂಡ ಹಣವನ್ನು ಸಂಘಕ್ಕೆ ಪಾವತಿಸಬೇಕು, ಇಲ್ಲವಾದರೆ ಸಂಘದ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಷೇರುದಾರರು’ ಎಚ್ಚರಿಕೆ ನೀಡಿದರು.
ಇಬ್ಬೀಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್. ಚಂದ್ರೇಗೌಡ ಮಾತನಾಡಿ, ‘2023- 24ನೇ ಸಾಲಿನ ಆಡಿಟ್ ವರದಿಯಲ್ಲಿ ವ್ಯತ್ಯಾಸವಾಗಿರುವುದು ಸತ್ಯ. ವ್ಯತ್ಯಾಸವಾದ ಹಣವನ್ನು ಕಾರ್ಯದರ್ಶಿಗಳಿಂದ ಪಾವತಿ ಮಾಡಲು ನಾವು ಬದ್ಧವಾಗಿದ್ದು, ಯಾವ ಕಾರಣಕ್ಕೂ ಇಲ್ಲಿ ಭ್ರಷ್ಟಾಚಾರ ನಡೆಸಲು ನಾವು ಅವಕಾಶ ನೀಡುವುದಿಲ್ಲ’ ಎಂದರು.
ಉಪಾಧ್ಯಕ್ಷೆ ಚನ್ನಮ್ಮ ನಿರ್ದೇಶಕರಾದ ರಮೇಶ್, ರವಿಕುಮಾರ್, ಲೋಕೇಶ್, ಶಿವರಾಮಯ್ಯ, ಮಧು, ಅಣ್ಣಪ್ಪ, ತಾರೇಶ್, ನವೀನ್ ಪ್ರಸಾದ್, ನೀಲಮ್ಮ ಹಾಗೂ ಎಚ್‌ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಂ.ಜೆ. ದಿನೇಶ್, ಸಂಘದ ಸಿಇಒ ಪ್ರೇಮ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.