ADVERTISEMENT

ಬ್ಯಾಬ ಗ್ರಾಮದಲ್ಲಿ ಸಂತ್ರಸ್ತರಿಗೆ ಜಾಗ ಗುರುತಿಸಿ

ಶಾಸಕ ಎಚ್.ಕೆ.ಕುಮಾರಸ್ವಾಮಿ ಸೂಚನೆ; ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ಮುಳುಗಡೆಯಾದ ಗ್ರಾಮಗಳು

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 3:55 IST
Last Updated 7 ಜನವರಿ 2022, 3:55 IST
ಆಲೂರಿನಲ್ಲಿ ನಡೆದ ಸಭೆಯಲ್ಲಿ ಕೋವಿಡ್‍ನಿಂದ ಮೃತಪಟ್ಟ ಕುಟುಂಬದ ವಾರಸುದಾರರಿಗೆ ಎಚ್.ಕೆ. ಕುಮಾರಸ್ವಾಮಿ ಪರಿಹಾರ ಚೆಕ್‌ ವಿತರಿಸಿದರು. ಶಿರೀನ್‍ತಾಜ್, ವೇದಾ ಸುರೇಶ್, ಪುಂಡಲೀಕ, ನಾರಾಯಣಸ್ವಾಮಿ ಇದ್ದರು
ಆಲೂರಿನಲ್ಲಿ ನಡೆದ ಸಭೆಯಲ್ಲಿ ಕೋವಿಡ್‍ನಿಂದ ಮೃತಪಟ್ಟ ಕುಟುಂಬದ ವಾರಸುದಾರರಿಗೆ ಎಚ್.ಕೆ. ಕುಮಾರಸ್ವಾಮಿ ಪರಿಹಾರ ಚೆಕ್‌ ವಿತರಿಸಿದರು. ಶಿರೀನ್‍ತಾಜ್, ವೇದಾ ಸುರೇಶ್, ಪುಂಡಲೀಕ, ನಾರಾಯಣಸ್ವಾಮಿ ಇದ್ದರು   

ಆಲೂರು: 40 ವರ್ಷಗಳ ಹಿಂದೆ ಹೇಮಾವತಿ ಮುಳುಗಡೆ ಪ್ರದೇಶ ದವರಿಗೆ ಕಸಬಾ ಹೋಬಳಿ ಬ್ಯಾಬ ಗ್ರಾಮದಲ್ಲಿ ನೀಡಿರುವ ಜಮೀನನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಜಾಗ ಗುರುತಿಸಿ ಕೊಡಬೇಕು ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆಡಳಿತ ವರ್ಗದಿಂದ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ಮುಳುಗಡೆಯಾದ ಗ್ರಾಮಗಳ ಸಂತ್ರಸ್ತರಿಗೆ ಬ್ಯಾಬ ಅರಣ್ಯ ವಲಯದಲ್ಲಿ ಜಾಗ ನೀಡಿ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಆದರೆ, ಈವರೆಗೂ ಹಕ್ಕುದಾರರಿಗೆ ಅವರ ಜಾಗವನ್ನು ಸರ್ವೆ ಮಾಡಿ ಗುರುತು ಮಾಡಿಕೊಟ್ಟಿಲ್ಲ. ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಹಶೀಲ್ದಾರ್, ಭೂ ದಾಖಲೆ ಇಲಾಖೆ ಸಹಾಯಕ ನಿರ್ದೇಶಕರು ಸರ್ವೆ ಮಾಡಿ ಜಾಗ ಗುರುತಿಸಿ ಕೊಡುವಂತೆ ಆದೇಶಿಸಿದರು.

ADVERTISEMENT

ಹಂಪನಕುಪ್ಪೆ ಗ್ರಾಮದಲ್ಲಿ ಸ್ಮಶಾನಕ್ಕೆ ಗುರುತು ಮಾಡಿರುವ ಜಾಗಕ್ಕೆ ಟ್ರೆಂಚ್‌ ಮಾಡಬೇಕು. ಪರಿಶಿಷ್ಟ ಜಾತಿಗೊಳಪಟ್ಟ ಸುಮಾರು 25 ಮನೆಗಳಿಗೆ ರಸ್ತೆ, ದಾರಿದೀಪವಿಲ್ಲ ಎಂದು ವೆಂಕಟಯ್ಯ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ವಿಶೇಷ ಘಟಕ ಯೋಜನೆಯಡಿ ಸೌಲಭ್ಯ ಒದಗಿಸಲಾಗುವುದು’ ಎಂದರು.

ಡಾ.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಮಂಜೂರಾಗಿರುವ ಕೊಳವೆ ಬಾವಿಗಳಿಗೆ ಒಂದು ತಿಂಗಳಿನಲ್ಲಿ ವಿದ್ಯುತ್ ಸಂಪ‍ರ್ಕ ಕಲ್ಪಿಸುವುದಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಶಂಭುಲಿಂಗ ತಿಳಿಸಿದರು.

‘ಬೂದನಹಳ್ಳಿ ಗ್ರಾಮದ ಸರ್ವೆ ನಂ.10ರಲ್ಲಿ 10 ಫಲಾನುಭವಿಗಳಿಗೆ 1980ರಲ್ಲಿ ಜಮೀನು ಮಂಜೂರಾಗಿ ದ್ದರೂ ಜಾಗ ಗುರುತು ಮಾಡಿಲ್ಲ’ ಎಂದು ಸಭೆಯಲ್ಲಿದ್ದವರು ಶಾಸಕರ ಗಮನಕ್ಕೆ ತಂದರು.

‘ಸ್ಥಳಕ್ಕೆ ನಾನು ಬರುತ್ತೇನೆ. ತೊಂದರೆ ಏನೆಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕಾಗಿ ಪ.ಪಂ ಇ-ಸ್ವತ್ತು ಮಾಡಿಕೊಡುವಂತೆ ಮುಖ್ಯಾಧಿಕಾರಿ ನಟರಾಜ್ ಅವರಿಗೆ ಸೂಚಿಸಿದರು.

ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳ ವಾರಸುದಾರರಾದ ಮೇಲಮ್ಮ, ದಿನೇಶ, ಪುಟ್ಟರಾಜು, ಲತಾಮಣಿ, ತಿಲಕೇಶ್, ಪಲ್ಲವಿ, ಶೋಭಾ, ಹನಮೇಗೌಡ, ನಾಗೇಶ್, ರತ್ನಾ, ಪವಿತ್ರಾ, ಜಯಮ್ಮ, ನಸೀಮಾ ಅವರಿಗೆ ತಲಾ ₹1 ಲಕ್ಷ ಚೆಕ್ ವಿತರಿಸಲಾಯಿತು.

ಅಲ್ಲದೆ, ಈ ಕುಟುಂಬಗಳ ವಿಧವೆಯರಿಗೆ ಕೆಲ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅನುಕಂಪದ ಆಧಾರದಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಲು ತಹಶೀಲ್ದಾರ್, ತಾ.ಪಂ ಇ.ಒ.ಗೆ ಶಾಸಕರು ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪುಂಡಲೀಕ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವೇದಾ ಸುರೇಶ್, ದಲಿತ ಸಮಿತಿ ಮುಖಂಡರಾದ ದೇವರಾಜು, ರಂಗಯ್ಯ, ವೆಂಕಟಯ್ಯ, ಲೋಕೇಶ್, ಬಸವಯ್ಯ, ತಿಮ್ಮಯ್ಯ, ಕಾಳಯ್ಯ ಇದ್ದರು.

ಪರಿಹಾರದ ಹಣ ನೀಡಲು ಆಗ್ರಹ

ಎತ್ತಿನಹೊಳೆ ಯೋಜನೆಗೆ ಒಳಪಟ್ಟಿರುವ ಜಮೀನುದಾರರಿಗೆ ಎರಡನೇ ಕಂತು ಪರಿಹಾರದ ಹಣ ಇನ್ನೂ ನೀಡಿಲ್ಲ. ಮರಸು ಹೊಸಳ್ಳಿ ಗ್ರಾಮದಲ್ಲಿ ದಲಿತರಿಗೆ ಮಂಜೂರಾಗಿರುವ ಜಮೀನು ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯದ ಆದೇಶದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಶಿರೀನ್‍ತಾಜ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.