ADVERTISEMENT

ಹೇಮಾವತಿ ನದಿ: 12ನೇ ಶತಮಾನದ ವಿಗ್ರಹ ಪತ್ತೆ

ಮರಳು ತೆಗೆಯುವಾಗ ದೊರೆತ ಚನ್ನಕೇಶವಸ್ವಾಮಿ ವಿಗ್ರಹ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 3:48 IST
Last Updated 25 ಮಾರ್ಚ್ 2021, 3:48 IST
ಪತ್ತೆಯಾದ ಚನ್ನಕೇಶವಸ್ವಾಮಿ ವಿಗ್ರಹ
ಪತ್ತೆಯಾದ ಚನ್ನಕೇಶವಸ್ವಾಮಿ ವಿಗ್ರಹ   

ಸಕಲೇಶಪುರ: ಹೇಮಾವತಿ ನದಿಯಲ್ಲಿ ಯಂತ್ರದಿಂದ ಮರಳು ತೆಗೆಯುತ್ತಿದ್ದಾಗ 4.5 ಅಡಿ ಎತ್ತರದ ಚನ್ನಕೇಶವಸ್ವಾಮಿ ವಿಗ್ರಹ ಪತ್ತೆಯಾಗಿರುವ ಘಟನೆ ತಾಲ್ಲೂಕಿನ ಹಾಲೇಬೇಲೂರು (ಹಳೆ ಬೇಲೂರು) ಗ್ರಾಮದಲ್ಲಿ ಮಂಗಳವಾರ ಪತ್ತೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೇಲೂರು ಚನ್ನಕೇಶವಸ್ವಾಮಿ ದೇವಸ್ಥಾನದ ಕೆತ್ತನೆಯನ್ನು ಸಂಪೂರ್ಣವಾಗಿ ಹೋಲುವಂತೆ ವಿಗ್ರಹ ಇದೆ. ಯಂತ್ರದಲ್ಲಿ ಮರಳು ತೆಗೆಯುವಾಗ ಜೆಸಿಬಿ ಯಂತ್ರದ ಹಲ್ಲುಗಳಿಂದ ಸ್ವಲ್ಪ ಭಿನ್ನವಾಗಿದ್ದನ್ನು ಬಿಟ್ಟರೆ ಬೇರೆ ಯಾವುದೇ ಹಾನಿ ಆಗಿಲ್ಲ. ಮರಳು ತೆಗೆಯುವಾಗ ಸಿಕ್ಕಿದ ವಿಗ್ರಹವನ್ನು ನೋಡಿ ಗಾಬರಿಗೊಂಡು ಪುನಃ ಮರಳಿನಲ್ಲೇ ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಒಬ್ಬರಿಂದ ಒಬ್ಬರಿಗೆ ಈ ವಿಷಯ ಹರಡುತ್ತಿದ್ದಂತೆ ಗ್ರಾಮಸ್ಥರು ಬುಧವಾರ ಮಧ್ಯಾಹ್ನ ಸ್ಥಳಕ್ಕೆ ತೆರಳಿ ವಿಗ್ರಹವನ್ನು ಹೊರ ತೆಗೆಸಿದರು.

ಇದೇ ಗ್ರಾಮದಲ್ಲಿ ಹೋಯ್ಸಳರ ಕಾಲದಲ್ಲೇ ನಿರ್ಮಾಣ ಆಗಿದ್ದು, ಶಿಥಿಲಾವಸ್ಥೆಯಲ್ಲಿದ್ದ ಚನ್ನಕೇಶವ ದೇವಸ್ಥಾನವನ್ನು ಪುನರ್‌ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ. ಈ ದೇವಸ್ಥಾನ ಸ್ಥಳಕ್ಕೆ ವಿಗ್ರಹವನ್ನು ತಂದು ಸ್ವಚ್ಛಗೊಳಿಸಿ ಗ್ರಾಮಸ್ಥರು ಪೂಜೆ ಸಲ್ಲಿಸಿದರು.

ADVERTISEMENT

ಸ್ಥಳಕ್ಕೆ ತಹಶೀಲ್ದಾರ್‌ ಎಚ್‌.ಬಿ.ಜೈಕುಮಾರ್‌, ಪಟ್ಟಣ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಬಸವರಾಜು ಚಿಂಚೊಳ್ಳಿ, ಕಸಬಾ ಆರ್‌ಐ ಎಂ.ಎಸ್‌.ಸುರೇಶ್‌, ವಿಎ ಗಳಾದ ಸಿದ್ದಲಿಂಗೇಶ್, ಆಸೀಫ್, ಮಳಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲೇಬೇಲೂರು ಕುಮಾರ್, ರಾಜು ಭೇಟಿ ನೀಡಿ ಪರಿಶೀಲಿಸಿದರು.

ಮರಳು ತೆಗೆಯುವಾಗ ಹೇಮಾವತಿ ನದಿಯಲ್ಲಿ ದೊರೆತಿರುವ ಚನ್ನಕೇಶ‌ವಸ್ವಾಮಿ ವಿಗ್ರಹ ಸುಂದರ ವಾಸ್ತು ಶಿಲ್ಪ ಹೊಂದಿದೆ. ಕೆತ್ತನೆಯ ಶೈಲಿಯಿಂದ ಇದು ಹೋಯ್ಸಳರ ಕಾಲದಲ್ಲಿಯೇ ನಿರ್ಮಾಣವಾಗಿದೆ ಎಂದು ಸಂಶಯ ಇಲ್ಲದೆ ಹೇಳಬಹುದು. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿ ಆದೇಶ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಮದಲ್ಲಿ ಹೋಯ್ಸಳರ ಕಾಲದಲ್ಲಿ ನಿರ್ಮಾಣ ಮಾಡಿದ್ದ ದೇವಸ್ಥಾನ ಸಂಪೂರ್ಣ ಶಿಥಿಲಾವಸ್ಥೆಯಲ್ಲಿತ್ತು. ಅದನ್ನು ತೆಗೆದು ಅಲ್ಲಿ ಹೊಸ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದೇವೆ. ಎಷ್ಟೊಂದು ಕಾಕತಾಳೀಯ ಎಂದರೆ 12ನೇ ಶತಮಾನದಲ್ಲಿ ನಿರ್ಮಾಣ ಮಾಡಿದ್ದ ದೇವಸ್ಥಾನ ಜೀರ್ಣೋದ್ಧಾರ ಸಂದರ್ಭದಲ್ಲಿ ವಿಗ್ರಹ ದೊರೆತಿರುವುದು ಗ್ರಾಮಸ್ಥರಿಗೆ ಸಂತೋಷ ಉಂಟುಮಾಡಿದೆ. ಪುರಾತತ್ವ ಇಲಾಖೆಯವರು ಸಂಶೋಧನೆ ನಡೆಸಿದ ನಂತರ ಆ‌ ವಿಗ್ರಹವನ್ನು ಗ್ರಾಮದ ದೇವಸ್ಥಾನಕ್ಕೆ ನೀಡಬೇಕು ಎಂದು ಗ್ರಾ.ಪಂ.ಮಾಜಿ ಅಧ್ಯಕ್ಷ ಹಾಲೇಬೇಲೂರು ಕುಮಾರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.