ADVERTISEMENT

ಅಕ್ರಮ ದಾಸ್ತಾನು: ಮರಳು ಅಡ್ಡೆ ಮೇಲೆ ದಾಳಿ

ಹೇಮಾವತಿ ನದಿ ಬಗೆದು ಸಂಗ್ರಹಿಸಿದ್ದ ಮರಳು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 3:19 IST
Last Updated 14 ಫೆಬ್ರುವರಿ 2026, 3:19 IST
ಸಕಲೇಶಪುರ ತಾಲ್ಲೂಕಿನ ಹೆನ್ನಲಿ ಗ್ರಾಮದಲ್ಲಿ ಮರಳು ಅಡ್ಡೆಯ ಮೇಲೆ ಶುಕ್ರವಾರ ತಹಶೀಲ್ದಾರ್ ಕೆ.ಎಸ್. ಸುಪ್ರೀತಾ, ಪೊಲೀಸ್ ಇನ್‌ಸ್ಪೆಕ್ಟರ್ ವನರಾಜು ದಾಳಿ ನಡೆಸಿ ವಶಕ್ಕೆ ಪಡೆದರು
ಸಕಲೇಶಪುರ ತಾಲ್ಲೂಕಿನ ಹೆನ್ನಲಿ ಗ್ರಾಮದಲ್ಲಿ ಮರಳು ಅಡ್ಡೆಯ ಮೇಲೆ ಶುಕ್ರವಾರ ತಹಶೀಲ್ದಾರ್ ಕೆ.ಎಸ್. ಸುಪ್ರೀತಾ, ಪೊಲೀಸ್ ಇನ್‌ಸ್ಪೆಕ್ಟರ್ ವನರಾಜು ದಾಳಿ ನಡೆಸಿ ವಶಕ್ಕೆ ಪಡೆದರು   

ಸಕಲೇಶಪುರ: ಅಕ್ರಮವಾಗಿ ದಾಸ್ತಾನು ಮಾಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮರಳನ್ನು ತಾಲ್ಲೂಕಿನ ಹೆನ್ನಲಿ ಗ್ರಾಮದಲ್ಲಿ ಶುಕ್ರವಾರ ತಹಶೀಲ್ದಾರ್ ಕೆ.ಎಸ್.ಸುಪ್ರೀತಾ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ವನರಾಜು ವಶಕ್ಕೆ ಪಡೆದಿದ್ದಾರೆ.

ಹೇಮಾವತಿ ನದಿಯಿಂದ ಕಾನೂನು ಬಾಹಿರವಾಗಿ ಬಗೆದು ಹತ್ತಾರು ಲಾರಿ ಲೋಡ್‌ನಷ್ಟು ಮರಳನ್ನು ನದಿ ಪಾತ್ರದ ಒಂದು ಜಾಗದಲ್ಲಿ ದಾಸ್ತಾನು ಮಾಡಲಾಗಿತ್ತು. ನದಿಯಿಂದ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಮಾಡಿದವರು ಯಾರು ಎಂಬುದು ಪತ್ತೆಯಾಗಿಲ್ಲ. ಕಾನೂನುಗಳು ಕಠಿಣವಾಗಿದ್ದರೂ ಸಹ ಯಾರ ಭಯವೂ ಇಲ್ಲದೆ ಈ ರೀತಿ ರಾಜರೋಷವಾಗಿ ನದಿಯಿಂದ ಮರಳು ತೆಗೆದು ದಾಸ್ತಾನು ಮಾಡುವುದು, ಕಳ್ಳ ಸಾಗಣೆ ಮಾಡುವುತ್ತಿರುವುದು ಆಶ್ವರ್ಯ ಉಂಟು ಮಾಡಿದೆ ಎಂದು ತಹಶೀಲ್ದಾರ್ ಕೆ.ಎಸ್‌. ಸುಪ್ರೀತಾ ಸುದ್ದಿಗಾರರಿಗೆ ಹೇಳಿದರು.

ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲೇ ಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಇಂತಹ ಅಕ್ರಮ ಮರಳು ಕಳ್ಳ ಸಾಗಣೆ ಬಗ್ಗೆ ಮಾಹಿತಿ ನೀಡಲಾಗುವುದು. ಅವರ ನಿರ್ದೇಶನದ ಮೇರೆಗೆ ಮರಳು ಅಡ್ಡೆಗಳ ಮೇಲೆ ನಿರಂತರ ದಾಳಿ ನಡೆಸಲಾಗುವುದು ಎಂದರು.

ADVERTISEMENT

ಜಿಲ್ಲೆಯ ಜೀವ ನದಿ ಹೇಮಾವತಿ ಒಡಲನ್ನು ಮನಸ್ಸಿಗೆ ಬಂದಂತೆ ಬಗೆದು ಮರಳು ತೆಗೆಯುವುದರಿಂದ ನದಿಯ ನೈಸರ್ಗಿಕ ಹರಿವು ಹಾಗೂ ನದಿಯ ಅಂತರ್ಜಲದ ಮಟ್ಟ ಕಾಯ್ದುಕೊಳ್ಳುವ ಕ್ರಿಯೆಗೆ ಭಾರೀ ಧಕ್ಕೆ ಉಂಟಾಗುತ್ತದೆ. ಅಕ್ರಮ ಮರಳು ಸಾಗಣೆ ತಡೆಯುವುದು ಅಧಿಕಾರಿಗಳ ಕರ್ತವ್ಯ ಮಾತ್ರವಲ್ಲ, ಸ್ಥಳೀಯರು ಸಹ ಇದನ್ನು ಖಂಡಿಸಬೇಕು. ಮರಳು ದಂಧೆ ನಡೆಯುವ ಬಗ್ಗೆ ಖಚಿತವಾದ ಮಾಹಿತಿ ನೀಡಬೇಕು. ಎಲ್ಲರ ಕೈಯಲ್ಲಿಯೂ ಸ್ಮಾರ್ಟ್‌ ಮೊಬೈಲ್‌ ಪೋನ್‌ಗಳು ಇವೆ. ಮರಳು ತೆಗೆಯುವ, ಕಳ್ಳ ಸಾಗಣೆ ಮಾಡುವ ಪೋಟೊ, ವಿಡಿಯೊಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಕಳಿಸಿ, ಮಾಹಿತಿ ನೀಡಿದವರು ಯಾರು ಎಂಬುದನ್ನು ಗೌಪ್ಯವಾಗಿ ಇಡಲಾಗುವುದು ಎಂದರು.

ರೆವಿನ್ಯೂ ಇನ್‌ಸ್ಪೆಕ್ಟರ್ ದಾನುಪ್ರಕಾಶ್, ಗ್ರಾಮ ಲೆಕ್ಕಾಧಿಕಾರಿ ಶಿಲ್ಪಾ ದಾಳಿಯಲ್ಲಿ ಇದ್ದರು.

ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

ತಾಲ್ಲೂಕಿನಲ್ಲಿ ಹೇಮಾವತಿ ನದಿ ಸುಮಾರು 55 ಕಿ.ಮೀ. ಉದ್ದ ಹರಿಯುತ್ತದೆ. ಈ ನದಿಯ ಪಾತ್ರ ಮಾತ್ರವಲ್ಲ ಹರಿಯುತ್ತಿರುವ ನದಿಯಿಂದಲೂ ಅಕ್ರಮವಾಗಿ ಭಾರೀ ಪ್ರಮಾಣದಲ್ಲಿ ಮರಳು ತೆಗೆಯಲಾಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮ ತಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಮೊದಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.