ಹಾಸನ: ರಾಜ್ಯ ಬಜೆಟ್ ಮಂಡನೆಗೆ ಸಿದ್ಧತೆಗಳು ಆರಂಭವಾಗುತ್ತಿದ್ದಂತೆಯೇ, ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತಡ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಇರುವ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಉದ್ಯಮ ಸ್ಥಾಪನೆ ಮಾಡುವಂತೆ ಕೈಗಾರಿಕೋದ್ಯಮಿಗಳು ಮನವಿ ಮಾಡಿದ್ದಾರೆ.
ಈಚೆಗೆ ಹಾಸನ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ ಮತ್ತು ಕೈಗಾರಿಕೋದ್ಯಮಿಗಳು, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿದ್ದು, ಜಿಲ್ಲೆಯಲ್ಲಿರುವ ಅವಕಾಶಗಳ ಕುರಿತು ವಿಸ್ತೃತ ವರದಿ ಸಲ್ಲಿಸಿದ್ದಾರೆ.
ಹಾಸನ ಜಿಲ್ಲೆಯು ಅಗತ್ಯ ಸೌಕರ್ಯಗಳುಳ್ಳ 3 ನೇ ಶ್ರೇಣಿಯ ನಗರಗಳಲ್ಲಿ ಒಂದಾಗಿದೆ. ಬೆಂಗಳೂರಿನಿಂದ ಕೇವಲ ಎರಡೂವರೆ ಗಂಟೆಗಳ ಪ್ರಯಾಣವಿದ್ದು, ಮೈಸೂರಿಗೆ ಬಹಳ ಹತ್ತಿರದಲ್ಲಿದೆ. ಮುಖ್ಯವಾಗಿ ಬಂದರು ನಗರ ಮಂಗಳೂರಿಗೂ ಹತ್ತಿರವಾಗಿದೆ. ರಸ್ತೆ ಮತ್ತು ರೈಲಿನ ಉತ್ತಮ ಸಂಪರ್ಕ ಹೊಂದಿದೆ. ಜಿಲ್ಲೆಯು ಸ್ವಚ್ಛವಾದ ಗಾಳಿಯನ್ನು ಹೊಂದಿದೆ. ಜೀವನ ವೆಚ್ಚ ಮತ್ತು ರಿಯಲ್ ಎಸ್ಟೇಟ್ ವೆಚ್ಚವು ಕೈಗೆಟುಕುವಂತಿದೆ.
ಆಹ್ಲಾದಕರ ಹವಾಮಾನ, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಹೇರಳವಾದ ಮಾನವ ಸಂಪನ್ಮೂಲ ಹೊಂದಿರುವ ಹಾಸನವು, ಬೆಂಗಳೂರು ಮತ್ತು ಮಂಗಳೂರು ನಡುವಿನ ಕೇಂದ್ರ ಬಿಂದುವಾಗಿದೆ.
ಜಿಲ್ಲೆಯಲ್ಲಿ 5-6 ಎಂಜಿನಿಯರಿಂಗ್ ಕಾಲೇಜುಗಳು, 5-6 ಡಿಪ್ಲೊಮಾ ಕಾಲೇಜುಗಳು ಮತ್ತು 8-10 ಐಟಿಐಗಳಿವೆ. ಪ್ರತಿವರ್ಷ ಸಾವಿರಾರು ತಾಂತ್ರಿಕ ಪದವೀಧರರು ತಯಾರಾಗುತ್ತಿದ್ದಾರೆ. ಹಾಸನದಲ್ಲಿ ಐಟಿ ಮತ್ತು ಹಾರ್ಡ್‌ವೇರ್ ಕಂಪನಿಗಳನ್ನು ಸ್ಥಾಪಿಸುವುದರಿಂದ ಪ್ರತಿವರ್ಷ ಉತ್ತೀರ್ಣರಾದ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಲಿದೆ.
ಆಟೋಮೊಬೈಲ್, ಮೂಲಸೌಕರ್ಯ, ಏರೋನಾಟಿಕ್ಸ್, ಯಂತ್ರೋಪಕರಣ ಮತ್ತು ರಕ್ಷಣಾ ಸಂಬಂಧಿತ ಉತ್ಪಾದನಾ ಕೈಗಾರಿಕೆಗಳಿಂದ ಮಾತ್ರ ಜಿಲ್ಲೆಯ ಸರ್ವಾಂಗೀಣ ಬೆಳವಣಿಗೆ ಸಾಧಿಸಬಹುದು. ಇದು ನೂರಾರು ಪೂರಕ ಘಟಕಗಳಿಗೆ ಅವಕಾಶ ನೀಡಲಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ಸೃಷ್ಟಿಸುತ್ತದೆ ಎಂದು ಉದ್ಯಮಿಗಳು ಹೇಳಿದ್ದಾರೆ.
ಹಾಸನವು ಕೃಷಿ ಆಧಾರಿತ ಜಿಲ್ಲೆಯಾಗಿದೆ. ಕೃಷಿ ಆಧಾರಿತ ಕೈಗಾರಿಕೆಗಳಿಗೆ ಹಾಸನ ಜಿಲ್ಲೆಯನ್ನು ಶಿಫಾರಸು ಮಾಡುವುದು ಅಗತ್ಯವಾಗಿದೆ. ವಿಮಾನ ನಿಲ್ದಾಣದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಹೆಚ್ಚುವರಿ ಅನುದಾನ, ಅಗತ್ಯ ಬೆಂಬಲ ಮತ್ತು ಉಪಕ್ರಮಗಳೊಂದಿಗೆ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.