ADVERTISEMENT

ಹಳೇಬೀಡು: ಹೆಚ್ಚುತ್ತಿರುವ ಧರ್ಮಸ್ಥಳ ಪಾದಯಾತ್ರಿಗಳ ಸಂಖ್ಯೆ..

ಮೈ ನಡುಗಿಸುವ ಚಳಿ, ಬಿಸಿಲಿಗೆ ಬಸವಳಿದ ಯಾತ್ರಾರ್ಥಿಗಳು

ಎಚ್.ಎಸ್.ಅನಿಲ್ ಕುಮಾರ್
Published 12 ಫೆಬ್ರುವರಿ 2026, 4:27 IST
Last Updated 12 ಫೆಬ್ರುವರಿ 2026, 4:27 IST
ತುಮಕೂರು ಜಿಲ್ಲೆಯ ಮಧುಗಿರಿಯ ಪಾದಯಾತ್ರಿಗಳು ಮೈನಡುಗಿಸುವ ಚಳಿಯಲ್ಲಿ ತಲೆಗೆ ಪೇಟ ಸುತ್ತಿಕೊಂಡು ಹಳೇಬೀಡಿನಲ್ಲಿ ಬುಧವಾರ ಮುಂಜಾನೆ ಹೆಜ್ಜೆ ಹಾಕಿದರು  
ತುಮಕೂರು ಜಿಲ್ಲೆಯ ಮಧುಗಿರಿಯ ಪಾದಯಾತ್ರಿಗಳು ಮೈನಡುಗಿಸುವ ಚಳಿಯಲ್ಲಿ ತಲೆಗೆ ಪೇಟ ಸುತ್ತಿಕೊಂಡು ಹಳೇಬೀಡಿನಲ್ಲಿ ಬುಧವಾರ ಮುಂಜಾನೆ ಹೆಜ್ಜೆ ಹಾಕಿದರು      

ಹಳೇಬೀಡು: ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ಶಿವರಾತ್ರಿ ಪ್ರಯುಕ್ತ ಪಾದಯಾತ್ರೆಗೆ ತೆರಳುತ್ತಿರುವ ಭಕ್ತರು, ಮುಂಜಾನೆ ಮೈ ನಡುಗಿಸುವ ಚಳಿಗೆ ತತ್ತರಿಸಿದರೆ, ಹಗಲು ಹೊತ್ತಿನಲ್ಲಿ ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದಾರೆ.

ಬಿಸಿಲು, ಚಳಿ ಎರಡನ್ನೂ ಲೆಕ್ಕಿಸದೇ ಸಾಕಷ್ಟು ಪಾದಯಾತ್ರಿಗಳು ತಂಡೋಪತಂಡವಾಗಿ ಹಳೇಬೀಡು ಹಾಗೂ ಹಗರೆ ಮಾರ್ಗವಾಗಿ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಉರಿಯುವ ಬಿಸಿಲು ತಾಳಲಾರದೆ ತೋಟ, ಬಸ್ ತಂಗುದಾಣ, ರಸ್ತೆ ಬದಿಯ ಮರದ ಕಳಗೆ ಕೆಲವು ಪಾದಯಾತ್ರಿಗಳು ವಿಶ್ರಾಂತಿ ಪಡೆದು ಮುಂದೆ ಸಾಗುತ್ತಿದ್ದಾರೆ.

ಮುಂಜಾನೆ ಚಳಿಯನ್ನು ತಾಳದೇ ತತ್ತರಿಸುತ್ತಿದ್ದಾರೆ. ಮಹಿಳೆಯರು ತಲೆಗೆ ಬಟ್ಟೆ ಕಟ್ಟಿಕೊಂಡು, ಉಲನ್‌ ಉಡುಪು ಧರಿಸಿ ನಡೆಯುತ್ತಿದ್ದಾರೆ. ಪುರುಷರು ತಲೆಗೆ ಟೋಪಿ ಇಲ್ಲವೇ, ಪೇಟ ಧರಿಸಿಕೊಂಡು ಶಾಲು ಹೊದ್ದು ಸಾಗುತ್ತಿದ್ದಾರೆ. ಮುಂಜಾನೆ ನಸುಕಿನಲ್ಲಿ ಕಂಬಳಿ ಹೊದ್ದು ಸಾಗುವವರೂ ಕಂಡು ಬರುತ್ತಿದ್ದಾರೆ. 

ADVERTISEMENT

ಪಾದಯಾತ್ರಿಗಳು ವಿಶ್ರಾಂತಿ ಪಡೆದು ತೆರಳುವುದಕ್ಕಾಗಿ ಕೆಲವು ಕಡೆ ದಾನಿಗಳು ಶಾಮಿಯಾನ ಹಾಕಿಸಿದ್ದಾರೆ. ಸಾಕಷ್ಟು ಕಡೆ ಕುಡಿಯುವ ನೀರು, ಮಜ್ಜಿಗೆ ಹಾಗೂ ತಂಪು ಪಾನೀಯ ವಿತರಿಸಲಾಗುತ್ತಿದೆ.  

ಕಾಡು ಪ್ರಾಣಿಗಳ ಭಯ: ಮುಂಜಾನೆ ಚಳಿ ಸಮಯ ಹಾಗೂ ಬಿಸಿಲು ಸಮಯದಲ್ಲಿ ವಿಶ್ರಾಂತಿ ಪಡೆದು, ರಾತ್ರಿ ನಡೆಯಲು ಸುರಕ್ಷತೆ ಇರುವುದಿಲ್ಲ. ಕಾಡಿನ ಮಧ್ಯದ ರಸ್ತೆಯಲ್ಲಿ ಸಾಗಲು ಭಯವಾಗುತ್ತದೆ ಎಂದು ಮಧುಗಿರಿಯ ಯಾತ್ರಿಕ ರಂಗಸ್ವಾಮಿ ಹೇಳಿದರು. 

ಧರ್ಮಸ್ಥಳಕ್ಕೆ ಸಾಗುವ ಬೇಲೂರು, ಮೂಡಿಗೆರೆ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ತಂಡೋಪ ತಂಡವಾಗಿ ಆನೆಗಳು ರಸ್ತೆ ದಾಟುತ್ತವೆ. ಮಲೆನಾಡಿನ ಊರುಗಳಲ್ಲಿಯೂ ಆಗಾಗ್ಗೆ ಆನೆ ಓಡಾಡುತ್ತಿರುತ್ತವೆ ಎಂಬ ಮಾಹಿತಿ ಇದೆ. ಕೆಲವು ಕಡೆ ಕಾಡಾನೆ, ಕಾಡೆಮ್ಮೆ ದಾಂಧಲೆ ಮಾಡಿದ ನಿದರ್ಶನ ಇದೆ. ಬಯಲು ಸೀಮೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಮಲೆನಾಡಿನಲ್ಲಿಯೂ ಚಿರತೆ ಮಾನವರ ಮೇಲೆ ದಾಳಿ ಮಾಡಿದ ಘಟನೆ ಸಂಭವಿಸಿದೆ. ಅರಣ್ಯ ಇಲಾಖೆ ಪಾದಯಾತ್ರಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೋಹನ್.  

ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಟೋಲ್‌ಗೇಟ್‌ ಬಳಿ ಪಾದಯಾತ್ರಿಗಳಿಗೆ ವಿತರಿಸಲು ಇಟ್ಟಿರುವ ಎಳನೀರು ಕಾಯಿಗಳು
ಮಂಜುನಾಥ 
ಪರಮೇಶ್

ಪಾದಯಾತ್ರೆ ಸಾಗುವ ದಾರಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ತಾತ್ಕಾಲಿಕ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸ್ಥಳೀಯ ಸಂಸ್ಥೆಗಳು ಕೈಜೋಡಿಸಬೇಕು

-ಮಂಜುನಾಥ ಹಳೇಬೀಡು ಮುಖಂಡ

ಧರ್ಮಸ್ಥಳ ಪಾದಯಾತ್ರೆ ವಿಶಿಷ್ಟವಾಗಿದೆ. ಹಳೇಬೀಡು ಹಗರೆ ಭಾಗದಿಂದಲೂ ಸಾಕಷ್ಟು ಮಂದಿ ಪಾದಯಾತ್ರೆಯಲ್ಲಿ ತೆರಳುತ್ತಾರೆ

-ಅಂದಾಲೆ ಪರಮೇಶ್ ರೈತಸಂಘದ ಸಾಮೂಹಿಕ ನಾಯಕ

ಶೌಚಾಲಯ ಇಲ್ಲ ಸ್ವಚ್ಛತೆ ಕೊರತೆ

ಪಾದಯಾತ್ರಿಗಳ ನಗರ ಪ್ರವೇಶಿಸಿದಾಗ ಮಾತ್ರ ಸಾರ್ವಜನಿಕ ಶೌಚಾಲಯ ಕಾಣಸಿಗುತ್ತವೆ. ಊರಾಚೆಯಲ್ಲಿ ಮಾತ್ರವಲ್ಲದೇ ಚಿಕ್ಕ ಊರುಗಳಲ್ಲಿಯೂ ಪಾದಚಾರಿಗಳಿಗೆ ಶೌಚಾಲಯ ಸೌಲಭ್ಯ ದೊರಕುತ್ತಿಲ್ಲ. ಹೀಗಾಗಿ ಯಾತ್ರಾರ್ಥಿಗಳಿಗೆ ಬಯಲೇ ಶೌಚಾಲಯವಾಗಿದೆ.  ನೀರಿನ ಬಾಟಲಿ ಹಾಗೂ ತಿಂಡಿ ತಿನಿಸುಗಳನ್ನು ಪ್ಯಾಕ್ ಮಾಡಿದ ಪ್ಲಾಸ್ಟಿಕ್ ಅನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಹೀಗಾಗಿ ಕಾಡಂಚಿನ ಹಾಗೂ ಊರಾಚೆಯ ಪ್ರದೇಶದಲ್ಲಿ ಸ್ವಚ್ಛತೆಯ ಕೊರತೆ ಆಗುತ್ತದೆ. ಮೂಡಿಗೆರೆ ಕೊಟ್ಟಿಗೆಹಾರ ಹಾಗೂ ಚಾರ್ಮಾಡಿಯ ಬಳಿ ಹೆಚ್ಚಿನ ತ್ಯಾಜ್ಯ ಬೀಳಲಿದೆ. ಪಾದಯಾತ್ರಿಗಳು ಎಚ್ಚರವಹಿಸಬೇಕು ಎನ್ನುತ್ತಾರೆ ಹಳೇಬೀಡಿನ ರೈತ ಎಚ್.ಬಿ.ಮಹೇಶ್.

ಶಾಂತಿಗ್ರಾಮ ಟೋಲ್ ಬಳಿ ಉಚಿತ ಎಳನೀರು

ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ತೆರಳುವ ಭಕ್ತಾದಿಗಳಿಗೆ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಟೋಲ್‌ ಗೇಟ್‌ ಬಳಿ ಉಚಿತ ಎಳನೀರು ಸೇವೆ ಒದಗಿಸಲಾಗುತ್ತಿದೆ. ಬೆಂಗಳೂರು ಸಮೀಪದ ಬೇಡರಹಳ್ಳಿ ಕಬ್ಬಾಳಮ್ಮ ಪಾದಯಾತ್ರೆ ಸಮಿತಿಯ ಸದಸ್ಯರು ಸುಮಾರು ಐದು ಸಾವಿರ ಎಳನೀರನ್ನು ಪಾದಯಾತ್ರಿಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ. ಸಮಿತಿಯ ಸದಸ್ಯರಾದ ಗಂಗಾಧರ ಮಾಚೇನಹಳ್ಳಿ ಬೈರೇಗೌಡ ಬೆಟ್ಟಸ್ವಾಮಿಗೌಡ ಲೋಕೇಶ್ ಮತ್ತು ಪುಟ್ಟಲಿಂಗಯ್ಯ ನಿರಂತರವಾಗಿ ಯಾತ್ರಾರ್ಥಿಗಳ ಸೇವೆಯಲ್ಲಿ ಭಾಗಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.