ADVERTISEMENT

ಹೆಚ್ಚುತ್ತಿರುವ ಬಿಸಿಲಿನ ಪ್ರಖರತೆ: ಕಾಂಡಕ್ಕೆ ಸುಣ್ಣ ಬಳಿಯುತ್ತಿರುವ ಬೆಳೆಗಾರರು

ಅಡಿಕೆ ಗಿಡ ಸಂರಕ್ಷಣೆಗೆ ರೈತರಿಂದ ಕ್ರಮ

ಎಚ್.ಎಸ್.ಅನಿಲ್ ಕುಮಾರ್
Published 11 ಫೆಬ್ರುವರಿ 2026, 7:49 IST
Last Updated 11 ಫೆಬ್ರುವರಿ 2026, 7:49 IST
ಬಿಸಿಲಿನಿಂದ ರಕ್ಷಿಸಲು ಹಳೇಬೀಡು ಸಮೀಪದ ಯಲಹಂಕ-ಸಂಕೇನಹಳ್ಳಿ ರಸ್ತೆ ಬದಿಯ ತೋಟದಲ್ಲಿ ಅಡಿಕೆ ಗಿಡದ ಕಾಂಡಕ್ಕೆ ಸುಣ್ಣ ಬಳಿದಿರುವುದು 
ಬಿಸಿಲಿನಿಂದ ರಕ್ಷಿಸಲು ಹಳೇಬೀಡು ಸಮೀಪದ ಯಲಹಂಕ-ಸಂಕೇನಹಳ್ಳಿ ರಸ್ತೆ ಬದಿಯ ತೋಟದಲ್ಲಿ ಅಡಿಕೆ ಗಿಡದ ಕಾಂಡಕ್ಕೆ ಸುಣ್ಣ ಬಳಿದಿರುವುದು    

ಹಳೇಬೀಡು: ಬಿಸಿಲಿನ ತಾಪದಿಂದ ಬೆಳವಣಿಗೆ ಹಂತದ ಅಡಿಕೆ ಗಿಡ ರಕ್ಷಿಸಲು ಹಳೇಬೀಡು ಭಾಗದ ರೈತರು ಶ್ರಮವಹಿಸಿದ್ದಾರೆ. ಅಡಿಕೆ ಗಿಡದ ಕಾಂಡ ಸುಟ್ಟು ಬೆಳವಣಿಗೆ ಕುಂಠಿತವಾಗದಂತೆ ಸುಣ್ಣ ಬಳಿಯುವ ಕೆಲಸ ಭರದಿಂದ ಸಾಗುತ್ತಿದೆ.

ಬೇಸಿಗೆಯಲ್ಲಿ ಅಡಿಕೆ ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಬಿಸಿಲಿನ ಪ್ರಖರತೆಯನ್ನು ಅಡಿಕೆ ಗಿಡ ಸಹಿಸಿಕೊಳ್ಳುವುದಿಲ್ಲ. ಗಿಡದ ಕಾಂಡ ಸೀಳುವ ಸಾಧ್ಯತೆ ಇರುತ್ತದೆ. ಬಿಸಿಲು ಬಿದ್ದಾಗ ಕಾಂಡ ಹಳದಿ ಬಣ್ಣಕ್ಕೆ ತಿರುಗಿ ಒಣಗಲು ಆರಂಭಿಸುತ್ತದೆ. ಗಿಡಕ್ಕೆ ಸೂರ್ಯನ ಕಿರಣಗಳ ಅಗತ್ಯವಿದೆ. ಆದರೆ ಬೇಸಿಗೆಯಲ್ಲಿ ಅತಿಯಾದ ಬಿಸಿಲಿನ ಪ್ರಖರತೆಯಿಂದ ಅಡಿಕೆ ಗಿಡ ರಕ್ಷಿಸಲೇಬೇಕು. ಜೊತೆಗೆ ರೋಗ ಸುಳಿಯುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ರೈತರು ಅಡಿಕೆ ಗಿಡಗಳ ಕಾಂಡಕ್ಕೆ ಬುಡದಿಂದ 4ರಿಂದ 5ಅಡಿವರೆಗೂ ಸುಣ್ಣ ಬಳಿಯುತ್ತಿದ್ದಾರೆ. ಅಡಿಕೆ ಗಿಡ ಬಲಿತು ಕಾಂಡ ಬೂದು ಬಣ್ಣಕ್ಕೆ ತಿರುಗಿದ ನಂತರ ಸುಣ್ಣ ಬಳಿಯುವ ಅಗತ್ಯವಿಲ್ಲ ಎಂದು ರೈತ ಮುಖಂಡ ರಾಜಗೆರೆ ಗಂಗಾಧರಪ್ಪ ಹೇಳಿದರು.     

ಬೇಲೂರು ತಾಲ್ಲೂಕಿನಲ್ಲಿ ಅಂದಾಜು 2ಸಾವಿರ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗಿದೆ. ನಾಲ್ಕು ವರ್ಷದ ಹಿಂದೆ ಬರಗಾಲ ಬಂದಾಗ ಸಾಕಷ್ಟು ಅಡಿಕೆ ತೋಟ ಒಣಗಿ ಹೋದವು. ಹೀಗಾಗಿ ರೈತರು ಬೇಸಿಗೆಯಲ್ಲಿ ಅಡಿಕೆ ಬೆಳೆ ಉಳಿಸಿಕೊಳ್ಳಲು ಮುಂದಾಗಿದ್ದಾರೆ.

ADVERTISEMENT

‘ಬಟ್ಟಿ ಇಳಿಸಿದ ಕಲ್ಲು ಸುಣ್ಣ ಅಥವಾ ಪುಡಿ ಸುಣ್ಣವನ್ನು ನೀರಿನ ಮಿಶ್ರಣದೊಂದಿಗೆ ದ್ರವ ರೂಪಕ್ಕೆ ತರುವುದು ಕಷ್ಟವಾಗುತ್ತದೆ. ಹಳೆಯ ಪದ್ಧತಿ ತಯಾರಿಕೆಯ ಸುಣ್ಣ, ಗಿಡದ ಕಾಂಡಕ್ಕೆ ಹೆಚ್ಚು ದಿನ ಉಳಿಯುವುದಿಲ್ಲ. ಸುಣ್ಣದ ಪೇಸ್ಟ್ ಖರೀದಿಸಿ ಅಡಿಕೆ ಗಿಡಕ್ಕೆ ಬಳಸಲಾಗುತ್ತಿದೆ. ಸುಣ್ಣದ ಪೇಸ್ಟ್ ಅನ್ನು ಸಮ ಪ್ರಮಾಣದ ನೀರಿನಲ್ಲಿ ಮಿಶ್ರಣ ಮಾಡಿ ಬಳಿದರೆ, ಹೆಚ್ಚು ಕಾಲ ಕಾಂಡದ ಮೇಲೆ ನಿಲ್ಲುತ್ತದೆ. ಹೀಗಾಗಿ ಪೇಸ್ಟ್ ಬಳಸುತ್ತಿದ್ದೇವೆ’ ಎಂದು ಬೆಳೆಗಾರ ಸುರೇಶ್ ಎಚ್.ಎಂ. ತಿಳಿಸಿದರು.

‘10 ಕೆಜಿ ಸುಣ್ಣಕ್ಕೆ, 2 ಕೆ.ಜಿ. ಮೈದಾ, 2 ಕೆ.ಜಿ. ಬೆಲ್ಲ ಮಿಶ್ರಣ ಮಾಡಿ, ಅಡಿಕೆ ಗಿಡದ ಕಾಂಡಕ್ಕೆ ಬಳಿಯುವ ಪದ್ಧತಿಯನ್ನು ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಕೆಲವು ರೈತರು ಅನುಸರಿಸುತ್ತಿದ್ದಾರೆ. ಬೇಲೂರು ತಾಲ್ಲೂಕಿನಲ್ಲಿ 10 ಕೆ.ಜಿ. ಸುಣ್ಣದ ಪೇಸ್ಟಿಗೆ 100 ಮಿ.ಲೀ. ಗಮ್ ಸೇರಿಸಿ ಲೇಪಿಸುತ್ತಿದ್ದೇವೆ. ಸುಣ್ಣದ ಜೊತೆ ಗಮ್ ಬಳಸುವುದರಿಂದ ಹೆಚ್ಚು ದಿನ ಕಾಂಡದ ಮೇಲೆ ನಿಲ್ಲುತ್ತದೆ’ ಎನ್ನುತ್ತಾರೆ ಅಡಿಕೆ ಬೆಳೆಗಾರರು. 

ಅಡಿಕೆ ತೊಟಗಳಿಗೆ ಹೆಚ್ಚಿನ ನೀರುಣಿಸಬೇಕು. ಕೃಷಿ ಬಳಕೆಗೆ ಸಮರ್ಪಕ ವಿದ್ಯುತ್ ಇಲ್ಲದೇ ರೈತರು ಹಗಲು, ರಾತ್ರಿ ಪರದಾಡಿದರೂ ಸಂಪೂರ್ಣ ತೋಟಕ್ಕೆ ನೀರುಣಿಸುವುದು ಸುಲಭ ಸಾಧ್ಯವಾಗಿಲ್ಲ. ಹನಿ ನೀರಾವರಿ, ತುಂತುರು ನೀರಾವರಿ ಅಳವಡಿಸಿದ್ದರೂ ಪರಿಪೂರ್ಣ ನೀರುಣಿಸುವುದು ಕಷ್ಟವಾಗಿದೆ. ಹೀಗಾಗಿ ಅಡಿಕೆ ಗಿಡ ಸಂರಕ್ಷಣೆಯ ಕ್ರಮ ಕೈಗೊಳ್ಳಬೇಕು. ಕಾಂಡ ಒಣಗದಂತೆ ನೋಡಿಕೊಳ್ಳದಿದ್ದರೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ ಅಡಿಕೆ ತೋಟ ಮರೆಯಬೇಕಾಗುತ್ತದೆ ಎನ್ನುತ್ತಾರೆ ರೈತ ಸೊಪ್ಪಿನಹಳ್ಳಿ ಕುಮಾರಸ್ವಾಮಿ.

ಕೆಲವರು ಮಾತ್ರ ಅಡಿಕೆ ಗಿಡಕ್ಕೆ ಸುಣ್ಣ ಬಳಿಯುತ್ತಿದ್ದರು. ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದ್ದು ಎಲ್ಲರೂ ಸುಣ್ಣ ಬಳಿಯುತ್ತಿದ್ದಾರೆ
– ರಾಜಗೆರೆ ಗಂಗಾಧರಪ್ಪ, ಕಾರ್ಯದರ್ಶಿ ರೈತ ಸಂಘ ಹೋಬಳಿ ಘಟಕ
ಅಡಿಕೆ ಗಿಡದ ಕಾಂಡಕ್ಕೆ ಸುಣ್ಣ ಬಳಿಯುವುದು ಹೊಸ ಪದ್ಧತಿಯಲ್ಲ. ಈಗ ಬೆಳೆ ಹೆಚ್ಚಾಗಿರುವುದರಿಂದ ಸುಣ್ಣ ಬಳಿಯುವುದು ಕಂಡು ಬರುತ್ತಿದೆ
– ಲಾವಣ್ಯ, ಅಡಿಕೆ ಬೆಳೆಗಾರರು

ಸುಣ್ಣಕ್ಕೆ ದಿಢೀರ್ ಬೇಡಿಕೆ

ಮನೆಗಳಿಗೆ ಕಂಪನಿ ತಯಾರಿಸುವ ಸುಣ್ಣ ಬಳಿಯುತ್ತಾರೆ. ಹಳೆಯ ಕಾಲದ ಮನೆಗಳಿಗೂ ಸುಣ್ಣ ಬಳಿಯುವವರು ಇಲ್ಲದಂತಾಗಿದೆ. ಹೀಗಾಗಿ ಸುಣ್ಣ ಕೇಳುವವರೇ ಇಲ್ಲದಂತಾಗಿತ್ತು. ಸುಣ್ಣದ ಕಲ್ಲು ತಂದು ತಾಜಾ ಸುಣ್ಣ ಸಂಸ್ಕರಿಸುವ ಬಟ್ಟಿಗಳು ಕಣ್ಮರೆಯಾಗಿವೆ. ಸುಣ್ಣ ಸಂಸ್ಕರಿಸುವವರು ಹಾಗೂ ಸುಣ್ಣ ಮಾರಾಟ ಮಾಡುವವರು ಜೀವನಕ್ಕೆ ಬೇರೆ ದಾರಿ ಕಂಡುಕೊಂಡಿದ್ದಾರೆ. ಆದರೆ ಎರಡು ತಿಂಗಳಿನಿಂದ ಸುಣ್ಣಕ್ಕೆ ಭಾರಿ ಬೇಡಿಕೆ ಬಂದಿದೆ. ಪರಂಪರೆಯಿಂದ ವೃತ್ತಿ ನಿರ್ವಹಿಸುವ ವರ್ತಕರು ಮಾರುಕಟ್ಟೆಗೆ ಇಳಿದಿಲ್ಲ. ಕಟ್ಟಡ ನಿರ್ಮಾಣ ಸಾಮಗ್ರಿ ಕಬ್ಬಿಣ ಹಾಗೂ ಕೀಟನಾಶಕ ಅಂಗಡಿಗಳಲ್ಲಿ ಭಾರಿ ಪ್ರಮಾಣದಲ್ಲಿ ಸುಣ್ಣದ ವ್ಯಾಪಾರ ನಡೆದಿದೆ ಎಂದು ರೈತ ಯೋಗೀಶಪ್ಪ ತಿಳಿಸಿದರು.

‘10 ಕೆಜಿ ತೂಕದ ಸುಣ್ಣದ ಪೇಸ್ಟ್ ಒಂದು ಪ್ಯಾಕೆಟ್ ₹ 75ರಿಂದ ₹80  ಒಂದು ಟ್ಯೂಬ್ ಗಮ್ ₹35 ರಂತೆ ಮಾರಾಟವಾಗುತ್ತಿದೆ. ಒಂದು ಎಕರೆಯ ಅಡಿಕೆ ಗಿಡಗಳಿಗೆ ಸುಣ್ಣ ಬಳಿಯಲು ಕಾರ್ಮಿಕರ ಕೂಲಿ ಸೇರಿದಂತೆ ₹3ಸಾವಿರದಿಂದ ₹4ಸಾವಿರ ವೆಚ್ಚವಾಗುತ್ತದೆ’ ಎಂದು ಬೆಳೆಗಾರ ಬಸವರಾಜು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.