ADVERTISEMENT

ಅಂಬೇಡ್ಕರ್‌ ಸಂವಿಧಾನವೇ ರಾಷ್ಟ್ರಗ್ರಂಥ: ಸಿ.ಟಿ. ರವಿ

ಸಂವಿಧಾನ ಸನ್ಮಾನ ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 12:50 IST
Last Updated 27 ಜನವರಿ 2025, 12:50 IST
ಹಾಸನದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ‘ಸಂವಿಧಾನ ಬದಲಾಯಿಸಿದ್ದು ಯಾರು’ ಕೃತಿಯನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ ಮಾಡಿದರು.
ಹಾಸನದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ‘ಸಂವಿಧಾನ ಬದಲಾಯಿಸಿದ್ದು ಯಾರು’ ಕೃತಿಯನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ ಮಾಡಿದರು.   

ಹಾಸನ: ‘ಎಲ್ಲ ಧರ್ಮಗಳಿಗೂ ಒಂದೊಂದು ಧರ್ಮಗ್ರಂಥವಿದೆ. ಆದರೆ ಇಡೀ ಭಾರತಕ್ಕೆ ಇರುವುದು ಒಂದೇ ರಾಷ್ಟ್ರ ಗ್ರಂಥ, ಅದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ. ಆ ಸಂವಿಧಾನಕ್ಕೆ ಅಪಚಾರ ಎಸಗಿರುವುದು ಕಾಂಗ್ರೆಸ್ ಪಕ್ಷ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಸ್ಥೆ ಭಾನುವಾರ ಸಂಜೆ ಆಯೋಜಿಸಿದ್ದ ಸಂವಿಧಾನ ಸನ್ಮಾನ ಕಾರ್ಯಕ್ರಮದಲ್ಲಿ ವಿಕಾಸ್ ಮಂಗಳೂರು ಅವರು ರಚಿಸಿದ ‘ಸಂವಿಧಾನ ಬದಲಾಯಿಸಿದ್ದು ಯಾರು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಂವಿಧಾನವನ್ನು ಯಾರು, ಎಷ್ಟು ಬಾರಿ, ಯಾರ ಅವಧಿಯಲ್ಲಿ ತಿದ್ದುಪಡಿಯಾಗಿದೆ ಎಂಬುದನ್ನು ಪುಸ್ತಕ ಮತ್ತು ಇಂಟರ್‌ನೆಟ್‌ನಿಂದ ಹುಡುಕುವ ಮೂಲಕ ಸತ್ಯ ಅರ್ಥಮಾಡಿಕೊಳ್ಳಬೇಕು ಎಂದರು.

ADVERTISEMENT

‘ಡಾ.ಅಂಬೇಡ್ಕರ್‌ ಅವರು ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗದಂತೆ ಕಾಂಗ್ರೆಸ್‌ನವರು ಸೋಲಿಸಿದರು. ಆದರೆ ಭೂಪೇಂದ್ರನಾಥ್ ಮಂಡಲ್ ಅವರು ಅಂದಿನ ಬಂಗಾಳದ ನೈಸೂರ್, ಕುಲ್ಲಾ ಕುಲ್ಲಾ ಕ್ಷೇತ್ರದಿಂದ ಸಂವಿಧಾನ ರಚನಾ ಸಮಿತಿಗೆ ಅಂಬೇಡ್ಕರ್ ಆಯ್ಕೆಯಾಗುವಂತೆ ನೋಡಿಕೊಂಡರು’ ಎಂದರು.

‘ಆದರೆ ದೇಶ ವಿಭಜನೆ ಆಗುವಾಗ ಹಿಂದೂಗಳು ಅಧಿಕವಿದ್ದ ಬಂಗಾಳದ ನೈಸೂರ್, ಕುಲ್ಲಾ ಕುಲ್ಲಾ ಕ್ಷೇತ್ರ ಪಾಕಿಸ್ತಾನಕ್ಕೆ ಸೇರುವಂತೆಯೂ ಕಾಂಗ್ರೆಸ್‌ನವರು ಕುತಂತ್ರ ನಡೆಸಿ, ಅಂಬೇಡ್ಕರರನ್ನು ಪಾಕಿಸ್ತಾನಕ್ಕೆ ಓಡಿಸುವ ಪ್ರಯತ್ನ ನಡೆಸಿದ್ದರು. ಆದರೆ ಅಂಬೇಡ್ಕರ್ ಆಗ ರಾಜೀನಾಮೆ ನೀಡಿದರು. ನಂತರ ಪುಣೆ ಕ್ಷೇತ್ರದಿಂದ ಸಂವಿಧಾನ ರಚನಾ ಸಭೆ ಪ್ರತಿನಿಧಿಯಾಗಿ ಆಯ್ಕೆಯಾಗಲು ಸಾವರ್ಕರ್ ಸೇರಿ ಅನೇಕ ಮುಖಂಡರು ಸಹಕಾರ ನೀಡಿದ್ದರು’ ಎಂದು ವಿವರಿಸಿದರು.

‘ದೇಶಕ್ಕೆ ಸಂವಿಧಾನ ಸಮರ್ಪಣೆಯಾಗಿ 75 ವರ್ಷಗಳಲ್ಲಿ ಸಂವಿಧಾನಕ್ಕೆ 106 ತಿದ್ದುಪಡಿ ತರಲಾಗಿದ್ದು, ಕಾಂಗ್ರೆಸ್ ಸರ್ಕಾರ ಮಾಡಿದ್ದು 75 ತಿದ್ದುಪಡಿಗಳು. ಕಾಂಗ್ರೆಸ್ಸೇತರ ಸರ್ಕಾರಗಳು ಮಾಡಿದ ತಿದ್ದುಪಡಿ 31 ಮಾತ್ರ’ ಎಂದರು.

‘ಸಂವಿಧಾನ ರಕ್ಷಣೆಗೆ ಬಿಜೆಪಿ ಕಾಳಜಿ ವಹಿಸುತ್ತಿದ್ದು, ಸತ್ಯದ ಅನಾವರಣಕ್ಕಾಗಿ ಸಂವಿಧಾನ ಸಂಸ್ಥಾನ ಎಂಬ ಅಭಿಯಾನವನ್ನು ರಾಷ್ಟ್ರದಾದ್ಯಂತ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಎನ್‌. ಮಹೇಶ್ ಮಾತನಾಡಿ, ‘ಚುನಾವಣೆಯಲ್ಲಿ ಸೋಲುವಂತೆ ಮಾಡುವ ಮೂಲಕ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ನಿರಂತರ ಕಿರುಕುಳ ನೀಡಿದೆ. ಈಗ ಕಾಂಗ್ರೆಸ್‌ನವರು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಘೋಷಣೆ ಮಾಡಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಟೀಕಿಸಿದರು.

‘ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದವರಾರು? ಗೌರವ ಕೊಟ್ಟವರಾರು ಎಂಬುದನ್ನು ತಿಳಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿ ಹಳ್ಳಿಯಲ್ಕೂ ಇಂಥ ಕಾರ್ಯಕ್ರಮ ನಡೆಸಬೇಕು’ ಎಂದರು.

ಶಾಸಕರಾದ ಎಚ್.ಕೆ. ಸುರೇಶ್, ಸಿಮೆಂಟ್ ಮಂಜು, ಮಾಜಿ ಶಾಸಕ ಪ್ರೀತಂಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಆರ್ಪಿಐ ಸತೀಶ್, ಪರ್ವತಯ್ಯ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.