
ಹಳೇಬೀಡು: ‘ಭಾರತದ ಆರ್ಥಿಕತೆ ಸತ್ತಿದೆ ಎಂದು ಅಮೆರಿಕದ ಅಧ್ಯಕ್ಷರು ಹೇಳಿದ್ದಾರೆ. ಆದರೆ ಭಾರತದ ಆರ್ಥಿಕತೆ ಅಮೆರಿಕಕ್ಕಿಂತ ಬಲವಾಗಿದೆ ಎಂಬುದನ್ನು ಪ್ರತಿಪಾದಿಸುತ್ತೇನೆ’ ಎಂದು ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್ ಹೇಳಿದರು.
ಪುಷ್ಪಗಿರಿಯಲ್ಲಿ ಶನಿವಾರ ನಡೆದ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತದಲ್ಲಿ 80 ಕೋಟಿ ಜನರಿಗೆ ಉಚಿತ ಆಹಾರ ಕೊಡಲಾಗುತ್ತಿದೆ. ಮುಂದುವರಿದ ದೇಶದಲ್ಲಿ ಉಚಿತ ಆಹಾರ ಕೊಡಲು ಸಾಧ್ಯವಾಗುತ್ತಿಲ್ಲ. ಭಾರತವು ಆರ್ಥಿಕತೆಯಲ್ಲಿ 4ನೇ ಸ್ಥಾನದಲ್ಲಿದ್ದರೂ ತಲಾ ಆದಾಯದಲ್ಲಿ ತೀರಾ ಹಿಂದುಳಿದಿದೆ’ ಎಂದರು.
‘ಮಾನವ ಅನುಕರಣೀಯ ಪ್ರವೃತ್ತಿ ಹೊಂದಿದ್ದು, ಸಹಜ ಜೀವನ ಸಾಗಿಸುತ್ತಿಲ್ಲ. ಅಗೋಚರವಾಗಿ ನಿಯಂತ್ರಣಕ್ಕೆ ಒಳಪಟ್ಟು ಬಹುರಾಷ್ಟ್ರೀಯ ಕಂಪನಿಯನ್ನು ಅನುಕರಣೆ ಮಾಡುತ್ತಿದ್ದಾನೆ’ ಎಂದರು.
‘ಕೃಷಿಯಲ್ಲಿ ರಾಸಾಯನಿಕ ಬಳಕೆಗಿಂತ ಸಾವಯವ ಕೃಷಿಯಿಂದ ಭೂಮಿಗೆ ಹೆಚ್ಚಿನ ಅಘಾತವಾಗುತ್ತದೆ. ಸಾವಯವದಿಂದ ಅಣುಬಾಂಬ್ ಸಿಡಿಸಿದಷ್ಟು ಅಪಾಯವಿದೆ. ನಿಸರ್ಗ 3 ಲಕ್ಷ ವರ್ಷಗಳ ಹಿಂದೆಯೇ ಮನುಷ್ಯನನ್ನು ಸೃಷ್ಟಿ ಮಾಡಿದೆ. ಜೈವಿಕ ತಾಪಮಾನ, ಪ್ರಕೃತಿ ವಿಕೋಪ, ಬೆಳೆ ಹಾನಿಯಂತಹ ಸಮಸ್ಯೆ ರೈತರನ್ನು ಕಾಡುತ್ತಿವೆ. ಎಲ್ಲದಕ್ಕೂ ಪರಿಹಾರವಿದೆ. ಕಾರ್ಯಾಗಾರದಲ್ಲಿ ಎಲ್ಲವನ್ನು ಹೇಳಿಕೊಡುತ್ತೇವೆ’ ಎಂದು ತಿಳಿಸಿದರು.
ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಭೂಮಿ ಉಳಿಯಬೇಕು, ಜನರು ಉಳಿಯಬೇಕು ಎಂಬ ಮನೋಭಾವ ರೈತರಲ್ಲಿ ಮಾತ್ರ ಕಾಣಬಹುದಾಗಿದೆ. ಭೂಮಿಯ ಉಳಿವಿಗಾಗಿ ಕೈ ಮುಟ್ಟಿ ಕೆಲಸ ಮಾಡುತ್ತಿರುವ ಸುಭಾಷ್ ಪಾಳೇಕರ್ ಇಳಿ ವಯಸ್ಸಿನಲ್ಲಿಯೂ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ’ ಎಂದರು.
ಕೃಷಿ ಒಂದು ಪವಿತ್ರ ಕಸುಬು. ಕೃಷಿಯಲ್ಲದೇ ಜನರ ಜೀವನ ಸಾಧ್ಯವಿಲ್ಲ. ಭೂಮಿಯನ್ನು ಉಳಿಸಿಕೊಂಡು ರೈತರು ಬದುಕುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಾಗಾರ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯ ರೈತಸಂಘ ಸಾಮೂಹಿಕ ಅಧ್ಯಕ್ಷೀಯ ಮಂಡಳಿ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿದರು. ರೈತ ಸಂಘ ಸಾಮೂಹಿಕ ಅಧ್ಯಕ್ಷೀಯ ಮಂಡಳಿ ಸದಸ್ಯ ಕೆ.ಟಿ. ಗಂಗಾಧರ ರೈತ ಧ್ವಜಾರೋಹಣ ನೆರವೇರಿಸಿದರು. ಪಾರಂಪರಿಕ ಕೃಷಿಗೆ ಹೆಸರಾದ ಕೊಟ್ಟೂರಿನ ರೈತ ಮಹಿಳೆಯರು ಜನಪದ ಗಾಯನದ ಮೂಲಕ ರಾಶಿ ಪೂಜೆ ನೆರವೇರಿಸಿದರು.
ನೇಪಾಳ, ಶ್ರೀಲಂಕಾ, ಕಾಂಬೋಡಿಯಾ ದೇಶದ ರೈತರೊಂದಿಗೆ ದೇಶದ ವಿವಿಧ ಭಾಗದ ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಚಂದನ್ ಕುಮಾರ್ ಗಾಯನ ಸುಧೆ ಹರಿಸಿದರು.
ಅಂತರ ರಾಷ್ಟ್ರೀಯ ರೈತ ಮುಖಂಡರಾದ ನೇಪಾಳದ ಯದುವೀರ್ ಸಿಂಗ್, ಕೃಷ್ಣ ಬಿ.ಸಿ., ಲಾ ವಿಮಾ ಕ್ಯಾಪಸೀಯಾ, ಪುಷ್ಪಗಿರಿ ಮಠದ ಕಾರ್ಯದರ್ಶಿ ಎಸ್.ಎಚ್. ರಾಜಶೇಖರ್, ನಿರ್ಮಲ ಗೋಮಾತೆ ಟ್ರಸ್ಟ್ ಮುಖ್ಯಸ್ಥ ಅನಂತರಾವ್, ಮುಖಂಡರಾದ ಹೊನ್ನೂರು ಪ್ರಕಾಶ್, ಅರೇಹಳ್ಳಿ ರಾಜೇಗೌಡ, ಕಣಗಾಲ್ ಮೂರ್ತಿ ಇದ್ದರು.
ಜನರಿಗೆ ವಿಷಮುಕ್ತ ಆಹಾರ ಪೂರೈಕೆ ರೈತರನ್ನು ಸಾಲ ಮುಕ್ತರನ್ನಾಗಿ ಮಾಡುವುದು ಹಾಗೂ ರೈತರ ಆತ್ಮಹತ್ಯೆ ತಪ್ಪಿಸಲು ನೈಸರ್ಗಿಕ ಕೃಷಿ ಕಾರ್ಯಾಗಾರ ನಡೆಸಲಾಗುತ್ತಿದೆಪ್ರೊ.ರವಿವರ್ಮ ನಿವೃತ್ತ ಅಡ್ವೋಕೇಟ್ ಜನರಲ್
ವಿಷಯುಕ್ತ ಆಹಾರ ಸೇವನೆಯಿಂದ ಜನರ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ. ಆರೋಗ್ಯಕರ ಆಹಾರ ಉತ್ಪಾದನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಾಗಾರ ಅಗತ್ಯವಿದೆಎಚ್.ಕೆ. ಸುರೇಶ್ ಶಾಸಕ
ಬಹುರಾಷ್ಟ್ರೀಯ ಕಂಪನಿಗಳನ್ನು ಉದ್ದಾರ ಮಾಡುವ ಬೀಜ ಕಾಯ್ದೆ ಜಾರಿಗೆ ಬಂದರೆ ಪಾರಂಪರಿಕ ರೈತರು ಬದುಕುವುದು ಕಷ್ಟ. ಕಾಯ್ದೆ ಅನುಷ್ಠಾನ ಆಗದಂತೆ ರೈತರು ಹೊರಾಡಬೇಕಾಗಿದೆಅನುಸೂಯಮ್ಮ ಸಾಮೂಹಿಕ ಅಧ್ಯಕ್ಷೀಯ ಮಂಡಳಿ ಸದಸ್ಯೆ
ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ
ಸಿದ್ದರಾಮಯ್ಯ ಸರ್ಕಾರ ಉಳಿಯಲು ರೈತಪರ ಯೋಜನೆ ಜಾರಿಯಾಗಬೇಕು ಎಂದ ರಾಜ್ಯ ರೈತಸಂಘ ಸಾಮೂಹಿಕ ಅಧ್ಯಕ್ಷೀಯ ಮಂಡಳಿ ಸದಸ್ಯ ಕೆ.ಟಿ. ಗಂಗಾಧರ ಎಪಿಎಂಸಿ ಕಾಯ್ದೆ ಕರಾರು ಕೃಷಿ ಪದ್ದತಿ ಹಾಗೂ ಭೂಸುಧಾರಣಾ ಕಾಯ್ದೆ ಕೈಬಿಡಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ಅವರಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ನೀಡಿದರು. ಪ್ರೊ.ನಂಜುಂಡಸ್ವಾಮಿ ಮನಸ್ಸು ಮಾಡಿದ್ದರೆ ಎರಡೂ ಬಾರಿ ಮುಖ್ಯಮಂತ್ರಿ ಆಗುತ್ತಿದ್ದರು. ನಾವೆಲ್ಲ ಹಲವು ಬಾರಿ ಮಂತ್ರಿ ಶಾಸಕರಾಗುತ್ತಿದ್ದೇವು. ನಂಜುಂಡಸ್ವಾಮಿ ಅವರಿಗೆ ರೈತಪರ ಕಾಳಜಿ ಇತ್ತು. ಅವರಿಗೆ ಅಧಿಕಾರ ಬೇಕಿರಲಿಲ್ಲ. ಪಾಳೇಕರ್ ಕೃಷಿ ಪದ್ಧತಿಯನ್ನು ಎಲ್ಲ ವಿಶ್ವವಿದ್ಯಾಲಯ ಶಾಲಾ– ಕಾಲೇಜುಗಳಲ್ಲಿ ಪಠ್ಯ ವಿಷಯವಾಗಿ ಓದುವಂತಾಗಬೇಕು ಎಂದು ಹೇಳಿದರು.
ಕೃಷಿ ಪಾರಂಪರಿಕ ಕಲಿಕೆ
ಕೃಷಿ ಎಂಬುದು ನಾಲ್ಕು ಗೋಡೆಯ ನಡುವೆ ಕಲಿಯುವ ವಿದ್ಯೆಯಲ್ಲ. ಭೂಮಿಯ ಜೊತೆಯಲ್ಲಿ ಕಲಿಯುವ ಪಾರಂಪರಿಕ ಕಲಿಕೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಹೇಳಿದರು. ಕೃಷಿ ಇಂದು– ನಿನ್ನೆ ಹುಟ್ಟಿಲ್ಲ. ಕೃಷಿ ವಂಶ ಪಾರಂಪರ್ಯವಾಗಿ ಬಂದಿದೆ. ರೈತನಿಗೆ ಪ್ರಕೃತಿಯೇ ಜೀವಾಳ. ರೈತರು ಪ್ರಕೃತಿಯಿಂದ ಬದುಕುತ್ತಿದ್ದಾರೆ. ಪ್ರಕೃತಿಯ ಸವಾಲು ಎದುರಿಸಿ ಮುನ್ನುಗ್ಗಬೇಕು ಎಂದು ಹೇಳಿದರು. ಸುಭಾಷ್ ಪಾಳೇಕರ್ ಅವರ ವಿಚಾರವನ್ನು ಪತ್ರಿಕೆಗಳಲ್ಲಿ ಓದಿದ್ದೇವು. ಸಾಮಾಜಿಕ ಜಾಲಾತಾಣದಲ್ಲಿ ನೋಡಿದ್ದೇವು. ಈಗ ವೇದಿಕೆಯಲ್ಲಿ ಅವರ ಜೊತೆಯಲ್ಲಿರುವುದು ಸಂತಸ ತಂದಿದೆ. ರಸಗೊಬ್ಬರ ಕೀಟ ಕ್ರಿಮಿ ಹಾಗೂ ಶಿಲೀಂಧ್ರ ನಾಶಕಗಳಿಗೆ ರೈತರು ಬಂಡವಾಳ ಹಾಕುತ್ತಿದ್ದಾರೆ. ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯಿಂದ ರೈತರು ಬದುಕು ಹಸನಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.