ADVERTISEMENT

ಉಪಾಧ್ಯಕ್ಷ ಚುನಾವಣೆ ನಡೆಸಲು ಒತ್ತಾಯ

ಚುನಾವಣಾಧಿಕಾರಿ ಕಚೇರಿ ಎದುರು ನಗರಸಭೆ ಜೆಡಿಎಸ್‌ ಸದಸ್ಯರ ಧರಣಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 15:47 IST
Last Updated 4 ನವೆಂಬರ್ 2020, 15:47 IST
ಹಾಸನ ಉಪವಿಭಾಗಾಧಿಕಾರಿ ಕಚೇರಿ ಎದರು ನಗರಸಭೆ ಸದಸ್ಯರು ಹಾಗೂ ಜೆಡಿಎಸ್‌ ಮುಖಂಡರು ಧರಣಿ ನಡೆಸಿದರು.
ಹಾಸನ ಉಪವಿಭಾಗಾಧಿಕಾರಿ ಕಚೇರಿ ಎದರು ನಗರಸಭೆ ಸದಸ್ಯರು ಹಾಗೂ ಜೆಡಿಎಸ್‌ ಮುಖಂಡರು ಧರಣಿ ನಡೆಸಿದರು.   

ಹಾಸನ: ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಆಗ್ರಹಿಸಿ ಜೆಡಿಎಸ್‌ ತಾಲ್ಲೂಕು ಘಟಕದ ನೇತೃತ್ವದಲ್ಲಿ ಸದಸ್ಯರು ಬುಧವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವಿಚಾರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗುತ್ತಿದೆ. ಚುನಾವಣಾಧಿಕಾರಿ ಆಗಿರುವ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್‌ ಅವರು ಶಾಸಕ ಪ್ರೀತಂ ಗೌಡರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಸರಿಯಾದ ರೀತಿಯಲ್ಲಿ ಚುನಾವಣಾ ನೋಟಿಸ್‌ ನೀಡದೆ ಗೊಂದಲ ಉಂಟು ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ನೋಟಿಸ್‌ ಗೊಂದಲದಿಂದ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಚುನಾವಣೆ
ಮುಂದೂಡಲಾಗಿದೆ. ಆದರೆ, ಈವರೆಗೂ ಚುನಾವಣೆ ದಿನಾಂಕ ನಿಗದಿ ಮಾಡಿಲ್ಲ. ತಕ್ಷಣ ದಿನಾಂಕ ನಿಗದಿ ಮಾಡಿ, ನಗರಸಭೆ ಎಲ್ಲಾ ಸದಸ್ಯರಿಗೂ ಮತ್ತೆ ನೋಟಿಸ್‌ ಜಾರಿ ಮಾಡಬೇಕು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕೊಟ್ಟು, ಕಾನೂನು ಪ್ರಕಾರ ಚುನಾವಣೆ ನಡೆಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್‌.ಪಿ. ಸ್ವರೂಪ್‌, ನಗರಸಭೆ ಸದಸ್ಯರಾದ ಗಿರೀಶ್‌ ಚನ್ನವೀರಪ್ಪ, ಸಿ.ಆರ್‌. ಶಂಕರ್‌, ಎಚ್‌.ವಿ. ಚಂದ್ರೇಗೌಡ, ಕ್ರಾಂತಿ ಪ್ರಸಾದ್‌ ತ್ಯಾಗಿ, ಜೆ.ಮಂಜುನಾಥ, ಅಶ್ವಿನಿ, ನಸೀಮಾ ಬಾನು, ಕೆ.ಬಿ. ಜಾನಕಿ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ದ್ಯಾವೇಗೌಡ, ಮುಖಂಡರಾದ ಕಮಲ್‌ ಕುಮಾರ್‌, ಗೋಪಾಲ್‌, ಮಹೇಶ್‌, ಅಮೀರ‍್ ಜಾನ್‌, ಜಯರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.