ADVERTISEMENT

ಹಾಸನ: ಪ್ರಚಾರ ಆರಂಭಿಸಲು ರಾಜೇಗೌಡರಿಗೆ ರೇವಣ್ಣ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 20:28 IST
Last Updated 18 ಮಾರ್ಚ್ 2023, 20:28 IST
   

ಹಾಸನ: ಹಾಸನ ಕ್ಷೇತ್ರದ ಟಿಕೆಟ್‌ ವಿವಾದ ಮುಂದುವರಿದಿರುವಾಗಲೇ, ಕ್ಷೇತ್ರದಲ್ಲಿ ಪ್ರಚಾರ ಆರಂಭಿಸುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡರಿಗೆ ಶಾಸಕ ಎಚ್‌.ಡಿ.ರೇವಣ್ಣ ಸೂಚಿಸಿದ್ದಾರೆ.

ರಾಜೇಗೌಡರ ಮನೆಯಲ್ಲಿ ಶುಕ್ರವಾರ ರಾತ್ರಿ ದಿಢೀರ್ ಸಭೆ ನಡೆಸಿದ ರೇವಣ್ಣ, ಆಯ್ದ ಮುಖಂಡರ ಅಭಿಪ್ರಾಯ ಕೇಳಿದರು. ‘ಇಂದಿನಿಂದಲೇ ಹಳ್ಳಿಗಳಿಗೆ ಭೇಟಿ ನೀಡಿ ಪ್ರಚಾರ ಆರಂಭಿಸಿ’ ಎಂದು ರಾಜೇಗೌಡರಿಗೆ ಸೂಚಿಸಿದರು.

'ನನಗೆ ಸವಾಲು ಹಾಕಿರುವ ಶಾಸಕರನ್ನು ಸೋಲಿಸುವುದೇ ನನ್ನ ಗುರಿ. ಹಾಗಾಗಿ ಎಲ್ಲರೂ ಇನ್ನೊಮ್ಮೆ ಚರ್ಚಿಸಿ ಸಿದ್ದರಾಗಿ. ರಾಜೇಗೌಡರ ಸ್ಪರ್ಧೆ ಬಗ್ಗೆ ಇನ್ನೊಮ್ಮೆ ದೇವೇಗೌಡರ ಬಳಿ ಮಾತನಾಡುತ್ತೇನೆ. ಸಮಯ ವ್ಯರ್ಥ ಮಾಡುವುದು ಬೇಡ. ಪ್ರಚಾರ ಶುರು ಮಾಡಿ’ ಎಂದು ರೇವಣ್ಣ ಹೇಳಿದರು.

ADVERTISEMENT

ನಂತರ ಮಾತನಾಡಿದ ರಾಜೇಗೌಡ, ‘ಎಚ್‌.‍ಪಿ.ಸ್ವರೂಪ್ ಹಾಗೂ ನನಗೆ ಟಿಕೆಟ್‌ ಕೊಡುವುದು ಬೇಡ. ನೀವೇ ಸ್ಪರ್ಧಿಸುವುದಾದರೆ ಬೆಂಬಲಿಸುವುದಾಗಿ ಭವಾನಿ ಹೇಳಿದ್ದಾರೆ. ರೇವಣ್ಣ ಅವರೂ ಸಹಕಾರ ನೀಡುವುದಾಗಿ ಹೇಳಿದ್ದಾರೆ’ ಎಂದರು.

‘ಭವಾನಿ ಅವರಿಗೆ ಟಿಕೆಟ್‌ ದೊರೆಯಲು ಅಡ್ಡಿಯಾಗಿರುವ ಸ್ವರೂಪ್‌ ಅವರನ್ನು ಕಣದಿಂದ ದೂರವಿಡಬೇಕೆಂದೇ ರಾಜೇಗೌಡರ ಹೆಸರನ್ನು ರೇವಣ್ಣ ಪ್ರಸ್ತಾಪಿಸಿದ್ದಾರೆ’ ಎನ್ನಲಾಗಿದೆ.

‘ಭವಾನಿ ಅವರಿಗೇ ಟಿಕೆಟ್‌ ಕೊಡಬೇಕೆಂಬ ಒತ್ತಾಯವನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ನಿರಾಕರಿಸಿರುವುದರಿಂದ, ಸಾಮಾನ್ಯ ಕಾರ್ಯಕರ್ತರಾಗಿರುವ ರಾಜೇಗೌಡರನ್ನೇ ಕಣಕ್ಕಿಳಿಸಲಿ. ‌ಸ್ವರೂಪ್‌ ಅವರಂತೆ ರಾಜೇಗೌಡರೂ ದಾಸ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಕ್ಷೇತ್ರದಲ್ಲಿ ಬಿಜೆಪಿಯ ಪ್ರೀತಂ ಗೌಡರಿಗೆ ಪ್ರಬಲ ಎದುರಾಳಿಯಾಗಲಿದ್ದಾರೆ’ ಎನ್ನುವುದು ರೇವಣ್ಣ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.