ಹಾಸನ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್. ಕೃಷ್ಣ ಹಾಗೂ ಅವರ ತಂಡ ಶುಕ್ರವಾರ ಸಕಲೇಶಪುರ ತಾಲ್ಲೂಕಿನ ಆನೆ ಮಹಲ್ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ಅಲ್ಲಿನ ಆಹಾರದ ಗುಣಮಟ್ಟ ಪರಿಶೀಲಿಸಿತು.
ಪಡಿತರ ವಿತರಣೆ ಮಾಡುವಾಗ ಹೆಚ್ಚುವರಿ ಹಣ ಪಡೆಯುತ್ತಾರೆಯೇ ಎಂದು ಸಾರ್ವಜನಿಕರೊಂದಿಗೆ ಮಾಹಿತಿ ಪಡೆದರು. ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಅಕ್ಕಿ, ಗೋದಿ, ಹಾಲಿನ ಪುಡಿ, ಮೊಟ್ಟೆ, ಬಾಣಂತಿಯರಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲಿಸಿದರು. ಆಹಾರ ವಿತರಣೆ ಮಾಹಿತಿಯನ್ನು ದಾಖಲಾತಿಯಲ್ಲಿ ನೋಂದಾಯಿಸಿದ್ದರಿಂದ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಆನೇಮಹಲ್ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ, ಅಲ್ಲಿನ ದಾಸ್ತಾನು ಪರಿಶೀಲಿಸಿದರು. ಜೊತೆಗೆ ಮಕ್ಕಳಿಗೆ ಕೊಳವೆಬಾವಿ ನೀರು ನೀಡದಂತೆ ಸೂಚಿಸಿದರು.
ಸಕಲೇಶಪುರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳೊಂದಿಗೆ ಸಂವಾದ ನಡೆಸಲಾಯಿತು. ಬಿಸಿಯೂಟದ ಗುಣಮಟ್ಟ, ಆಹಾರ ಸರಬರಾಜಿನ ದಾಖಲೆಗಳು, ಆಹಾರದ ದಾಸ್ತಾನು ನೊಂದಣಿ ಪುಸ್ತಕಗಳನ್ನು ಪರಿಶೀಲಿಸಿದರು. ಅಲ್ಲಿ ಅವಶ್ಯಕತೆ ಇರುವ ಊಟದ ಕೊಠಡಿ ನಿರ್ಮಾಣಕ್ಕೆ ಕ್ರಮ ವಹಿಸಲು ತಿಳಿಸಿದರು.
ಸಕಲೇಶಪುರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ, ಪಿಂಚಣಿ ಸೌಲಭ್ಯ ಕುರಿತು ಪರಿಶೀಲನೆ ನಡೆಸಿದರು. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಪರಿಕರಗಳು, ದಾಸ್ತಾನು ಹಾಗೂ ದರಗಳನ್ನು ಪರಿಶೀಲಿಸಿದರು.
ಎಷ್ಟು ರೈತರು ನೋಂದಾಯಿಸಿಕೊಂಡಿದ್ದಾರೆ? ಕಿಸಾನ್ ಸಮ್ಮಾನ್ ಯೋಜನೆಯ ₹2000 ಎಷ್ಟು ರೈತರಿಗೆ ತಲುಪುತ್ತಿದೆ ಎಂಬುದರ ಕುರಿತು ಮಾಹಿತಿ ಪಡೆದರು. ಜೊತೆಗೆ ಸ್ಥಳದಲ್ಲೇ ರೈತರಿಗೆ ದೂರವಾಣಿ ಕರೆ ಮಾಡಿ, ಇಲಾಖೆಯ ಯೋಜನೆಗಳು, ಪೈಪ್‌ಗಳು ತಲುಪುತ್ತಿವೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿದರು.
ಹೋಟೆಲ್, ಮೆಸ್, ಬೇಕರಿಗಳಿಗೆ ಬೇಕರಿಗೆ ಭೇಟಿ ಲೈಸೆನ್ಸ್ ಪಡೆದುಕೊಳ್ಳಲು ಸೂಚಿಸಲಾಯಿತು. ನಂತರ ರಸ್ತೆ ಬದಿ ಕಲರ್ ಕ್ಯಾಂಡಿ ವ್ಯಾಪಾರ ಮಾಡುವವನ ಕಾರ್ಖಾನೆಗೆ ಭೇಟಿ ನೀಡಿ, ಅಲ್ಲಿ ರಾಸಾಯನಿಕ ಬಣ್ಣ ಬಳಸುತ್ತಿರುವುದನ್ನು ಪತ್ತೆ ಮಾಡಿದ ಸದಸ್ಯರು, ಕಾರ್ಖಾನೆಗೆ ಬೀಗಮುದ್ರೆ ಹಾಕಿದರು. ಸಕಲೇಶಪುರದ ಆಹಾರ, ನಾಗರಿಕ ಸರಬರಾಜು ಮಳಿಗೆಗೆ ಭೇಟಿ ನೀಡಿ, ಅಲ್ಲಿರುವ ದಾಸ್ತಾನಿನ ವಿವರ ಪಡೆದುಕೊಂಡರು.
ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಮಾರುತಿ ಎಂ.ದೊಡ್ಡಲಿಂಗಣ್ಣವರ, ಎ.ರೋಹಿಣಿ ಪ್ರಿಯ ಮತ್ತು ಕೆ.ಎಸ್.ವಿಜಯಲಕ್ಷ್ಮಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.