ADVERTISEMENT

ನೀರಾವರಿ ಕಾಮಗಾರಿ ವಿಳಂಬ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 2:33 IST
Last Updated 20 ಸೆಪ್ಟೆಂಬರ್ 2020, 2:33 IST
ಶ್ರವಣಬೆಳಗೊಳ ಹೋಬಳಿಯ ಬಸವನಹಳ್ಳಿ ಬಳಿ ನಿರ್ಮಾಣವಾಗಿರುವ ನೀರು ಸಂಗ್ರಹಣಾ ಮತ್ತು ವಿತರಣಾ ಸ್ಥಳವನ್ನು ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಎಂಜಿನಿಯರ್‌ಗಳು ವೀಕ್ಷಿಸಿದರು
ಶ್ರವಣಬೆಳಗೊಳ ಹೋಬಳಿಯ ಬಸವನಹಳ್ಳಿ ಬಳಿ ನಿರ್ಮಾಣವಾಗಿರುವ ನೀರು ಸಂಗ್ರಹಣಾ ಮತ್ತು ವಿತರಣಾ ಸ್ಥಳವನ್ನು ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಎಂಜಿನಿಯರ್‌ಗಳು ವೀಕ್ಷಿಸಿದರು   

ಶ್ರವಣಬೆಳಗೊಳ: ಜುಟ್ಟನಹಳ್ಳಿ– ಹಿರೀಸಾವೆ– ಶ್ರವಣಬೆಳಗೊಳ ಏತ ನೀರಾವರಿ ಯೋಜನೆಯ ಕಾಮಗಾರಿ ಅನುಷ್ಠಾನದಲ್ಲಿ ನೀರಾವರಿ ಇಲಾಖೆ ಮತ್ತು ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಶನಿವಾರ ಆರೋಪಿಸಿದರು.

ಹೋಬಳಿಯ ಬಸವನಹಳ್ಳಿ ಬಳಿಯ ಏತ ನೀರಾವರಿ ನೀರು ಸಂಗ್ರಹ ಮತ್ತು ಕಾಲುವೆ ಮೂಲಕ ಅರಣ್ಯ ಸ್ಥಳದಲ್ಲಿ ಹರಿಯುತ್ತಿರುವ ನೀರನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿ ಅವರು ಮಾತನಾಡಿದರು.

ಏತ ನೀರಾವರಿ ಕಾಮಗಾರಿಯ ಗುತ್ತಿಗೆದಾರರಿಗೆ ತೊಂದರೆಯಾಗದಂತೆ ಸಕಾಲಕ್ಕೆ ಹಣ ಬಿಡುಗಡೆಯಾಗುತ್ತದೆ. ರೈತರು ತಕರಾರು ಮಾಡದೆ ಉದ್ದೇಶಿತ ಕಾಮಗಾರಿಗೆ ಭೂಮಿ ಬಿಟ್ಟಿದ್ದಾರೆ. ಇಂದಿನವರೆಗೂ ರೈತರಿಗೆ ಪರಿಹಾರ ನೀಡಿಲ್ಲ. ರೈತರಿಗೆ ಅನ್ಯಾಯವಾದರೆ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಕಾಮಗಾರಿಯ ಬಗ್ಗೆ ಶಾಸಕ ಸಿ.ಎನ್‌.ಬಾಲಕೃಷ್ಣ ಈ ಭಾಗದ ಜನರಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಉದ್ದೇಶಿತ 5 ಏತ ನೀರಾವರಿ ಯೋಜನೆಯ ಕಾಮಗಾರಿಗಳಿಗೆ ಮಂಜೂರಾದ ಹಣದಲ್ಲಿ ₹ 8 ಕೋಟಿಗೂ ಅಧಿಕ ಮೊತ್ತ ‘ಸ್ಟ್ಯಾಂಪ್‌ಡ್ಯೂಟಿ’ ಭರಿಸಲು ಹೊರೆಯಾಗಿದೆ. ಅದನ್ನು ಬರಲಿರುವ ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನಿಸಿ ಸರ್ಕಾರವೇ ಭರಿಸುವಂತೆ ಆಗ್ರಹಿಸುವುದಾಗಿ ಹೇಳಿದರು.

ಹೇಮಾವತಿ ನೀರಾವರಿ ಇಲಾಖೆಯ ಇಂಜಿನಿಯರ್‌ಗಳಾದ ಉಮೇಶ್‌, ಅಮೃತರಾಜ್‌ ಮಾತನಾಡಿ, ಮೊದಲ ಮತ್ತು 2ನೇ ಹಂತದಲ್ಲಿ 22 ಕೆರೆಗಳು ಈ ವ್ಯಾಪ್ತಿಗೆ ಬರುತ್ತವೆ. ಅಧಿಕೃತವಾಗಿ ಇನ್ನೂ ನೀರು ಹರಿಸಿಲ್ಲ. 5.5 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಕಾಮಗಾರಿಗೆ ಕೆಲವು ಸಮಸ್ಯೆ ಉದ್ಭವಿಸಿದ್ದು, ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಿದೆ ಎಂದರು.

ಇದುವರೆಗೂ ಪ್ರಾಯೋಗಿಕವಾಗಿ ಮಾತ್ರ ಮರಿಶೆಟ್ಟಿಹಳ್ಳಿ ಹೊಸಕೊಪ್ಪಲು, ಹಳೇ ಬೆಳಗೊಳ, ಚನ್ನಹಳ್ಳಿ, ಉಳಿಗೆರೆ, ಮತಿಘಟ್ಟ ನೀರು ಕೆರೆಗಳಿಗೆ ಹರಿಸಲಾಗಿದ್ದು, ಅನಧಿಕೃತವಾಗಿ ಬೆಕ್ಕ, ಹೊಸಹಳ್ಳಿ, ಪರಮ, ಕೆರೆಗಳಿಗೂ ನೀರನ್ನು ಹರಿಸಲಾಗಿದೆ ಎಂದರು.

ಬಸವನಹಳ್ಳಿ ಬಳಿ ಜಮಾವಣೆಗೊಂಡಿದ್ದ ಚನ್ನಹಳ್ಳಿ, ಉಳಿಗೆರೆ, ಪರಮ, ಚಲ್ಯಾ, ಜುಟ್ಟನಹಳ್ಳಿ, ಕುಂಭೇನಹಳ್ಳಿ, ರೈತರುಗಳು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳನ್ನು ತರಾಟೆ ತೆಗೆದು ಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.