
ಜಾವಗಲ್: ವಾರದಿಂದ ನಿರಂತರವಾಗಿ ಸುರಿದ ಭಾರಿ ಮಳೆಗೆ ಗ್ರಾಮದ ಖಲಂದರ್ ನಗರ ಹಾಗೂ ಹೌಸಿಂಗ್ ಬೋರ್ಡ್‌ನ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, ಶುಕ್ರವಾರ ಸಂಜೆ ಬೇಲೂರು ವಿಧಾನಸಭಾ ಶಾಸಕ ಎಚ್.ಕೆ. ಸುರೇಶ್ ಮಳೆಯಿಂದ ಹಾನಿ ಉಂಟಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಾವಗಲ್‌ನ ದೊಡ್ಡ ಕೆರೆಗೆ ನೀರಿನ ಸಂಪರ್ಕ ಕಲ್ಪಿಸುವ ನಾಗಲಾಪುರ ಕಟ್ಟೆಯು ಭರ್ತಿಯಾಗಿ ಪೋಷಕ ಕಾಲುವೆ ಮೂಲಕ ದೊಡ್ಡ ಕೆರೆಗೆ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿರುವುದು ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಆದರೆ ಈ ಕಾಲುವೆಯಲ್ಲಿ ಹೂಳು ತುಂಬಿ ಗಿಡಗಂಟಿಗಳು ಬೆಳೆದಿದ್ದು, ನೀರಿನ ಹರಿವಿಗೆ ತೊಡಕಾಗಿ ನೀರು ಖಲಂದರ್ ನಗರ ಹಾಗೂ ಇನ್ನಿತರೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ಹಾನಿಯಾಗಿದೆ.
ಇದರಿಂದ ಎಚ್ಚೆತ್ತ ಜಾವಗಲ್ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಿಟಾಚಿ ಹಾಗೂ ಜೆ.ಸಿ.ಬಿ ಮೂಲಕ ಕಾಲುವೆಯಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ತೆರವುಗೊಳಿಸಿದರು, ಇದರಿಂದ ಕಾಲುವೆಯ ಮೂಲಕ ನೀರು ಸರಾಗವಾಗಿ ಹರಿದು ಗ್ರಾಮದ ದೊಡ್ಡ ಕೆರೆಯನ್ನು ಸೇರಿದೆ.
‘ಪೋಷಕ ಕಾಲುವೆಯ ನಿರ್ವಹಣೆಯಲ್ಲಿ ಲೋಪವಾಗಿರುವ ಕಾರಣ ಕಾಲುವೆಯು ಹಾನಿಗೊಳಗಾಗಿದ್ದು, ಇದರ ಪರಿಣಾಮ ಕಾಲುವೆಯಿಂದ ನೀರು ಸೋರಿಕೆಯಾಗಿ ಹೌಸಿಂಗ್ ಬೋರ್ಡ್ ಹಾಗೂ ಖಲಂದರ್ ನಗರದಲ್ಲಿರುವ ಹಲವು ಮನೆಗಳಿಗೆ ನುಗ್ಗಿ ಹಾನಿಯಾಗಿದೆ’ ಎಂದು ಇಲ್ಲಿನ ಸ್ಥಳೀಯ ನಿವಾಸಿಗಳು ಶಾಸಕರಿಗೆ ಮಾಹಿತಿ ನೀಡಿದರು.
ಜನರಿಂದ ಮಾಹಿತಿ ಪಡೆದ ಶಾಸಕ ಸುರೇಶ್, ‘ಕಾಲುವೆಯನ್ನು ಶೀಘ್ರವಾಗಿ ಸ್ವಚ್ಛಗೊಳಿಸುವುದರ ಜೊತೆಗೆ ಕಾಲುವೆ ದುರಸ್ತಿಗೆ ತಗಲುವ ಅಂದಾಜು ಮೊತ್ತದ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಂದರ್ ರಾಜು ಅವರಿಗೆ ಮೊಬೈಲ್ ಫೋನ್ ಮೂಲಕ ಸೂಚಿಸಿದರು.
ಮತ್ತೊಂದೆಡೆ ಮಳೆಯಿಂದ ಮನೆ ಗೋಡೆಗಳು ಕುಸಿತಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಸಂತ್ರಸ್ತರಿಗೆ ಶೀಘ್ರವಾಗಿ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪಾಪಣ್ಣ, ಬಿಜೆಪಿ ಮುಖಂಡರಾದ ರಮೇಶ್, ಸೋಮಶೇಖರ್, ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.