ADVERTISEMENT

ಬೇಲೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಜೆಡಿಎಸ್‌ ಕೊಡುಗೆ ಅಪಾರ ರೇವಣ್ಣ

ಕಾರ್ಯಕರ್ತರ ಸಭೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 3:54 IST
Last Updated 15 ನವೆಂಬರ್ 2021, 3:54 IST
ಬೇಲೂರಿನಲ್ಲಿ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತೊರೆದು ನೂರಾರು ಕಾರ್ಯಕರ್ತರು ಪಕ್ಷ ಸೇರಿದರು. ಶಾಸಕ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಕೆ.ಎಸ್. ಲಿಂಗೇಶ್ ಇದ್ದರು
ಬೇಲೂರಿನಲ್ಲಿ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತೊರೆದು ನೂರಾರು ಕಾರ್ಯಕರ್ತರು ಪಕ್ಷ ಸೇರಿದರು. ಶಾಸಕ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಕೆ.ಎಸ್. ಲಿಂಗೇಶ್ ಇದ್ದರು   

ಬೇಲೂರು: ‘ಬೇಲೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಜೆಡಿಎಸ್ ನೀಡಿರುವ ಕೊಡುಗೆಯನ್ನು ಯಾವುದೇ ರಾಷ್ಟ್ರೀಯ ಪಕ್ಷಗಳು ನೀಡಿಲ್ಲ’ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ಪಟ್ಟಣದ ವೀರಶೈವ ಸಮುದಾಯ ಭವನದಲ್ಲಿ ವಿಧಾನ ಪರಿಷತ್ ಚುನಾವಣೆ ಸಂಬಂಧ ಜೆಡಿಎಸ್ ತಾಲ್ಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ದ್ದಾಗ ಜಿಲ್ಲೆ ಹಾಗೂ ಬೇಲೂರು ಕ್ಷೇತ್ರಕ್ಕೆ ಸಾಕಷ್ಟು ಕೆಲಸವಾಗಿದೆ’ ಎಂದರು.

‘ಅಧಿಕಾರದಲ್ಲಿದ್ದಾಗ ಹಾಸನ ಜಿಲ್ಲೆಗೆ ನಾನು ಏನು ಕೆಲಸ ಮಾಡಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿ ಕೊಂಡಿದ್ದಾರೆ. ಅಧಿಕಾರದಲ್ಲಿದ್ದಾಗ ಕೊಟ್ಟ ಅನುದಾನವನ್ನು ವಾಪಸ್ ತೆಗೆದುಕೊಂಡರು. ಆದರೆ, ಕುಮಾರಸ್ವಾಮಿ ಸಿ.ಎಂ ಆಗಿದ್ದಾಗ ಯಡಿಯೂರಪ್ಪ ಅವರ ಕ್ಷೇತ್ರಕ್ಕೆ ನೀರಾವರಿ ಯೋಜನೆಗಾಗಿ ₹ 255 ಕೋಟಿ ಅನುದಾನ ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕೇಂದ್ರ ಸಚಿವ ನಿತಿನ್ ಗಡ್ಕರಿ ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ₹ 1,230 ಕೋಟಿ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಆದರೆ ಕೆಲಸ ಮಾಡಲು ಬಿಜೆಪಿ ಮುಖಂಡರು ಬಿಡಲಿಲ್ಲ. ಅಲ್ಲದೇ, ಬೇಲೂರು ಕ್ಷೇತ್ರದ 13 ಸೇತುವೆಗಳ ಕಾಮಗಾರಿಗೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಿಡುಗಡೆ ಮಾಡಿದ್ದ ₹ 20 ಕೋಟಿ ಅನುದಾನವನ್ನು ತಡೆ ಹಿಡಿದರು. ಆದರೂ, ಅನುದಾನ ತಂದು ಕೆಲಸ ಮಾಡಿಸುವುದು ಹೇಗೆ ಎಂಬುದು ನಮಗೆ ಗೊತ್ತಿದೆ’ ಎಂದರು.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ‘ವಿಧಾನ ಪರಿಷತ್ ಚುನಾವಣೆಗೆ ನಮ್ಮ ಕುಟುಂಬದವರನ್ನೇ ಅಭ್ಯರ್ಥಿಯಾಗಿ ಹಾಗಬೇಕು ಎಂದೇನಿಲ್ಲ. ಇಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಕಾರ್ಯಕರ್ತರು ಸೂಚಿಸಿದವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗುವುದು. ಅಭ್ಯರ್ಥಿ ಯಾರೇ ಆಗಲಿ ಅವರನ್ನು ಬೆಂಬಲಿಸಿ ಜಿಲ್ಲೆಯಲ್ಲಿ ಜೆಡಿಎಸ್ ಬಾವುಟವನ್ನು ಹಾರಿಸಬೇಕು’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಶಾಸಕ ಕೆ.ಎಸ್. ಲಿಂಗೇಶ್ ಮಾತನಾಡಿ, ‘ಹಾಸನ ಶಾಸಕರು ಬೇಲೂರಿಗೆ ಬಂದು ರೇವಣ್ಣ ಹಾಗೂ ನನ್ನ ಬಗ್ಗೆ ಟೀಕೆ ಮಾಡಿದ್ದಾರೆ. ನನ್ನ ಸಾಧನೆ ಶೂನ್ಯ, ರಣಘಟ್ಟ ಯೋಜನೆ ನಾವು ಮಾಡಿದ್ದು ಎಂದಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ರಣಘಟ್ಟ ಯೋಜನೆ ಒಂದು ವರ್ಷದ ಹಿಂದೆಯೇ ಆಗಬೇಕಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯೋಜನೆ ಒಂದು ವರ್ಷ ತಡವಾಯಿತು’ ಎಂದರು.

ಸಭೆಯಲ್ಲಿ ಬಹುತೇಕ ಮುಖಂಡರು ಮತ್ತು ಗ್ರಾ.ಪಂ. ಸದಸ್ಯರು ಭವಾನಿ ರೇವಣ್ಣ, ಸೂರಜ್ ರೇವಣ್ಣ ಸ್ಪರ್ಧಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ತೊರೆದ ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆಯಾದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ತೋ.ಚ. ಅನಂತ ಸುಬ್ಬರಾಯ, ಎಚ್‌ಡಿಸಿಸಿ ಬ್ಯಾಂಕ್ ನಿರ್ದೆಶಕ ಎಂ.ಎ.ನಾಗರಾಜ್, ಜಿ.ಪಂ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಇಂದಿರಾ, ಸದಸ್ಯೆ ಲತಾ ಮಂಜೆಶ್ವರಿ, ಪುರಸಭೆ ಮಾಜಿ ಅಧ್ಯಕ್ಷೆ ಭಾರತಿ, ತಾ.ಪಂ ಮಾಜಿ ಉಪಾಧ್ಯಕ್ಷೆ ಪದ್ಮಾಕ್ಷಿ, ಜೆಡಿಎಸ್ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಉಮೇಶ್, ಮುಖಂಡರಾದ ಬಲ್ಲೇನಹಳ್ಳಿ ರವಿಕುಮಾರ್, ನಟರಾಜ್, ದಿಲೀಪ್, ದೇವರಾಜ್, ಉಮೇಶ್, ಮಲ್ಲೇಗೌಡ, ಸೌಮ್ಯಾ ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.