ADVERTISEMENT

’ಅಭಿವೃದ್ಧಿಗೆ ಜೆಡಿಎಸ್‌ ಸದಸ್ಯರ ಅಸಹಕಾರ’

15ನೇ ಹಣಕಾಸು ವಾಪಸ್ಸಾಗುವ ಆತಂಕ; ಶ್ವೇತಾ ದೇವರಾಜ್‌

​ಪ್ರಜಾವಾಣಿ ವಾರ್ತೆ
Published 26 ಮೇ 2020, 17:07 IST
Last Updated 26 ಮೇ 2020, 17:07 IST
ಹಾಸನ ನಗರದ ಪ್ರವಾಸಿ ಮಂದಿರದಲ್ಲಿ ಜಿ.ಪಂ ಅಧ್ಯಕ್ಷೆ ಶ್ವೇತಾ ದೇವರಾಜ್‌ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಹಾಸನ ನಗರದ ಪ್ರವಾಸಿ ಮಂದಿರದಲ್ಲಿ ಜಿ.ಪಂ ಅಧ್ಯಕ್ಷೆ ಶ್ವೇತಾ ದೇವರಾಜ್‌ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.   

ಹಾಸನ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ವಿಶೇಷ ಸಭೆಗೆ ಜೆಡಿಎಸ್‌ನ 23 ಸದಸ್ಯರು ಗೈರು ಹಾಜರಾಗಿದ್ದು, ಅಭಿವೃದ್ಧಿ ವಿಚಾರದಲ್ಲಿ ಅಸಹಕಾರ ತೋರುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌.ಶ್ವೇತಾ ದೇವರಾಜ್ ಆರೋಪಿಸಿದರು.

ಕೊರೊನಾ ನಿಯಂತ್ರಣ ಉದ್ದೇಶದಿಂದ 15ನೇ ಹಣಕಾಸು ಯೋಜನೆಯಡಿ ಸರ್ಕಾರ 6.20 ಕೋಟಿ ರೂಪಾಯಿ ಅನುದಾನ ನೀಡಿದೆ. ಅದರಲ್ಲಿ ಶೇ 50ರಷ್ಟು ಹಣವನ್ನು ಕೊರೊನಾ ಕಾರ್ಯಕ್ಕೆ ಬಳಸಬಹುದಾಗಿದೆ. ಆದ್ದರಿಂದ ಮಂಗಳವಾರ ವಿಶೇಷ ಸಭೆ ಕರೆಯಲಾಗಿತ್ತು. ಜೆಡಿಎಸ್ ನ ಸದಸ್ಯರು ಜಿಲ್ಲಾ ಪಂಚಾಯಿತಿಗೆ ಬಂದರು ಸಭೆಗೆ ಭಾಗವಹಿಸಿರಲಿಲ್ಲ. ಮೇ 30ರ ಒಳಗೆ ಸಾಮಾನ್ಯ ಸಭೆ ಸನುಮೋದನೆ ಪಡೆಯದಿದ್ದ ಅಷ್ಟೂ ಅನುದಾನ ವಾಪಸ್ ಹೋಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ನಾಲ್ಕು ವರ್ಷದಿಂದ ಜೆಡಿಎಸ್‍ದ್ವೇಷ ರಾಜಕಾರಣ ಮಾಡಿಕೊಂಡು ಬಂದಿದೆ. ಮಂಗಳವಾರದ ವಿಶೇಷ ಸಭೆಗೆ ಬಿಜೆಪಿಯ ಒಬ್ಬ ಹಾಗೂ ಕಾಂಗ್ರೆಸ್‍ನ 16 ಸದಸ್ಯರು ಹಾಜರಿದ್ದರು. ಜೆಡಿಎಸ್‍ನ 23 ಸದಸ್ಯರು ಜಿಲ್ಲಾ ಪಂಚಾಯಿತಿಗೆ ಬಂದರೂ ಮೀಟಿಂಗ್ ಹಾಲ್‍ಗೆ ಬರಲಿಲ್ಲ. ಕಳೆದ ಮೂರು ಸಭೆಗೆ ಇದೇ ರೀತಿ ಗೈರಾಗಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಮೇ 26 ರಂದು ವಿಶೇಷ ಸಭೆ ನಡೆಸುತ್ತೇನೆಂದು 12 ದಿನಗಳ ಹಿಂದೆಯೇ ಎಲ್ಲರಿಗೂ ಸೂಚನೆ ನೀಡಲಾಗಿದೆ. ಉದ್ದೇಶ ಪೂರ್ವಕವಾಗಿಯೇ ಅವರು ಹೀಗೆಲ್ಲ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ವರಿಷ್ಠರ ಮಾತಿಗೆ ಮನ್ನಣೆ ನೀಡಿ ಬೆಂಬಲಿಸಿದ್ದೇವೆ. ಆದರೆ ಈಗ ನಮಗೆ ಸಹಕಾರ ನೀಡುತ್ತಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, 15ನೇ ಹಣಕಾಸು ಯೋಜನೆಯಡಿ 112 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಗ್ರಾಮ ಪಂಚಾಯಿತಿಗೆ ಶೇ 80ರಷ್ಟು, ತಾಲ್ಲೂಕು ಪಂಚಾಯಿತಿಗೆ ಶೇ 15ರಷ್ಟು ಹಾಗೂ ಜಿಲ್ಲಾ ಪಂಚಾಯಿತಿಗೆ ಶೇ 5ರಷ್ಟು ಅನುದನ ದೊರೆತಿದೆ. ಆದರೆ ಜೆಡಿಎಸ್ ಸದಸ್ಯರ ಅಸಹಕಾರದಿಂದ ಮೇ 30ರ ಒಳಗೆ ಅನುಮೋದನೆ ನೀಡದಿದ್ದರೆ ಹಣ ವಾಪಸ್ಸಾಗುವ ಸಾಧ್ಯತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಈಗ ಶಾಸಕ ಎಚ್.ಡಿ.ರೇವಣ್ಣ ಅವರು ಜೆಡಿಎಸ್ ಸದಸ್ಯರು ಮೇ 29ಕ್ಕೆ ಕರೆದಿರುವ ಸಭೆಗೆ ಹಾಜರಾಗುವಂತೆ ನಿರ್ದೇಶನ ನೀಡಲಿ. ಜನರು ಸಂಕಷ್ಟಕ್ಕೆ ಸಿಲುಕಿರುವ ಪ್ರಸ್ತುತ ದಿನಗಳಲ್ಲಿ ರಾಜಕೀಯ ದ್ವೇಷ ಮುಂದುವರಿಸುವುದು ಸರಿಯಲ್ಲ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೇಯಸ್ ಪಟೇಲ್ ಇದ್ದರು.

ಮೇ 29ಕ್ಕೆ ಸಭೆ
ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನಕ್ಕೆ ಅನುಮೋದನೆ ನೀಡುವ ಉದ್ದೇಶದಿಂದ ಮೇ 29 ರಂದು ಮತ್ತೊಮ್ಮೆ ವಿಶೇಷ ಸಭೆ ಕರೆಯಲಾಗಿದೆ. ಸಭೆಗೆ ಜೆಡಿಎಸ್‍ನ ಎಲ್ಲಾ ಸದಸ್ಯರು ಹಾಜರಾಗಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಿ ಎಂದು ಕೋರುತ್ತೇನೆ.
-ಬಿ.ಎಸ್.ಶ್ವೇತಾ ದೇವರಾಜ್, ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.