ADVERTISEMENT

ತೈಲ ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ ಪ್ರತಿಭಟನೆ

ಹೋಬಳಿ ಮಟ್ಟದಲ್ಲೂ ಧರಣಿ, ದರ ಇಳಿಕೆ ಮಾಡಲು ಮುಖಂಡರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 15:54 IST
Last Updated 23 ಜೂನ್ 2021, 15:54 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್‌ ಶಾಸಕರು, ಮುಖಂಡರು ಪ್ರತಿಭಟನೆ ನಡೆಸಿದರು
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್‌ ಶಾಸಕರು, ಮುಖಂಡರು ಪ್ರತಿಭಟನೆ ನಡೆಸಿದರು   

ಹಾಸನ: ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದನೂರಾರು ಕಾರ್ಯಕರ್ತರು ಒಂದು ತಾಸು ಧರಣಿ ನಡೆಸಿದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಮೇ 4 ರಿಂದ ಈವರೆಗೆ 23 ಬಾರಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾಡಿದೆ. ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ ₹100 ಗಡಿ ದಾಟಿದೆ. ತೈಲ ಬೆಲೆ ಹೆಚ್ಚಳದಿಂದ ಸರಕು ಸಾಗಾಣಿಕೆ ದರ, ಬಸ್, ಟ್ಯಾಕ್ಸಿ ಮತ್ತು ಆಟೋ ಪ್ರಯಾಣ ದರಗಳು ಹೆಚ್ಚಳವಾಗಿದೆ. ಅಡುಗೆ ಎಣ್ಣೆ, ಬೇಳೆ-ಕಾಳುಗಳು, ತರಕಾರಿ ಮುಂತಾದ ಪದಾರ್ಥಗಳ ಬೆಲೆ ಗಗನಕ್ಕೇರಿದೆ ಎಂದು ಆರೋಪಿಸಿದರು.

ADVERTISEMENT

ಕೂಡಲೇ ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು. ಇಲ್ಲವಾದರೆ ಪಕ್ಷದ ವತಿಯಿಂದ ಹೋಬಳಿ ಮಟ್ಟದಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಾಸಕ ಎಚ್‌.ಡಿ. ರೇವಣ್ಣ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರದಿಂದ ಇಳಿಯುವವರೆಗೂ ದೇಶ ಅಭಿವೃದ್ಧಿ ಹೊಂದುವುದಿಲ್ಲ. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಮತ್ತಷ್ಟು ಹೊರೆಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಪೋರೇಟ್‌ ಕಂಪನಿಗಳ ಪರ ಕೆಲಸ ಮಾಡುತ್ತಿವೆ. ಲೂಟಿ ಹೊಡೆಯುವಂತಹ ಯೋಜನೆಗಳನ್ನು ಜಾರಿಗೆ ತರುತ್ತಿವೆ. ರಾಜ್ಯ ಮತ್ತು ಸರ್ಕಾರ ಜನರ ನಿರೀಕ್ಷೆಯನ್ನು ಹುಸಿಗೊಳಿಸಿವೆ ಎಂದರು.

ಬಳಿಕ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಕೆ.ಎಸ್‌. ಲಿಂಗೇಶ್‌ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ, ಎಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ನಾಗರಾಜು, ಸದಸ್ಯ ಬಿದರಿಕೆರೆ ಜಯರಾಮ್, ಮುಖಂಡರಾದ ಬಿ.ವಿ. ಕರೀಗೌಡ, ಮಂಜೇಗೌಡ, ಪ್ರಸಾದ್ ಗೌಡ, ಸಿ.ಆರ್. ಶಂಕರ್, ಸೈಯದ್‌ ಅಕ್ಬರ್, ಜೆ.ಪಿ.ಶೇಖರ್, ಕಮಲ್‌ ಕುಮಾರ್‌, ಸಂಗಮ್, ಶ್ರೀಕಾಂತ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.