ADVERTISEMENT

ಹಾಸನ: ‘ಕೈ’ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಕರಪತ್ರ ಪ್ರದರ್ಶನ

ನಿಜವಾದ ಕೋಮುವಾದಿಗಳು ಜೆಡಿಎಸ್‌: ಆರೋಪ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 11:08 IST
Last Updated 4 ಏಪ್ರಿಲ್ 2019, 11:08 IST
ಚನ್ನರಾಯಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮೋದಿ ಪರ ಘೋಷಣೆ ಕೂಗಿ ಕಾರ್ಯರ್ತರು ಬಿಜೆಪಿ ಕರಪತ್ರ ಪ್ರದರ್ಶಿಸಿದರು.
ಚನ್ನರಾಯಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮೋದಿ ಪರ ಘೋಷಣೆ ಕೂಗಿ ಕಾರ್ಯರ್ತರು ಬಿಜೆಪಿ ಕರಪತ್ರ ಪ್ರದರ್ಶಿಸಿದರು.   

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿ, ಬಿಜೆಪಿ ಕರಪತ್ರ ಪ್ರದರ್ಶಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಅವರ ಭಾಷಣಕ್ಕೂ ಅಡ್ಡಿ ಪಡಿಸಿದ ಕಾರ್ಯಕರ್ತರು, ಜೆಡಿಎಸ್‌ ಅಭ್ಯರ್ಥಿ ಬೆಂಬಲಿಸಲು ಆಗುವುದಿಲ್ಲ ಎಂದು ಕೂಗಾಡಿದರು.

‘ನಿಜವಾದ ಕೋಮುವಾದಿ ಜೆಡಿಎಸ್‍ನವರು, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯ ಜಾತಿ ನಿಂದನೆ ಮಾಡಿದವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ’ ಎಂದು ಮುಖಂಡರಾದ ಸಿ.ಎಸ್. ಜಯರಾಂ, ರಾಜಣ್ಣ ಅವರು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಮೋದಿ, ಮೋದಿ, ಎಂದು ಘೋಷಣೆ ಕೂಗಿ ಬಿಜೆಪಿಯ ಕರಪತ್ರ ಪ್ರದರ್ಶಿಸಿದರು.

ADVERTISEMENT

ವೇದಿಕೆಯಲ್ಲಿದ್ದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್‌ ಮಂಜುನಾಥ್, ಹಿರಿಯ ಮುಖಂಡರಾದ ಸಿ.ಎಸ್.ಪುಟ್ಟೇಗೌಡ, ಎಚ್‌.ಕೆ.ಜವರೇಗೌಡ, ಜೆ.ಎಂ.ರಾಮಚಂದ್ರ, ಹೆಮ್ಮಿಗೆ ಮೋಹನ್‌, ಎಂ.ಶಂಕರ್‌ ಮುಜುಗರಕ್ಕೆ ಒಳಗಾಗಬೇಕಾಯಿತು. ಸಭೆ ಗದ್ದಲ, ಗೊಂದಲದಲ್ಲೇ ಮುಕ್ತಾಯಗೊಂಡಿತು.

ಬಿಜೆಪಿ ಪರ ಘೋಷಣೆ ಕೂಗುತ್ತಿದ್ದವರನ್ನು ಸಮಾಧಾನಪಡಿಸಲು ಯತ್ನಿಸಿದರೂ ಸಫಲವಾಗಲಿಲ್ಲ. ಈ ಹಂತದಲ್ಲಿ ಇನ್ನೊಂದು ಗುಂಪು ಕಾಂಗ್ರೆಸ್ ಮುಖಂಡರ ಪರವಾಗಿ ಘೋಷಣೆ ಕೂಗಲಾರಂಭಿಸಿತು. ಎರಡು ಗುಂಪಿನವರು ಪರಸ್ಪರ ಘೋಷಣೆ ಕೂಗಿದರು.

ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಂ ಮಾತನಾಡಿ, ‘ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕಾಂಗ್ರೆಸ್ ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಯನ್ನು ವರಿಷ್ಠರ ಗಮನಕ್ಕೆ ತಂದಿದ್ದೇವೆ. ರಾಷ್ಟ್ರ ಮಟ್ಟದಲ್ಲಿ ಎನ್ ಡಿಎ, ಯುಪಿಎ ಮೈತ್ರಿ ಕೂಟಗಳು ಅಸ್ತಿತ್ವಕ್ಕೆ ಬಂದಿದೆ. ಯುಪಿಎ ಮೈತ್ರಿಕೂಟದಿಂದ ರಾಹುಲ್‍ಗಾಂಧಿ ಅವರನ್ನು ಪ್ರಧಾನಿ ಮಾಡಬೇಕಿದೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡಲು ಮೈತ್ರಿ ಏರ್ಪಟ್ಟಿದೆ’ ಎನ್ನುತ್ತಿದ್ದಂತೆ ಕಾರ್ಯಕರ್ತರು ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಗದ್ದಲ ಹೆಚ್ಚಾದಾಗ ಶಿವರಾಂ ಭಾಷಣ ಮೊಟಕುಗೊಳಿಸಿದರು.

ವಿಧಾನಪರಿಷತ್‌ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ‘ಜೆಡಿಎಸ್‍ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸ್ವಲ್ಪ ಮಟ್ಟಿಗೆ ಅಸಮಾಧಾನ ಇರುವುದು ನಿಜ. ಸಭೆಯಲ್ಲಿ ಬಿಜೆಪಿ ಪರ ಘೋಷಣೆ ಕೂಗಿರುವುದು ಬಿಜೆಪಿ ಕಾರ್ಯಕರ್ತರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.