
ಹೊಳೆನರಸೀಪುರ: ಪಟ್ಟಣದ ಶ್ರೀ ಲಕ್ಷ್ಮೀನರಸಿಂಹ ಯುವಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜನೆ ಮಾಡಿದ ನಾಲ್ಕು ದಿನಗಳ ಕನ್ನಡ ಸಂಭ್ರಮೋತ್ಸವ ಹಾಗೂ ಬಯಲು ರಂಗಮಂದಿರ ಆವರಣದಲ್ಲಿ ಸಿಗರನಹಳ್ಳಿ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ನಡೆದ 8 ದಿನಗಳ ಪೌರಾಣಿಕ ನಾಟಕೋತ್ಸವ ಭಾನುವಾರ ಸಂಪನ್ನಗೊಂಡಿತು.
ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಸಮೀಪ ಭಾನುವಾರ ಸಂಜೆ ಸಂಸದ ಶ್ರೇಯಸ್ ಪಟೇಲ್ ಅವರು ನಾಡದೇವತೆ ಭುವನೇಶ್ವರಿ ಭಾವಚಿತ್ರವಿದ್ದ ರಥ ಹಾಗೂ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.
ನಾಲ್ಕು ದಿನಗಳ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳನ್ನು ಮೈಸೂರು ದಸರಾ ಹಾಗೂ ಹಾಸನಾಂಬ ಜಾತ್ರೆಯ ವಿದ್ಯುತ್ ದೀಪಾಲಂಕಾರ ನೆನಪಿಸುವ ರೀತಿಯಲ್ಲಿ ಅಲಂಕರಿಸಲಾಗಿತ್ತು.
ನ. 27 ರಂದು ಸಂಜೆ ಸರಿಗಮಪ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮವನ್ನು ಬಸವನಗುಡಿ ಬೀದಿಯಲ್ಲಿ ನಿರ್ಮಿಸಿದ್ದ ಪುನೀತ್ ರಾಜ್‍ಕುಮಾರ್ ವೇದಿಕೆಯಲ್ಲಿ ನಡೆಸಲಾಗಿತ್ತು. ನ.28 ರಂದು ಸಂಜೆ ಪಟ್ಟಣದ ಬಯಲು ರಂಗಮಂದಿರ ಮೈದಾನದಲ್ಲಿ ನಿರ್ಮಿಸಿದ್ದ ರಣಧೀರ ಕಂಠೀರವ ವೇದಿಕೆಯಲ್ಲಿ ಜೈ ವೀರಹನುಮಾನ್ ದೊಡ್ಡಗರಡಿಯ ಅಧ್ಯಕ್ಷರು, ಸದಸ್ಯರು ಹಾಗೂ ಉಸ್ತಾದರ ಸಹಕಾರದಲ್ಲಿ 60 ಜೊತೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು.
ಲಕ್ಷ್ಮೀ ನರಸಿಂಹಸ್ವಾಮಿ ದೇವಾಸ್ಥಾನದ ಮುಂಭಾಗ ನಿರ್ಮಿಸಿರುವ ರಾಷ್ಟ್ರಕವಿ ಕುವೆಂಪು ವೇದಿಕೆಯಲ್ಲಿ ನ.29 ರಂದು ಸರಿಗಮಪ ಕಲಾವಿದರಿಂದ ರಸಮಂಜರಿ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ನ.30 ರಂದು ರಾತ್ರಿ ಅಲಂಕರಿಸಿದ ರಥದಲ್ಲಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ವೈಭವದಿಂದ ನಡೆಯಿತು.
ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ. ಪುಟ್ಟರಾಜು ಮಾತನಾಡಿ, ಪಟ್ಟಣದಲ್ಲಿ ನಾಲ್ಕು ದಿನ ಯಶಸ್ವಿ ನಾಡಹಬ್ಬ ಕನ್ನಡ ರಾಜ್ಯೋತ್ಸವ ಅಚ್ಚುಕಟ್ಟಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.