ADVERTISEMENT

ನಾವು ಇಂದು ಬದುಕಿದ್ದರೆ, ಅದಕ್ಕೆ ಉಚಿತ ಕೋವಿಡ್‌ ಲಸಿಕೆ ಕಾರಣ: ಶೋಭಾ ಕರಂದ್ಲಾಜೆ

ದೇಶದಲ್ಲಿಯೇ ಲಸಿಕೆ ತಯಾರಿಸುವ ಮೂಲಕ ದೇಶದ ಜನರನ್ನು ರಕ್ಷಣೆ ಮಾಡುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 7:36 IST
Last Updated 21 ಫೆಬ್ರುವರಿ 2023, 7:36 IST
   

ಬೇಲೂರು(ಹಾಸನ): ಕೇಂದ್ರದ ಬಿಜೆಪಿ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ.‌ ಎಲ್ಲ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಸ್ವಾವಲಂಬಿ ದೇಶ, ಆತ್ಮನಿರ್ಭರ ದೇಶ ನಿರ್ಮಾಣ ಮಾಡುವ ಸಂಕಲ್ಪವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕೋವಿಡ್- 19 ಸಂದರ್ಭದಲ್ಲಿ ಜಗತ್ತು ತತ್ತರಿಸಿದ ಸಂದರ್ಭದಲ್ಲಿ ದೇಶದಲ್ಲಿಯೇ ಲಸಿಕೆ ತಯಾರಿಸುವ ಮೂಲಕ ದೇಶದ ಜನರನ್ನು ರಕ್ಷಣೆ ಮಾಡುವ ಕೆಲಸವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ. ನಾವು ಇಲ್ಲಿ ಬದುಕಿ ಕುಳಿತಿದ್ದರೆ, ಅದು ನಮ್ಮ ದೇಶದಲ್ಲಿ ಉಚಿತ ಲಸಿಕೆ ಕಾರಣದಿಂದ ಎಂದರು.

ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ, ಈ ಭಾಗಕ್ಕೆ ಹೇಳಿಕೊಳ್ಳುವಂತಹ ಯೋಜನೆ ರೂಪಿಸಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ, ಈ ಭಾಗದ ರೈತರ ಜಮೀನಿಗೆ ಯಗಚಿ ಜಲಾಶಯದ ನೀರು ಒದಗಿಸಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಆಹಾರ, ಔಷಧಿ, ಕೌಶಲಗಳಲ್ಲಿ ದೇಶ ಸ್ವಾವಲಂಬನೆ ಸಾಧಿಸುತ್ತಿದೆ. ವಿದೇಶಗಳಿಗೆ ಆಹಾರ ಧಾನ್ಯ, ತರಕಾರಿ, ಹಣ್ಣುಗಳನ್ನು ರಫ್ತು ಮಾಡುವ ದೇಶ ನಮ್ಮದಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಗೋದಾಮು, ಶೀತಲೀಕರಣ ಘಟಕ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕೃಷಿ ಕ್ಷೇತ್ರದ ಮೂಲಸೌಕರ್ಯಕ್ಕೆ ₹1 ಲಕ್ಷ ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

ರೈತರ ಪರವಾಗಿ ನಿಂತಿರುವ ಬಿಜೆಪಿ ಸರ್ಕಾರಕ್ಕೆ ಜನರು ಬೆಂಬಲ ನೀಡಬೇಕು. ಯುಪಿಎ ಸರ್ಕಾರ, ನರೇಂದ್ರ ಮೋದಿ ನೇತೃತ್ವದ ಸರ್ಕಾರಗಳನ್ನು ತುಲನೆ ಮಾಡಿ ಮತ ಚಲಾಯಿಸಬೇಕು ಎಂದರು.

ಜಾತಿ ರಾಜಕಾರಣ:
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಜಾತಿ ಆಧಾರಿತ‌ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ಅವರು ಶಾದಿ ಭಾಗ್ಯದ ಮೂಲಕ ಒಂದು ವರ್ಗವನ್ನು ಒಲೈಕೆ ಮಾಡಿದ್ದಾರೆ.

ಆದರೆ, ಬಿಜೆಪಿ ಸರ್ಕಾರ ಎಲ್ಲರಿಗೂ ಸರ್ಕಾರದ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಇರುವ ವ್ಯತ್ಯಾಸ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.