ADVERTISEMENT

ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ: ಎ.ಎಸ್‌. ಪಾಟೀಲ ನಡಹಳ್ಳಿ ಆರೋಪ

ಬೀದಿ ನಾಯಿಗಳಿಗೆ ಆಹಾರದ ನೆಪದಲ್ಲಿ ಭ್ರಷ್ಟಾಚಾರ: ಎ.ಎಸ್‌. ಪಾಟೀಲ ನಡಹಳ್ಳಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 2:09 IST
Last Updated 13 ಜುಲೈ 2025, 2:09 IST
ಹಾಸನ ತಾಲ್ಲೂಕಿನ ಬನವಾಸೆ ಗ್ರಾಮಕ್ಕೆ ಭೇಟಿ ನೀಡಿದ ಎ.ಎಸ್‌. ಪಾಟೀಲ ನಡಹಳ್ಳಿ ನೇತೃತ್ವದ ಬಿಜೆಪಿ ತಂಡ, ರೋಗಕ್ಕೆ ತುತ್ತಾಗಿರುವ ಮೆಕ್ಕೆಜೋಳವನ್ನು ಪರಿಶೀಲಿಸಿತು.
ಹಾಸನ ತಾಲ್ಲೂಕಿನ ಬನವಾಸೆ ಗ್ರಾಮಕ್ಕೆ ಭೇಟಿ ನೀಡಿದ ಎ.ಎಸ್‌. ಪಾಟೀಲ ನಡಹಳ್ಳಿ ನೇತೃತ್ವದ ಬಿಜೆಪಿ ತಂಡ, ರೋಗಕ್ಕೆ ತುತ್ತಾಗಿರುವ ಮೆಕ್ಕೆಜೋಳವನ್ನು ಪರಿಶೀಲಿಸಿತು.   

ಹಾಸನ: ರೈತರು, ಜನರ ಬಗ್ಗೆ ಕಾಳಜಿ ಇಲ್ಲದ ಸರ್ಕಾರಕ್ಕೆ ಬೀದಿ ನಾಯಿಗಳಿಗೆ ಆಹಾರ ನೀಡುವ ನೆಪದಲ್ಲಿ ಭ್ರಷ್ಟಾಚಾರ ಮಾಡಲು ಹೊರಟಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರೈತರು ಬೆಳೆ ನಷ್ಟದ ಸಂಕಷ್ಟದಿಂದ ಮುಳುಗಿದ್ದಾರೆ .ಈ ಸರ್ಕಾರಕ್ಕೆ ರೈತರು, ಹಾಲು ಕೊಡುವ ಹಸುಗಳ ಬಗ್ಗೆ ಚಿಂತೆ ಇಲ್ಲ. ಆದರೆ ಬೀದಿ ನಾಯಿಗಳ ಬಗ್ಗೆ ಕಾಳಜಿ ಬಂದಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ 26 ಲಕ್ಷ ಹಾಲು ಉತ್ಪಾದಕರಿದ್ದು, 15,500 ಸೊಸೈಟಿಗಳಲ್ಲಿ ಹಲವಾರು ಮಂದಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಹಾಲು ಉತ್ಪಾದಕರಿಗೆ ₹ 5 ಪ್ರೋತ್ಸಾಹ ಧನವನ್ನು ನೀಡುತ್ತಿದ್ದು, ಇದುವರೆಗೆ ₹ 900 ಕೋಟಿ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ADVERTISEMENT

ರಾಜ್ಯದ ಮತದಾರರನ್ನು ಮನುಷ್ಯರು ಎಂದು ತಿಳಿದಿದ್ದಾರೋ ಅಥವಾ ಬೀದಿ ನಾಯಿಗಳು ಅಂದುಕೊಂಡಿದ್ದಾರೋ ಗೊತ್ತಿಲ್ಲ. ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗ ತಗುಲಿರುವುದರಿಂದ ಹಾಸನ, ಮೈಸೂರು ಭಾಗದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ತೊಗರಿ ಬೆಳೆ ನಷ್ಟದಲ್ಲಿ ರೈತರಿದ್ದು, ಇವರಿಗೆ ಪರಿಹಾರ ವಿತರಿಸುವ ಬದಲು ಬೀದಿ ನಾಯಿಗಳಿಗೆ ಆಹಾರ ನೀಡಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.

ಹಾಸನದಲ್ಲಿ ಮೆಕ್ಕೆಜೋಳ ಬೆಳೆಯಲು ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕೆ ಪ್ರತಿ ರೈತ ₹20ಸಾವಿರದಿಂದ ₹ 25ಸಾವಿರ ವ್ಯಯ ಮಾಡಿದ್ದಾರೆ. ಕೂಡಲೇ ಸರ್ಕಾರ ಬೆಳೆ ಪರಿಹಾರ ವಿತರಿಸಬೇಕು. ಈಗಾಗಲೇ ನಮ್ಮ ರೈತ ಮೋರ್ಚಾ ವತಿಯಿಂದ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿದ್ದು, ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಬಿಜೆಪಿಯಿಂದ ಮಾತ್ರ ರೈತರ ಸಂಕಷ್ಟ ಪರಿಹರಿಸಬಹುದಾಗಿದ್ದು, ಇತ್ತೀಚೆಗೆ ಜನಾಕ್ರೋಶ ಯಾತ್ರೆ ಮೂಲಕ ಬಿಜೆಪಿಯು ರಾಜ್ಯ ಘಟಕದ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರು ರಾಜ್ಯದ ಜನರ ಸಂಕಷ್ಟವನ್ನು ಆಲಿಸಿದ್ದರು. ರಾಜ್ಯದ ಕಾಂಗ್ರೆಸ್‌ ಸಚಿವರು, ಪ್ರತಿ ಜಿಲ್ಲೆಯಲ್ಲಿ ಉಸ್ತುವಾರಿ ವಹಿಸಿಕೊಂಡು, ಕನಿಷ್ಠ ಕೆಡಿಪಿ ಸಭೆಯನ್ನು ಸಹ ಕಾಲಕಾಲಕ್ಕೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ಜಿಲ್ಲೆಯಲ್ಲಿ ಹೃದಯಘಾತದಿಂದ ಹತ್ತಾರು ಮಂದಿ ಸಾವಿಗೀಡಾಗುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಈ ಹಿಂದೆಯೇ ವಿಶೇಷ ಯೋಜನೆಯಡಿ ತುರ್ತು ನಿಗಾ ಘಟಕ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡಲಿದೆ. ಇತ್ತೀಚಿಗೆ ಕೊಡಗು ಜಿಲ್ಲೆಗೆ ₹ 29 ಕೋಟಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ್ದು, ಜಿಲ್ಲೆಯ ಲೋಕಸಭಾ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಬೆಂಗಳೂರು ಬಿಬಿಎಂಪಿ ಪ್ರತಿದಿನ ನಾಯಿಗಳಿಗೆ ಆಹಾರ ನೀಡಲು ಟೆಂಡರ್ ಕರೆದಿದೆ. ಈ ಮೂಲಕ ನಾಯಿಗಳ ಹೆಸರಲ್ಲಿ ಹಣ ಲೂಟಿ ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ.
ಎ.ಎಸ್. ಪಾಟೀಲ ನಡಹಳ್ಳಿ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ

ಜಮೀನಿಗೆ ಬಿಜೆಪಿ ತಂಡ ಭೇಟಿ

ಬಿಳಿ ಸುಳಿ ರೋಗದಿಂದಾಗಿ ತಾಲ್ಲೂಕಿನಲ್ಲಿ 5 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಮುಸುಕಿನ ಜೋಳ ನಾಶವಾಗಿದ್ದು ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಒತ್ತಾಯಿಸಿದರು. ಮುಸುಕಿನ ಜೋಳಕ್ಕೆ ಬಿಳಿ ಸುಳಿ ರೋಗ ತಗಲಿರುವ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ಬನವಾಸೆ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು. ಜಿಲ್ಲೆಯ ಬಹುತೇಕ ತಾಲ್ಲೂಕಿನಲ್ಲಿ ಜೋಳ ಬಿಳಿಸುಳಿ ರೋಗಕ್ಕೆ ತುತ್ತಾಗಿದ್ದು ಸರ್ಕಾರ ಕೂಡಲೇ ರೈತರಿಗೆ ಅಗತ್ಯ ಪರಿಹಾರ ವಿತರಿಸಬೇಕು. ಎಂದರು. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ರೈತ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ರೈತಮೂರ್ತಿ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣಗೌಡ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಗಿರೀಶ್ ಮುಖಂಡ ಚೆನ್ನಂಗಿಹಳ್ಳಿ ಶ್ರೀಕಾಂತ್ ಹಾಗೂ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಅಧಿವೇಶನದಲ್ಲಿ ಚರ್ಚೆ: ಪ್ರೀತಂಗೌಡ

ರೈತರ ಸಂಕಷ್ಟ ಆಲಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರದ ಸಚಿವರಾಗಲಿ ಉಸ್ತುವಾರಿ ಸಚಿವರಾಗಲಿ ಜಿಲ್ಲೆಗೆ ಬಂದಿಲ್ಲ. ಹೀಗಾಗಿ ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರು ವಿರೋಧ ಪಕ್ಷದ ನಾಯಕರಿಗೆ ವಿಷಯ ತಿಳಿಸಿದ್ದು ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರು ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಹೇಳಿದರು. ಈ ಬಗ್ಗೆ ವರದಿ ತಯಾರಿಸಿ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು. ಸರ್ಕಾರದ ರೈತ ವಿರೋಧಿ ಹಾಗೂ ಜನ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ರೈತರಿಗೆ ಬೆಳೆ ಪರಿಹಾರ ವಿತರಿಸಲು ಒತ್ತಾಯಿಸಲಾಗುವುದು ಎಂದರು. ನಮ್ಮ ಬೇಡಿಕೆ ಅನುಸಾರ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆಯನ್ನು ರಾಜ್ಯದಾದ್ಯಂತ ನಡೆಸಲಿದ್ದೇವೆ ಎಂದು ಪ್ರೀತಂ ಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.