ADVERTISEMENT

ಅರಕಲಗೂಡು: ಅನಕೃ ನೆನಪಿಗೆ ದಶಕದ ಸಂಭ್ರಮ

ಕಾದಂಬರಿ ಸಾರ್ವಭೌಮನ ನೆನಪಿನಲ್ಲಿ ಪ್ರತಿ ವರ್ಷ ಕಾರ್ಯಕ್ರಮ: ಪ್ರಶಸ್ತಿ ಪ್ರದಾನ

ಜಿ.ಚಂದ್ರಶೇಖರ್‌
Published 20 ಜುಲೈ 2025, 2:05 IST
Last Updated 20 ಜುಲೈ 2025, 2:05 IST
ಸಾಹಿತಿ, ಚಲನಚಿತ್ರ ಗೀತ ಬರಹಗಾರ ಪ್ರೊ.ದೊಡ್ಡರಂಗೇಗೌಡರಿಗೆ ಅನಕೃ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು. (ಸಂಗ್ರಹ ಚಿತ್ರ)
ಸಾಹಿತಿ, ಚಲನಚಿತ್ರ ಗೀತ ಬರಹಗಾರ ಪ್ರೊ.ದೊಡ್ಡರಂಗೇಗೌಡರಿಗೆ ಅನಕೃ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು. (ಸಂಗ್ರಹ ಚಿತ್ರ)   

ಅರಕಲಗೂಡು: ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ್ ಅಭಿಮಾನಿಗಳ ಬಳಗ ಪಟ್ಟಣದಲ್ಲಿ ನಡೆಸುತ್ತಿರುವ ವಾರ್ಷಿಕ ಕಾರ್ಯಕ್ರಮ ‘ಅನಕೃ ಒಂದು ನೆನಪು’ ಜು 20 ರಂದು ನಡೆಯಲಿದೆ.

ಅರಕಲಗೂಡಿನ ಸಾಹಿತಿ, ಕಾದಂಬರಿ ಸಾರ್ವಭೌಮ ಎಂದೇ ಖ್ಯಾತರಾದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ (ಅನಕೃ) ಅವರ ನೆನೆಪಿಗಾಗಿ ನಡೆಸುತ್ತಿರುವ ಈ ಕಾರ್ಯಕ್ರಮಕ್ಕೆ ಈ ಬಾರಿ 11 ನೇ ವರ್ಷದ ಸಂಭ್ರಮ. ಪ್ರತಿ ವರ್ಷ ಜುಲೈನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅನಕೃ ಅವರ ಬದುಕು, ಬರಹಗಳ ಚಿಂತನ ಮಂಥನದ ಜೊತೆಗೆ ನಾಡಿನ ಸಾಹಿತಿಗಳು, ರಂಗಕರ್ಮಿಗಳ ಸೇವೆ ಗುರುತಿಸಿ, ಅನಕೃ ಹೆಸರಿನಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ದಶಕದಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಗ್ರಾಮೀಣ ಭಾಗದಲ್ಲಿ ಜನರಿಗೆ ಸಾಹಿತ್ಯದ ಅಭಿರುಚಿ ಮೂಡಿಸಿ, ಸಾಹಿತ್ಯದ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿ ಎನಿಸಿದೆ. ತಾಲ್ಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಆಯೋಜಿಸುವ ಶಾಸ್ತ್ರೀಯ ಸಂಗೀತೋತ್ಸವದಂತೆ, ಅರಕಲಗೂಡಿನಲ್ಲಿ ಅನಕೃ ಹೆಸರನ್ನು ನೆನಪಿಸುವಂತೆ ಏನಾದರೂ ಮಾಡಬೇಕು ಎಂಬ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ್ ಅವರ ತುಡಿತ ಹಾಗೂ ಕನಸು ಈ ಕಾರ್ಯಕ್ರಮ ಆಯೋಜನೆಗೆ ಕಾರಣವಾಗಿದೆ.

ADVERTISEMENT

ದಶಕದಲ್ಲಿ ಹತ್ತಾರು ದಿಗ್ಗಜ ಸಾಹಿತಿಗಳು ಅನಕೃ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸಾಹಿತಿಗಳಾದ ಕೇಶರಾವ್, ದೊಡ್ಡರಂಗೇಗೌಡ, ಎಚ್.ಎಸ್. ವೆಂಕಟೇಶಮೂರ್ತಿ, ಸಿದ್ದಲಿಂಗಯ್ಯ, ಬಿ.ಯು ಗೀತಾ, ಪ್ರೊ.ಜಿ. ಅಶ್ವಥ್ ನಾರಾಯಣ್, ಶಾ.ಮಂ.ಕೃಷ್ಣರಾಯ, ವಾಗ್ಮಿ ಪ್ರೊ. ಕೃಷ್ಣೇಗೌಡ, ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ, ಉತ್ತಮ ಸರ್ಕಾರಿ ಸೇವೆಗಾಗಿ ಮಧುಕೇಶ್ವರ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅರಕಲಗೂಡು ಅನಕೃ ವೃತ್ತದಲ್ಲಿರುವ ಅನಕೃ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಿರುವ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ್. (ಸಂಗ್ರಹ ಚಿತ್ರ)
ಹಂ.ಪ.ನಾಗರಾಜಯ್ಯ

Highlights - ಸಾಹಿತ್ಯ ಸಂಭ್ರಮವಾಗಿ ಹೊರಹೊಮ್ಮುತ್ತಿರುವ ಕಾರ್ಯಕ್ರಮ ಆಯೋಜನೆಗೆ ಕನ್ನಡ ಸಾಹಿತ್ಯ ಪರಿಷತ್ ಸಹಯೋಗ ನಾಡಿನ ವಿವಿಧೆಡೆಗಳಿಂದ ನೂರಾರು ಸಾಹಿತಿಗಳು ಭಾಗಿ

Cut-off box - ಇಂದು ಕಾರ್ಯಕ್ರಮ ಪ್ರಶಸ್ತಿ ಪ್ರದಾನ ಹಾಗೂ ಅನಕೃ ನೆನಪು ಕಾರ್ಯಕ್ರಮ ಜು.20 ರಂದು ಬೆಳಿಗ್ಗೆ 11.30ಕ್ಕೆ ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆಯಲಿದೆ. ಶಾಸಕ ಎ. ಮಂಜು ಉದ್ಘಾಟಿಸಲಿದ್ದು ಆರ್.ಕೆ. ಪದ್ಮನಾಭ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿದೆ. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಬೆಂಗಳೂರು ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್ ಗೌಡ ತಹಶೀಲ್ದಾರ್ ಕೆ.ಸಿ. ಸೌಮ್ಯ ಬಿಇಒ ಕೆ.ಪಿ. ನಾರಾಯಣ್ ಟೈಮ್ಸ್ ಹಾಸನ ಪಿಯು ಕಾಲೇಜು ಪ್ರಾಂಶುಪಾಲ ಪಿ. ನವೀನ್ ಉಲಿವಾಲ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಗೌಡ ಸಬ್‌ ಇನ್‌ಸ್ಪೆಕ್ಟರ್‌ ಸಿ.ಆರ್. ಕಾವ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಟಿ. ಲೋಕೇಶ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಪ್ರಕಾಶ್ ಮೊಗವೀರ ಭಾಗವಹಿಸಲಿದ್ದಾರೆ.

Cut-off box - ಹಂಪನಾಗೆ ಅನಕೃ ಪ್ರಶಸ್ತಿ 11 ನೇ ವರ್ಷದ ಅನಕೃ ಪ್ರಶಸ್ತಿಗೆ ಸಾಹಿತಿ ಸಂಶೋಧಕ ಡಾ.ಹಂ.ಪ. ನಾಗರಾಜಯ್ಯ ಭಾಜನಾರಾಗಿದ್ದಾರೆ. ಹಂಪನಾ ಕಾವ್ಯನಾಮದಿಂದ ಚಿರಪರಿಚಿತರಾದ ಇವರು ಕನ್ನಡ ಎಂ.ಎ. ಸ್ನಾತಕೋತ್ತರ ಪದವೀಧರರು. ವಿದ್ವಾಂಸ ರಂ.ಶ್ರೀ ಮುಗಳಿ ಅವರ ಮಾರ್ಗದರ್ಶನದಲ್ಲಿ ವಡ್ಡಾರಾಧನೆ ಸಮಗ್ರ ಅಧ್ಯಯನ ಸಂಶೋಧನಾ ಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ 500ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿರುವ ಇವರು ಸಂಶೋಧಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.