ADVERTISEMENT

ಹಾಸನ: ರಾಜ್ಯಮಟ್ಟದ ಆಲೂಗಡ್ಡೆ ಮೇಳ 26ರಿಂದ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 5:31 IST
Last Updated 13 ಜನವರಿ 2026, 5:31 IST
ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಲೂಗಡ್ಡೆ ಮೇಳದ ಪೋಸ್ಟರ್‌ಗಳನ್ನು ಸಂಸದ ಶ್ರೇಯಸ್‌ ಪಟೇಲ್‌ ಬಿಡುಗಡೆ ಮಾಡಿದರು
ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಲೂಗಡ್ಡೆ ಮೇಳದ ಪೋಸ್ಟರ್‌ಗಳನ್ನು ಸಂಸದ ಶ್ರೇಯಸ್‌ ಪಟೇಲ್‌ ಬಿಡುಗಡೆ ಮಾಡಿದರು   

ಹಾಸನ: ಆಲೂಗಡ್ಡೆ ಬೆಳೆಯನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ರಾಜ್ಯ ಮಟ್ಟದ ಆಲೂಗಡ್ಡೆ ಮೇಳವನ್ನು ಜ.26 ಮತ್ತು 27ರಂದು ನೂತನ ಬಸ್ ನಿಲ್ದಾಣದ ಪಕ್ಕದಲ್ಲಿ ಆಯೋಜಿಸಲಾಗಿದೆ ಎಂದು‌ ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಲೂಗಡ್ಡೆ ಮೇಳದ ಪೋಸ್ಟರ್ ಬಿಡುಗಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಾಲದಲ್ಲಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಆಲೂಗಡ್ಡೆ ವಿಸ್ತೀರ್ಣ, ಕಳೆದ 15 ವರ್ಷಗಳಲ್ಲಿ ಗಣನೀಯವಾಗಿ ಕುಸಿದಿದೆ. ಹಿಂದೆ ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 40ಸಾವಿರದಿಂದ 50ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿತ್ತು. ಆದರೆ ಗುಣಮಟ್ಟದ ಬೀಜದ ಕೊರತೆ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಮುಂಗಾರು ಹಂಗಾಮಿನಲ್ಲಿ ಗಡ್ಡೆಗಳ ಕೊಳೆತ, ಮೊಳಕೆ ವೈಫಲ್ಯ, ಬೆಳೆ ಹಾನಿ ಹಾಗೂ ಅಂಗಮಾರಿ ರೋಗ ಸೇರಿದಂತೆ ಹಲವು ಕಾರಣಗಳಿಂದಾಗಿ ಐದು ವರ್ಷಗಳಲ್ಲಿ ಆಲೂಗಡ್ಡೆ ಬಿತ್ತನೆ ಪ್ರದೇಶವು ಕೇವಲ 4 ಸಾವಿರದಿಂದ 5 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿದೆ ಎಂದರು.

ಈ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು, ರೈತರಿಗೆ ನವೀನ ತಂತ್ರಜ್ಞಾನಗಳನ್ನು ಪರಿಚಯಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಆಸಕ್ತಿವಹಿಸಿ ಈ ಮೇಳ ಆಯೋಜಿಸುತ್ತಿದೆ. ಜಿಲ್ಲೆಯ ರೈತರು, ರೈತ ಉತ್ಪಾದಕ ಸಂಸ್ಥೆಗಳು, ಎಪಿಎಂಸಿ ವರ್ತಕರ ಸಂಘ, ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ, ಜಿಲ್ಲಾ ಪಂಚಾಯಿತಿ, ವಿವಿಧ ಸರ್ಕಾರಿ ಇಲಾಖೆಗಳು, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಶಿಮ್ಲಾದ ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಕೇಂದ್ರಗಳ ಸಹಭಾಗಿತ್ವದಲ್ಲಿ ಈ ಮೇಳ ನಡೆಯಲಿದೆ ಎಂದರು.

ADVERTISEMENT

ಆಲೂಗಡ್ಡೆ ಹೊಸ ತಳಿಗಳ ಪ್ರದರ್ಶನ, ಸುಧಾರಿತ ಸಸ್ಯ ಸಂರಕ್ಷಣಾ ವಿಧಾನಗಳ ಕುರಿತು ಮಾಹಿತಿ, ಯಾಂತ್ರೀಕರಣದ ಬಳಕೆಯ ಕುರಿತು ಅರಿವು ಮೂಡಿಸಲಾಗುವುದು. ಜೊತೆಗೆ ಬೀಜ ಉತ್ಪಾದಕರು, ಸಂಶೋಧನಾ ಸಂಸ್ಥೆಗಳು, ಸಸ್ಯ ಸಂರಕ್ಷಣಾ ಔಷಧ, ಯಾಂತ್ರೀಕರಣ ಹಾಗೂ ಸಂಸ್ಕರಣಾ ಕ್ಷೇತ್ರದ ಕಂಪನಿಗಳು ಮತ್ತು ರೈತರ ನಡುವಿನ ನೇರ ಸಂಪರ್ಕಕ್ಕೆ ವೇದಿಕೆ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು, ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಬಂಗಾಳಗಳಿಂದ ಆಲೂಗಡ್ಡೆ ಬೀಜೋತ್ಪಾದನೆ ಮಾಡುವ ರೈತರು ಮತ್ತು ಸಂಸ್ಥೆಗಳು ಭಾಗವಹಿಸಲಿದ್ದು, ಸುಮಾರು 60 ರಿಂದ 70 ಮಳಿಗೆಗಳನ್ನು ತೆರೆಯಲಾಗುತ್ತದೆ. ಈಗಾಗಲೇ ಮೇಳದ ಕುರಿತು ರೈತರಿಗೆ ತಿಳಿಸಲು ತೋಟಗಾರಿಕೆ ಇಲಾಖೆಯಿಂದ ಪೋಸ್ಟರ್ ಹಾಗೂ ಭಿತ್ತಿಪತ್ರದ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.

ಮೇಳಕ್ಕೆ ಅಂದಾಜು 40 ಸಾವಿರದಿಂದ 50 ಸಾವಿರ ರೈತರು ಮತ್ತು ಸಾರ್ವಜನಿಕರು ಭೇಟಿ ನೀಡುವ ನಿರೀಕ್ಷೆಯಿದ್ದು, ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯನ್ನು ಮತ್ತೆ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ನಿಟ್ಟಿನಲ್ಲಿ ರೈತರು, ಎಫ್‌ಪಿಒಗಳು ಹಾಗೂ ಆಲೂಗಡ್ಡೆ ಕ್ಷೇತ್ರದ ಎಲ್ಲ ಭಾಗಿದಾರರು ಮೇಳದಲ್ಲಿ ಭಾಗವಹಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮಾ, ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಆರ್. ಕೆಂಚೇಗೌಡ ಇತರೆ ಇಲಾಖೆ ಅಧಿಕಾರಿಗಳು‌ ಉಪಸ್ಥಿತರಿದ್ದರು.

ಪಂಜಾಬ್ ಇತರ ರಾಜ್ಯಗಳಿಂದ ಉತ್ತಮ ಆಲೂಗಡ್ಡೆ ಬೀಜವನ್ನು ರೈತರಿಗೆ ಪೂರೈಸುವ ನಿಟ್ಟಿನಲ್ಲಿ ಮೇಳ ಆಯೋಜಿಸಿದ್ದು ಮುಂದಿನ 2–3 ವರ್ಷ ಉತ್ತಮ ಆಲೂಗಡ್ಡೆ ಬಿತ್ತನೆ ಗುಣಮಟ್ಟದ ಬೆಳೆ ಬಂದಲ್ಲಿ ಆಲೂಗಡ್ಡೆ ಬೆಳೆಯುವ ರೈತರ ಸಂಖ್ಯೆ ಹೆಚ್ಚಲಿದೆ
ಯೋಗೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

ವಿಜ್ಞಾನಿಗಳಿಂದ ಮಾಹಿತಿ

ಆಲೂಗಡ್ಡೆಗೆ ಅಂಗಮಾರಿ ರೋಗದಿಂದಾಗಿ ಬಿತ್ತನೆ ಪ್ರಮಾಣ ಕಡಿಮೆಯಾಗುತ್ತಿದೆ. ಇಲ್ಲಿನ ರೈತರು ಹಲವಾರು ದಶಕದಿಂದ ಆಲೂಗಡ್ಡೆಗೆ ಸಾಂಪ್ರದಾಯಿಕವಾಗಿ ಬೆಳೆಯುತ್ತಿದ್ದರು. ಆದರೆ ಸೂಕ್ಷ್ಮ ಜೀವಾಣುಗಳ ರೋಗಬಾಧೆ ನಿಯಮದಂತೆ ಸಂಸ್ಕರಣೆ ಅಸಮರ್ಪಕ ಬೀಜೋಪಾಚಾರ ಸೇರಿದಂತೆ ಹಲವು ಕಾರಣಗಳಿಂದ ಅಂಗಮಾರಿ ರೋಗ ಆವರಿಸಿತು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು. ಇಲಾಖೆಯ ಅಧಿಕಾರಿಗಳು ರೈತರು ಸಂಘ–ಸಂಸ್ಥೆಗಳ ಸಭೆಯ ಬಳಿಕ ರಾಜ್ಯಮಟ್ಟದ ಆಲೂಗಡ್ಡೆ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ರೈತರಿಗೆ ಆಲೂಗಡ್ಡೆ ಕೃಷಿ ಸಂರಕ್ಷಣೆ ಹಾಗೂ ಉತ್ತಮ‌ ಇಳುವರಿ ಸೇರಿದಂತೆ ಅಗತ್ಯ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳು ವಿಜ್ಙಾನಿಗಳು ನೀಡಲಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.