ADVERTISEMENT

ಹಳೇಬೀಡು | ಕೋಡಿ ಬಿದ್ದ ದ್ವಾರಸಮುದ್ರ ಕೆರೆ: ಸಂಭ್ರಮ

ಜಲಪಾತದಂತೆ ಧುಮ್ಮಿಕ್ಕುತ್ತಿರುವ ಕೆರೆ ಕೋಡಿ, ನೀರಿನಲ್ಲಿ ಪ್ರವಾಸಿಗರು, ಸ್ಥಳೀಯರ ಸಂಭ್ರಮ

ಎಚ್.ಎಸ್.ಅನಿಲ್ ಕುಮಾರ್
Published 24 ಜೂನ್ 2025, 5:15 IST
Last Updated 24 ಜೂನ್ 2025, 5:15 IST
ಹಳೇಬೀಡಿನ ದ್ವಾರಸಮುದ್ರ ಕೆರೆಯಲ್ಲಿ ಹಾಲ್ನೊರೆಯಂತೆ ಹರಿಯುತ್ತಿರುವ ಕೋಡಿ ನೀರು
ಹಳೇಬೀಡಿನ ದ್ವಾರಸಮುದ್ರ ಕೆರೆಯಲ್ಲಿ ಹಾಲ್ನೊರೆಯಂತೆ ಹರಿಯುತ್ತಿರುವ ಕೋಡಿ ನೀರು   

ಹಳೇಬೀಡು: ಇಲ್ಲಿನ ಶಿಲ್ಪಕಲಾ ತಾಣ ಹಳೇಬೀಡಿನ ಇತಿಹಾಸ ಪ್ರಸಿದ್ಧ ದ್ವಾರಸಮುದ್ರ ಕೆರೆ ಮಳೆಯಿಂದಾಗಿ ಕೋಡಿ ಬಿದ್ದಿದ್ದು, ನೀರು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ.

ಹೊಯ್ಸಳೇಶ್ವರ ದೇವಾಲಯ ಪಕ್ಕದಲ್ಲಿಯೇ ಕೆರೆ ಇರುವುರದರಿಂದ ಪ್ರವಾಸಿಗರಿಗೆ ಆಕರ್ಷಣೀಯವಾಗಿದೆ. ಕೆರೆ ಕೋಡಿಯಲ್ಲಿ ಸೃಷ್ಟಿಯಾಗಿರುವ ಜಲಪಾತ ಹೊಯ್ಸಳರ ನಾಡಿನ ಸೊಬಗು ಹೆಚ್ಚಿಸಿದೆ. ನಯನ ಮನೋಹರ ಜಲಪಾತ ಸ್ಥಳೀಯರು ಮಾತ್ರವಲ್ಲದೆ ವಿವಿಧ ಊರಿನ ಜನರನ್ನು ಆಕರ್ಷಿಸುತ್ತಿದೆ.

ಕೋಡಿಯಲ್ಲಿ‌ ಭೋರ್ಗರೆಯತ್ತ ಹರಿಯುವ ನೀರಿನ ಶಬ್ದ ಹಳೇಬೀಡಿನ ವಸತಿ ಪ್ರದೇಶದತ್ತ ಕೇಳಿ ಬರುತ್ತಿದೆ. ಎರಡು ದಿನಗಳ ಹಿಂದೆಯೇ ಕೋಡಿ ಬಿದ್ದ ಈ ಕೆರೆಯನ್ನು ಜನರು ಬಿಡುವಿಲ್ಲದಂತೆ ವೀಕ್ಷಿಸುತ್ತಿದ್ದಾರೆ.

ADVERTISEMENT

‘ಕೋಡಿ ಬಿದ್ದ ದಿನ ತಡರಾತ್ರಿ ನೀರು ಹರಿಯುವ ವೇಗ ಹೆಚ್ಚಾಯಿತು. ನಾವು ಕಗ್ಗತ್ತಲಿನಲ್ಲಿಯೇ ಕೆರೆ ಕೋಡಿ ವೀಕ್ಷಿಸಿದೆವು. ಸಮಯ ಕಳೆದಂತೆ ನೀರಿನ ವೇಗ ಹೆಚ್ಚಾಯಿತು. ನೀರಿನ ರಭಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿ ದಿವಸ ಬೆಳಿಗ್ಗೆ ಹಾಗೂ ಸಂಜೆ ಕೆರೆ ವೀಕ್ಷಣೆ ಮಾಡುತ್ತಿದ್ದೇವೆ’ ಎಂದು ಅಡುಗೆ ಮಂಜಣ್ಣ ಹೇಳಿದರು.

ಮುಂಜಾನೆ ಸೂರ್ಯೋದಯಕ್ಕೂ ಮೊದಲೇ ಜನರು ಕೆರೆಯತ್ತ ಜಮಾಯಿಸುತ್ತಿದ್ದಾರೆ. ಅಲೆಅಲೆಯಾಗಿ ಹರಿಯುತ್ತಿರುವ ನೀರಿಗೆ ಸಾಕಷ್ಟು ಮಂದಿ ಮೈಯೊಡ್ಡಿ ಸಂಭ್ರಮಿಸುತ್ತಿದ್ದಾರೆ. ಬೂದಿಗುಂಡಿ ವಸತಿ ಪ್ರದೇಶದಲ್ಲಿ ಹಾದು ಹೋಗಿರುವ ಹಳ್ಳದ ತಪ್ಪಲಿನಲ್ಲಿ ಒತ್ತೊತ್ತಾಗಿ ಕಿಷ್ಕಿಂದೆಯಲ್ಲಿರುವ ಮನೆಗಳ ನಡುವೆ ಜುಳುಜುಳು ಹರಿಯುವ ನೀರಿನ ನಾದ ಕಿವಿಗೆ ಅಪ್ಪಳಿಸುವಂತೆ ಕೇಳಿ ಬರುತ್ತಿದೆ. ನೀರಿನ ವಯ್ಯಾರದ ನರ್ತನವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ.

ಕೋಡಿಯಲ್ಲಿ ರಭಸವಾಗಿ ಧುಮುಕುವ ನೀರು ಕೆರೆ ಪಕ್ಕದ ರಸ್ತೆಯಲ್ಲಿ ಸಂಚರಿಸುವವರಿಗೂ ಆಕರ್ಷಣೀಯವಾಗಿದೆ. ವಾಹನಗಳನ್ನು ನಿಲ್ಲಿಸಿ ಕೆರೆ ಕೋಡಿಯ ಚೆಲುವಿನ ಜಲಧಾರೆಯನ್ನು ವೀಕ್ಷಿಸಿ ಮುಂದೆ ಸಾಗುತ್ತಿದ್ದಾರೆ.

ಬಿಸಿಲಿನ ಧಗೆಗೆ ಬಾರಿ ಪ್ರಮಾಣದಲ್ಲಿ ಕೆರೆ ನೀರು ಇಳಿಕೆಯಾಗಿತ್ತು. ಹಳ್ಳ ಹರಿಯುವ ಜೋರು ಮಳೆ ಒಂದೆರೆಡು ದಿನ ಬಂದು ನಾಪತ್ತೆಯಾಯಿತು. ಎತ್ತಿನಹೊಳೆ ಯೋಜನೆಯ ನೀರನ್ನು ನಾಲೆಯಿಂದ ಹಳ್ಳಕ್ಕೆ ಹರಿಸಿದ್ದರಿಂದ ಕೆರೆ ಬೇಗ ಭರ್ತಿಯಾಗಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಏರಿಕೆ ಆಗಿರುವುದರಿಂದ
ರೈತರಲ್ಲಿ ಮಂದಹಾಸ ಕಂಡು ಬಂದಿದೆ.

ಹಳೇಬೀಡಿನ ದ್ವಾರಸಮುದ್ರ ಕೆರೆ ಕೋಡಿಯಲ್ಲಿ ಪ್ರವಾಸಿಗರ ಸಂಭ್ರಮ.
ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ನೀರು ಹೋಯ್ಸಳರ ನಾಡಿನ ಸೊಬಗು ಹೆಚ್ಚಿಸಿದ ಜಲಪಾತ ಎರಡು ದಿನಗಳ ಹಿಂದೆ ಕೋಡಿಬಿದ್ದ ಕೆರೆ
ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದರಿಂದ ಎರಡು ವರ್ಷದಿಂದ ದ್ವಾರಸಮುದ್ರ ಕೆರೆ ಭರ್ತಿಯಾಗಿದೆ. ವೇದಾವತಿ ನದಿಯಲ್ಲಿ ನೀರು ಹರಿಯುವ ಕೋಡಿ ನೀರು ವಾಣಿವಿಲಾಸ ಜಲಾಶಯ ತಲುಪುತ್ತಿದೆ.
ಶರತ್ ನಿಂಗಪ್ಪ ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ

ಸ್ವಚ್ಛತೆಗೆ ಜನರ ಸಹಕಾರ ಅಗತ್ಯ

ಹೊಯ್ಸಳ ಸಾಮ್ರಾಜ್ಯ ಹಳೇಬೀಡನ್ನು ರಾಜಧಾನಿ ಮಾಡುವ ಮೊದಲೇ ನಿರ್ಮಾಣವಾಗಿರುವ ದ್ವಾರಸಮುದ್ರ ಕೆರೆ ಇತಿಹಾಸದ ಆಮೂಲ್ಯ ಸಾಕ್ಷಿಯಾಗಿದೆ. ಕೆರೆ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಕ್ರಮ ಕೈಗೊಂಡಿದೆ. ಕೆಲವೇ ಮಂದಿಯಿಂದ ಕೆರೆಯ ಅಂದಕ್ಕೆ ಧಕ್ಕೆಯಾಗಿದೆ. ಗ್ರಾಮ ಪಂಚಾಯಿತಿಯಿಂದ ಕೆರೆ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳಲಾಗಿತ್ತು. ಕೆರೆಯ ಸುತ್ತಮುತ್ತ ಕಸ ಹಾಕದಂತೆ ಜನರಿಗೆ ತಿಳಿವಳಿಕೆ ನೀಡಲಾಗಿತ್ತು. ಸಾಕಷ್ಟು ಮಂದಿ ಕೆರೆ ಸುತ್ತಮುತ್ತ ಕಸ ಹಾಕುವುದನ್ನು ನಿಲ್ಲಿಸಿದ್ದಾರೆ. ಕೆಲವೇ ಮಂದಿ ಉಡಾಫೆಯಿಂದ ಕಸ ಹಾಕುತ್ತಿರುವುದರಿಂದ ಕೆರೆ ಅಂದ ಹೆಚ್ಚಿಸಲು ತೊಡಕಾಗಿದೆ. ಜನರು ಕೆರೆ ಬಳಿ ಕಸ ಸುರಿಯುವ ಬದಲು ತಮ್ಮ ಬೀದಿಗೆ ಕಸದ ವಾಹನ ಬಂದಾಗ ಹಾಕಬೇಕು. ಕೆರೆ ಸ್ವಚ್ಛತೆಗೆ ಜನರ ಸಹಕಾರ ಅಗತ್ಯ’ ಎಂದು ಪಿಡಿಒ ಎಸ್.ಸಿ.ವಿರೂಪಾಕ್ಷ ತಿಳಿಸಿದರು.

ಸೆಲ್ಫಿಗೆ ಮುಗಿಬಿದ್ದ ಯುವಕರು

‘ಕೆರೆ ಕೋಡಿಯಲ್ಲಿ ಮೊಬೈಲ್‌ ಪೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯುವಕರು ಅಪಾಯ ಮರೆತು ಮುನ್ನುಗ್ಗುತ್ತಿದ್ದಾರೆ. ಕೋಡಿಗೆ ಅಡ್ಡಲಾಗಿ ಕಟ್ಟಿರುವ ಕಟ್ಟೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ‌ ಕಂಡು ಬರುತ್ತಿದೆ. ಸ್ವಲ್ಪ ಯಾಮಾರಿದರೂ ಕಾಲು ಜಾರಿ ಕೆರೆಗೆ ಬೀಳುವ ಸಾಧ್ಯತೆ ಇದೆ. ಕೋಡಿ ನೀರಿನಲ್ಲಿ ಬೇಕಾಬಿಟ್ಟಿ ಓಡಾಡಿದರೂ ಬಿದ್ದು ಅಪಾಯ ಸಂಭವಿಸಬಹುದು. ಹರಿಯುವ ನೀರಿನ ವೇಗ ಹೆಚ್ಚಾಗಿರುವುದರಿಂದ ಸಣ್ಣ ನೀರಾವರಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯವರು ತಂತಿ ಬೇಲಿ ಹಾಕಬೇಕು. ಜನರು ನೀರಿಗೆ ಇಳಿಯದೆ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು’ ಎಂದು ಸಿದ್ದಾಪುರ ರಾಜಶೇಖರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.