ADVERTISEMENT

Karnataka Rains | ಹಾಸನ, ಕೊಡಗಿನಲ್ಲಿ ನಿಲ್ಲದ ಮಳೆ; ಹಬ್ಬಿದ ಮಂಜು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 3:11 IST
Last Updated 19 ಆಗಸ್ಟ್ 2025, 3:11 IST
ಸಕಲೇಶಪುರ ತಾಲ್ಲೂಕಿನ ಹಿರಿದನಹಳ್ಳಿಯ ಕಿರಣ್ ಅವರ ಅರ್ಧ ಎಕರೆ ಕಾಫಿ ತೋಟ ಸಂಪೂರ್ಣ ಕುಸಿದಿದ್ದು, ಕಾಫಿ ಗಿಡಗಳು ಮಣ್ಣಿನಲ್ಲಿ ಮುಚ್ಚಿವೆ.
ಸಕಲೇಶಪುರ ತಾಲ್ಲೂಕಿನ ಹಿರಿದನಹಳ್ಳಿಯ ಕಿರಣ್ ಅವರ ಅರ್ಧ ಎಕರೆ ಕಾಫಿ ತೋಟ ಸಂಪೂರ್ಣ ಕುಸಿದಿದ್ದು, ಕಾಫಿ ಗಿಡಗಳು ಮಣ್ಣಿನಲ್ಲಿ ಮುಚ್ಚಿವೆ.   

ಮೈಸೂರು: ಮೈಸೂರು ಭಾಗದ ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯು ಕೊಡಗಿಗೆ ಆರೆಂಜ್ ಅಲರ್ಟ್ ನೀಡಿದೆ.

ಕೊಡಗಿನಲ್ಲಿ ಮಂಜು ಆವರಿಸಿದೆ. ಸೋಮವಾರಪೇಟೆ ತಾಲ್ಲೂಕಿನ ಮುಟ್ಲು ಸಮೀಪ ರಸ್ತೆ ಸ್ಪಷ್ಟವಾಗಿ ಕಾಣದೆ, ಸಾರಿಗೆ ಬಸ್ ರಸ್ತೆಯ ದಿಬ್ಬಕ್ಕೆ ಡಿಕ್ಕಿ ಹೊಡೆದಿತ್ತು. ಯಾರಿಗೂ ಗಾಯವಾಗಿಲ್ಲ.

ಸಕಲೇಶಪುರ ತಾಲ್ಲೂಕಿನ ದೋಣಿಗಲ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆಗೋಡೆ ಕುಸಿದಿದೆ. ಚತುಷ್ಪಥ ರಸ್ತೆ ಸುರಕ್ಷತೆಗಾಗಿ ಕಟ್ಟಿದ್ದ ಗೇಬಿಯನ್ ವಾಲ್‌ ಜಖಂಗೊಂಡಿದೆ.  

ADVERTISEMENT

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗೋಸಾಯಿಘಾಟ್‌, ನಿಮಿಷಾಂಬ ದೇವಾಲಯಗಳು ಭಾಗಶಃ ಮುಳುಗಿದ್ದು, ವೆಲ್ಲೆಸ್ಲಿ ಸೇತುವೆಯವರೆಗೆ ನೀರು ಬಂದಿದೆ.

ಗೌತಮ ಕ್ಷೇತ್ರ ದ್ವೀಪದ ಸಂಪರ್ಕ ಕಡಿತವಾಗಿದೆ. ಗಜಾನನ ಸ್ವಾಮೀಜಿ ಸೇರಿ ನಾಲ್ವರು ಸಿಕ್ಕಿಬಿದ್ದಿದ್ದಾರೆ. ಕಾವೇರಿ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಉತ್ತರಪ್ರದೇಶದ ಲಕ್ಷ್ಮಣ್‌ ಅವರನ್ನು ರಕ್ಷಿಸಲಾಗಿದೆ. 

ಶ್ರೀರಂಗಪ‍ಟ್ಟಣ ಸಮೀಪದ ಗಂಜಾಂ ಸಮೀಪದ ದೊಡ್ಡ ಗೋಸಾಯಿಘಾಟ್‌ ಬಳಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು ತೀರದ ದೇವಾಲಯಗಳು ಜಲಾವೃತವಾಗಿವೆ

1.01 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ

ಮೈಸೂರು: ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುರದಿಂದ ಹಾರಂಗಿ ಕೆ.ಆರ್‌.ಎಸ್‌ ಹಾಗೂ ಹೇಮಾವತಿ ಜಲಾಶಯದ ಒಳ ಹರಿವಿನ ಪ್ರಮಾಣ ನಿರಂತರವಾಗಿ ಹೆಚ್ಚಾಗುತ್ತಿದೆ.  ಕೆಆರ್‌ಎಸ್‌ನಿಂದ ಸೋಮವಾರ 1.01 ಲಕ್ಷ ಕ್ಯೂಸೆಕ್‌ ನೀರನ್ನು ಹೊರಕ್ಕೆ ಹರಿಸಿದ್ದು ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.