ADVERTISEMENT

ಆಲೂರು: ವಾರ ಮಳೆಯಾದರೂ ಭರ್ತಿಯಾಗದ ಜಲಾಶಯ

ಭರ್ತಿಯಾಗದ 1.51 ಟಿಎಂಸಿ ಅಡಿ ಸಾಮರ್ಥ್ಯದ ವಾಟೆಹೊಳೆ ಜಲಾಶಯ

ಎಂ.ಪಿ.ಹರೀಶ್
Published 30 ಜುಲೈ 2023, 5:19 IST
Last Updated 30 ಜುಲೈ 2023, 5:19 IST
ಅರ್ಧ ಭಾಗ ತುಂಬಿರುವ ವಾಟೆಹೊಳೆ ಜಲಾಶಯ
ಅರ್ಧ ಭಾಗ ತುಂಬಿರುವ ವಾಟೆಹೊಳೆ ಜಲಾಶಯ   

ಆಲೂರು: ವಾರದಿಂದ ಮಳೆಯಾದರೂ ಕೇವಲ 1.51 ಟಿಎಂಸಿ ಅಡಿ ಸಾಮರ್ಥ್ಯವುಳ್ಳ ವಾಟೆಹೊಳೆ ಜಲಾಶಯ ಭರ್ತಿಯಾಗಿಲ್ಲ. 2011ರಲ್ಲಿ ಹಾಗೂ 2018ರಿಂದ 2022ರವರೆಗೆ ನಿರಂತರವಾಗಿ ಜಲಾಶಯ ಭರ್ತಿಯಾಗಿತ್ತು. ಕಳೆದ ವರ್ಷ ಈ ವೇಳೆಗೆ ಜಲಾಶಯ ಪೂರ್ಣ ತುಂಬಿತ್ತು.

ಈ ವರ್ಷ ಮುಂಗಾರು ವಿಳಂಬವಾಗಿದ್ದು, ಜುಲೈ ಕೊನೆಯಲ್ಲಿ ಸುರಿದ ಸೋನೆ ಮಳೆ ಹೊರತುಪಡಿಸಿದರೆ ಈವರೆಗೆ ನೀರು ಹರಿಯುವಂತಹ ಮಳೆಯಾಗಲಿಲ್ಲ. ಇದರಿಂದಾಗಿ ಜಲಾಶಯ ಶೇ 60ರಷ್ಟು ಭರ್ತಿಯಾಗಿದೆ. ಮುಂಬರುವ ಅಡ್ಡ ಮಳೆಯಲ್ಲಿ ನೀರು ಸಂಗ್ರಹವಾದರೆ ಮಾತ್ರ ಜಲಾಶಯ ಭರ್ತಿಯಾಗುತ್ತದೆ. ಇಲ್ಲದಿದ್ದರೆ ಬೇಸಿಗೆ ವೇಳೆಗೆ ಜಲಾಶಯ ಬರಿದಾಗುವ ಆತಂಕ ಕಾಡುತ್ತಿದೆ.

ಬೇಲೂರು ತಾಲ್ಲೂಕಿಗೊಳಪಡುವ 10 ಕಿ.ಮೀ. ಎಡದಂಡೆ ನಾಲೆ ಮತ್ತು ಆಲೂರು ತಾಲ್ಲೂಕಿಗೊಳಪಡುವ 40 ಕಿ.ಮೀ. ಬಲದಂಡೆ ನಾಲೆಯಲ್ಲಿ ಜಲಾಶಯದಿಂದ ನೀರು ಹಾಯಿಸಲಾಗುತ್ತದೆ. ಜಲಾಶಯ ಭರ್ತಿಯಾದರೆ ಮಾತ್ರ ನಾಲೆಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕೇವಲ 10 ಕಿ.ಮೀ. ನೀರು ಹರಿಸುವುದೂ ಕಷ್ಟಸಾಧ್ಯ ಎನ್ನುವುದು ಎಂಜಿನಿಯರ್‌ಗಳ ಮಾತು.

ADVERTISEMENT

ಜಲಾಶಯದಲ್ಲಿ ದೊಡ್ಡ ಪ್ರಮಾಣದ ನೀರು ಸಂಗ್ರಹವಾಗುವುದಿಲ್ಲ. ಎರಡು ದಶಕಗಳ ಹಿಂದೆ ಮೊದಲ ಬಾರಿ ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಮುಖ್ಯ ಎಂಜಿನಿಯರ್‌ ಒಬ್ಬರು, ಜಲಾಶಯವನ್ನು ನೋಡಿ, ಇದೊಂದು ದೊಡ್ಡ ಕೆರೆ ಎನಿಸುತ್ತದೆ ಎಂದು ತಮ್ಮ ಅಭಿಪ್ರಾಯಪಟ್ಟಿದ್ದರು.

ಅರೆಹಳ್ಳಿ ಮತ್ತು ಬಿಕ್ಕೋಡು ಹೋಬಳಿಯಲ್ಲಿ ವ್ಯಾಪಕವಾಗಿ ಮಳೆಯಾದರೆ ಮಾತ್ರ ಈ ಜಲಾಶಯಕ್ಕೆ ನೀರು ಹರಿದು ಬರುತ್ತದೆ. ಈವರೆಗೆ 15 ಕಿ. ಮೀ. ಬಲದಂಡೆ ಮತ್ತು 10 ಕಿ.ಮೀ. ಎಡದಂಡೆ ನಾಲೆ ಪ್ರದೇಶಕ್ಕೊಳಪಡುವ ರೈತರು ಮಾತ್ರ ಪ್ರಯೋಜನ ಪಡೆಯುತ್ತಿದ್ದಾರೆ.

ಹಂಪನಕುಪ್ಪೆ ಬಳಿ ಬಲದಂಡೆ ಉಪ ನಾಲೆ ನಿರ್ಮಿಸಿದ್ದು ಮಳೆ ನೀರು ಮಾತ್ರ ಹರಿಯುತ್ತದೆ. ಜಲಾಶಯದ ನೀರು ಇಲ್ಲಿ ಹರಿದಿಲ್ಲ. ನಾಲೆಯಲ್ಲಿ ಗಿಡಗಂಟಿ ಬೆಳೆದಿವೆ.
-ವೆಂಕಟಯ್ಯ ಮಾದಿಗ ದಂಡೋರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ
ಜಲಾಶಯದಿಂದ ನಾಲೆ ಮೂಲಕ 15 ಕಿ.ಮೀ. ದೂರದ 5500 ಎಕರೆಗೆ ನೀರು ಹರಿಸಲು ಅವಕಾಶವಿದೆ. ಮುಂದಕ್ಕೆ ಹರಿಸಲು ನೀರು ಸಾಕಾಗುತ್ತಿಲ್ಲ.
-ಧರ್ಮರಾಜ್ ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.