ADVERTISEMENT

Karnataka Rains: ಭತ್ತ, ರಾಗಿ ಬೆಳೆಗಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 5:54 IST
Last Updated 12 ಜನವರಿ 2026, 5:54 IST
ಕೊಣನೂರು ಹೋಬಳಿಯ ಕಟ್ಟೇಪುರದಲ್ಲಿ ಭತ್ತದ ಮೆದೆಗಳಿಗೆ ಮಳೆಯ ನೀರು ಸೇರದಂತೆ ಟಾರ್ಪಾಲು ಮುಚ್ಚಿರುವುದು
ಕೊಣನೂರು ಹೋಬಳಿಯ ಕಟ್ಟೇಪುರದಲ್ಲಿ ಭತ್ತದ ಮೆದೆಗಳಿಗೆ ಮಳೆಯ ನೀರು ಸೇರದಂತೆ ಟಾರ್ಪಾಲು ಮುಚ್ಚಿರುವುದು   

ಕೊಣನೂರು: ಹೋಬಳಿಯ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಸುರಿದ ಸೋನೆ ಮಳೆಯು ರೈತರನ್ನು ಪರದಾಡಿಸಿತು. ಹಗುರ ಮಳೆಯು ಭತ್ತ ಮತ್ತು ರಾಗಿ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. 

ಹಾರಂಗಿ, ಕಟ್ಟೇಪುರ ನಾಲೆಗಳ ಅಚ್ಚುಕಟ್ಟು ವ್ಯಾಪ್ತಿಯ ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ವ್ಯಾಪ್ತಿಯಲ್ಲಿ ಭತ್ತ ಮತ್ತು ರಾಗಿ ಬೆಳೆಗಳ ಕಟಾವು ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಕೆಲ ರೈತರು ಬೆಳೆ ಕಟಾವು ಮಾಡಿ ಮೆದೆ ಹಾಕಿದ್ದು, ಕೆಲವರು ಬೆಳೆಯನ್ನು ಕೊಯ್ಲು ಮಾಡಿ ಜಮೀನಿನಲ್ಲೇ ಬಿಟ್ಟಿದ್ದಾರೆ.

ಭಾನುವಾರ ಬೆಳಿಗ್ಗೆ ಮಳೆಯು ಪ್ರಾರಂಭವಾಗುತ್ತಿದ್ದಂತೆ ಮೆದೆ ಹಾಕಿರುವ ರೈತರು ಮೆದೆಯೊಳಕ್ಕೆ ಮಳೆಯ ನೀರು ಇಳಿದು ಭತ್ತದ ಹುಲ್ಲು ಮತ್ತು ತೆನೆಗಳು ಹಾಳಾಗದಂತೆ ಟಾರ್ಪಾಲು ಮುಚ್ಚಿದರು. ಅಕಾಲಿಕ ಮಳೆ ಮುಂದುವರಿದರೆ ಕಟಾವಾಗಿರುವ ಬೆಳೆಯು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಭಾನುವಾರ ಬೆಳಿಗ್ಗೆ ಮಳೆ ಸುರಿಯಲು ಪ್ರಾರಂಭವಾದ ತಕ್ಷಣ ರಾಗಿ ಕಂತೆಕಟ್ಟುತ್ತಿದ್ದುದನ್ನು ನಿಲ್ಲಿಸಿ ಮನೆಗೆ ಬಂದೆವು. ಮಳೆಯು ಮುಂದುವರಿದು ರಾಗಿ ಮತ್ತು ಭತ್ತದ ಹುಲ್ಲು ಮತ್ತು ತೆನೆ ಹಾಳಾಗುವ ಭಯವಿತ್ತು. ಮಧ್ಯಾಹ್ನದ ನಂತರ ಮೋಡಕವಿದ ವಾತಾವರಣವು ಸ್ವಲ್ಪ ಮರೆಯಾಗಿ ಸಂಜೆ ವೇಳೆಗೆ ಬಿಸಿಲು ಕಾಣಿಸಿಕೊಂಡಿತು ಎಂದು ಕಡವಿನಹೊಸಳ್ಳಿಯ ರೈತ ಕೃಷ್ಣೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.