ADVERTISEMENT

ನೀರು ಸಿಗುವವರೆಗೂ ಹೋರಾಟ ಮಾಡುವೆ: ಶಾಸಕ ಕೆ.ಎಂ. ಶಿವಲಿಂಗೆಗೌಡ ಆಕ್ರೋಶ

ಭದ್ರ ಮೇಲ್ದಂಡೆ ಯೋಜನೆಯಲ್ಲಿ ಮೋಸ: ಶಾಸಕ ಕೆ.ಎಂ. ಶಿವಲಿಂಗೆಗೌಡ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 12:49 IST
Last Updated 26 ನವೆಂಬರ್ 2020, 12:49 IST

ಹಾಸನ: ‘ಭದ್ರ ಮೇಲ್ದಂಡೆ ಯೋಜನೆಯಲ್ಲಿ ಅರಸೀಕೆರೆ ತಾಲ್ಲೂಕಿಗೆ ನೀರು ನೀಡದೆ ಮೋಸ ಮಾಡಲಾಗುತ್ತಿದೆ. ನೀರು
ಸಿಗುವವರೆಗೂ ಹೋರಾಟ ಮಾಡುತ್ತೇನೆ’ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಯೋಜನೆಯಲ್ಲಿ ನೆಪ ಮಾತ್ರಕ್ಕೆ ಅರಸೀಕೆರೆ ಸೇರಿಸಿ, ಒಂದು ಕೆರೆ ತುಂಬಿಸಲು ಅವಕಾಶ ಕಲ್ಪಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿಲಾಗಿದೆ. ಕೃಷ್ಣ ಕಣಿವೆಯಲ್ಲಿ ನೀರು ಪಡೆಯಲು ಹಕ್ಕಿದೆ. ಕ್ಷೇತ್ರದ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅರಸೀಕೆರೆ ಕ್ಷೇತ್ರಕ್ಕೆ ಕನಿಷ್ಟ 20 ಕೆರೆಗಳಿಗೆ ನೀರು ದೊರಕಿಸಿಕೊಡಬೇಕು. ಜಾವಗಲ್‌, ಬಾಣಾವರ, ಕಣಕೆಟ್ಟೆಗೆ ನೀರು ಕೊಡಲೇಬೇಕು. ಕೆ.ಸಿ.ರೆಡ್ಡಿ ವರದಿ ಹಾಗೂ ದೇವೇಗೌಡರು ಅಧಿವೇಶನದಲ್ಲಿ ಏನು ಹೇಳಿದ್ದಾರೆಂಬ ಮಾಹಿತಿ ಇದೆ’ ಎಂದರು.

ಎತ್ತಿನಹೊಳೆ ಯೋಜನೆ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡಿಲ್ಲ. ಲಾರಿಗಳ ಸಂಚಾರದಿಂದ ಆ ಭಾಗದ ಬಹುತೇಕ ರಸ್ತೆಗಳು ಹಾಳಾಗಿವೆ. ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಎಚ್‌.ಕೆ. ಕುಮಾರಸ್ವಾಮಿ ಹಾಗೂ ಕೆ.ಎಸ್‌. ಲಿಂಗೇಶ್‌ ಆಗ್ರಹಿಸಿದರು.

ADVERTISEMENT

ಕೆಡಿಪಿ ಸಭೆಯ ಅಜೆಂಡಾದಲ್ಲಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಮಾಹಿತಿ ಸೇರಿಸದೇ ಇರುವ ಬಗ್ಗೆ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ದನಗೂಡಿಸಿದ ಸಚಿವರು, ‘ಇದು ಕೆಡಿಪಿ ಸಭೆ ಎಂದು ಗೊತ್ತೋ, ಇಲ್ಲವೋ. ಅಂದಾಜು 12 ಸಾವಿರ ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಆದರೂ ಅಜೆಂಡಾ ಪುಸ್ತಕದಲ್ಲಿ ಪ್ರಗತಿ ವರದಿ ಯಾಕೆ ಸೇರಿಸಿಲ್ಲ’ ಎಂದು ಎತ್ತಿನಹೊಳೆ ಯೋಜನೆ ಎಂಜಿನಿಯರ್‌ನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.